News

ಪೆಟ್ರೋಲ್ ಗೆ ಜಿಎಸ್ಟಿ: ಕೇಂದ್ರದ ನಿಲುವು ಕೇಳಿದ ಹೈಕೋರ್ಟ್

Share It

ಚೆನ್ನೈ: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯಾಪ್ತಿಗೆ ಪೆಟ್ರೋಲ್ ಅನ್ನು ಕೂಡ ಸೇರಿಸಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಕೇಂದ್ರ ಸರ್ಕಾರದ ನಿಲುವು ಕೇಳಿ ಮದ್ರಾಸ್ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಅನ್ನು ಕೂಡ ಜಿಎಸ್ಟಿ ವ್ಯಾಪ್ತಿಗೆ ತಂದು ಕೈಗೆಟಕುವ ದರದಲ್ಲಿ ಮತ್ತು ಒಂದೇ ಬೆಲೆಯಲ್ಲಿ ದೇಶಾದ್ಯಂತ ಮಾರಾಟ ಮಾಡಲು ನಿರ್ದೇಶಿಸಬೇಕು ಎಂದು ಕೋರಿ ವಕೀಲ ಸಿ. ಕನಕರಾಜು ಎಂಬುವರು ಮದ್ರಾಸ್ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಈ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಡಿ.ಕೃಷ್ಣಕುಮಾರ್ ಹಾಗೂ ನ್ಯಾ.ಪಿ.ಬಿ ಬಾಲಾಜಿ ಅವರಿದ್ದ ವಿಭಾಗೀಯ ಪೀಠ, ಪೆಟ್ರೋಲ್ ಹಾಗೂ ಡೀಸೆಲ್ ಅನ್ನು ಜಿಎಸ್ಟಿ ವ್ಯಾಪ್ತಿಗೆ ತರುವ ಸಾಧ್ಯತೆ ಕುರಿತಂತೆ ಪ್ರಮಾಣಪತ್ರ ಸಲ್ಲಿಸಲು ನಿರ್ದೇಶಿಸಿ, ವಿಚಾರಣೆ ಮುಂದೂಡಿದೆ.

ಇದಕ್ಕೂ ಮುನ್ನ ನಡೆದ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಇಳಿಯುತ್ತಿದೆ. ಅದರಂತೆ ಈಗಿನ ಪೆಟ್ರೋಲ್ ಬೆಲೆ 100 ರೂ.ನಿಂದ 70 ರೂ.ಗೆ ಇಳಿಯಬೇಕಿತ್ತು. ಆದರೆ, ವ್ಯಾಟ್ (Value Added Tax) ಸೇರಿದಂತೆ ಇತರೆ ತೆರಿಗೆಗಳ ಪರಿಣಾಮವಾಗಿ ಪೆಟ್ರೋಲ್ ಬೆಲೆ ಇಳಿಯುವ ಬದಲಿಗೆ ದಿನವೂ ಏರಿಕೆಯಾಗುತ್ತಿದೆ. ಆದ್ದರಿಂದ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಅನ್ನು ಜಿಎಸ್ಟಿ ವ್ಯಾಪ್ತಿಗೆ ತರಲು ಕೇಂದ್ರಕ್ಕೆ ನಿರ್ದೇಶಿಸಿಬೇಕು ಎಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ ಇಂತಹ ವಿಚಾರಗಳು ಸರ್ಕಾರದ ನೀತಿ ನಿರ್ಣಯಕ್ಕೆ ಸಂಬಂಧಿಸಿದ್ದಾಗಿವೆ, ನ್ಯಾಯಾಲಯ ನೇರವಾಗಿ ಮಧ್ಯಪ್ರವೇಶಿಸಲಾಗದು ಎಂದು ಅಭಿಪ್ರಾಯಪಟ್ಟು, ಕೇಂದ್ರಕ್ಕೆ ನೋಟಿಸ್ ಜಾರಿ ಮಾಡಿ ವಿವರಣೆ ಸಲ್ಲಿಸುವಂತೆ ಸೂಚಿಸಿದೆ.


Share It

You cannot copy content of this page