ಜಬಲ್ಪುರ್: ವೃದ್ಧ ಪೋಷಕರನ್ನು ಪೋಷಿಸುವುದು ಮಕ್ಕಳ ಕರ್ತವ್ಯ. ಆಸ್ತಿ ಹಂಚಿಕೆ ಸರಿಯಾಗಿ ಆಗಿರಲಿ ಅಥವಾ ಆಗಿಲ್ಲದಿರಲಿ. ಮಕ್ಕಳಾದವರು ತಂದೆ-ತಾಯಿಯನ್ನು ನೋಡಿಕೊಳ್ಳಬೇಕು. ಇದು ಅವರ ಜವಾಬ್ದಾರಿ ಎಂದು ಮಧ್ಯಪ್ರದೇಶ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ತಾಯಿಗೆ ಪ್ರತಿ ತಿಂಗಳೂ 3000 ರೂಪಾಯಿ ಜೀವನಾಂಶ ನೀಡುವಂತೆ ಅಡಿಷನಲ್ ಕಲೆಕ್ಟರ್ ನೀಡಿರುವ ಆದೇಶವನ್ನು ರದ್ದುಪಡಿಸಬೇಕು ಎಂದು ಕೋರಿ ಮಧ್ಯಪ್ರದೇಶದ ಗೋವಿಂದ್ ಎಂಬಾತ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ಎಸ್ ಅಹ್ಲುವಾಲಿಯಾ ಅವರಿದ್ದ ಪೀಠ ಅರ್ಜಿಯನ್ನು ವಜಾಗೊಳಿಸಿತಲ್ಲದೇ, ಆಸ್ತಿ ಸರಿಯಾಗಿ ಹಂಚಿಕೆಯಾಗಿಲ್ಲ ಎಂಬ ಕಾರಣಕ್ಕೆ ಜೀವನಾಂಶ ನೀಡಲಾಗದು ಎಂದು ಹೇಳುವಂತಿಲ್ಲ ಸ್ಪಷ್ಟಪಡಿಸಿದೆ.
ಹೈಕೋರ್ಟ್ ತನ್ನ ತೀರ್ಪಿನಲ್ಲಿ, “ಪೋಷಕರಿಗೆ ಜೀವನಾಂಶ ನೀಡುವ ಪ್ರಶ್ನೆಯು ಮಕ್ಕಳಿಗೆ ಎಷ್ಟು ಆಸ್ತಿಯನ್ನು ನೀಡಲಾಗಿದೆ ಎಂಬುದರ ಮೇಲೆ ಅವಲಂಬಿತವಾಗಿರುವುದಿಲ್ಲ. ಹೆತ್ತವರನ್ನು ನೋಡಿಕೊಳ್ಳುವುದು ಮಕ್ಕಳ ಕರ್ತವ್ಯ. ಆಸ್ತಿ ಹಂಚಿಕೆಯು ಅಸಮಾನವಾಗಿದ್ದರೆ, ಸಿವಿಲ್ ಮೊಕದ್ದಮೆ ಸಲ್ಲಿಸಲು ಅವಕಾಶವಿದೆ. ಆದರೆ ಅವರು ತಮ್ಮ ತಾಯಿಗೆ ಜೀವನಾಂಶವನ್ನು ಪಾವತಿಸುವ ಹೊಣೆಗಾರಿಕೆಯಿಂದ ತಪ್ಪಿಸಿಕೊಂಡು ಓಡಿ ಹೋಗಲು ಸಾಧ್ಯವಿಲ್ಲ” ಎಂದು ಹೇಳಿದೆ.
ಪ್ರಕರಣದ ಹಿನ್ನೆಲೆ: ಮಧ್ಯಪ್ರದೇಶದ ನಿವಾಸಿಯಾಗಿರುವ ವೃದ್ಧ ಮಹಿಳೆಗೆ ನಾಲ್ವರು ಗಂಡು ಮಕ್ಕಳಿದ್ದು, ಅವರು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಆರೋಪಿಸಿ ಹಿರಿಯ ನಾಗರಿಕರು ಮತ್ತು ಪೋಷಕರ ಕಲ್ಯಾಣ ಮತ್ತು ನಿರ್ವಹಣೆ ಕಾಯ್ದೆ 2007ರ ಸೆಕ್ಷನ್ 16 ರ ಅಡಿಯಲ್ಲಿ ನ್ಯಾಯಾಧಿಕರಣದ ಮುಂದೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ತಾನು ಆಸ್ತಿಯನ್ನು ಮಕ್ಕಳು ನೋಡಿಕೊಳ್ಳುತ್ತಾರೆಂಬ ಆಧಾರದಲ್ಲಿ ಹಂಚಿಕೆ ಮಾಡಿದ್ದು, ಇದೀಗ ನಿರ್ಹವಣೆ ಮಾಡುತ್ತಿಲ್ಲ ಎಂದು ಆರೋಪಿಸಿದ್ದರು.
ನ್ಯಾಯಾಧಿಕರಣ ವೃದ್ಧೆಗೆ ಆಕೆಯ ನಾಲ್ವರು ಮಕ್ಕಳೂ ತಲಾ 3000 ರೂಪಾಯಿಯಂತೆ ಪ್ರತಿ ತಿಂಗಳು 12 ಸಾವಿರ ರೂಪಾಯಿ ಜೀವನಾಂಶ ಪಾವತಿಸುವಂತೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಓರ್ವ ಮಗ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ತನಗೆ ಆಸ್ತಿ ಹಂಚಿಕೆ ಮಾಡಿಲ್ಲ. ಹೀಗಾಗಿ, ತಾಯಿಗೆ ಪ್ರತಿ ತಿಂಗಳೂ 3000 ರೂಪಾಯಿ ಜೀವನಾಂಶ ನೀಡುವಂತೆ ಹೊರಡಿಸಿರುವ ಆದೇಶ ಸೂಕ್ತವಾಗಿಲ್ಲ. ಹೀಗಾಗಿ ತನ್ನ ತಾಯಿಗೆ ಜೀವನಾಂಶ ನೀಡುವಂತೆ ಹೊರಡಿಸಿರುವ ಆದೇಶ ರದ್ದುಪಡಿಸಬೇಕು ಮತ್ತು ಈ ಜೀವನಾಂಶ ಮೊತ್ತವನ್ನು ಇತರೆ ಮಕ್ಕಳಿಂದ ವಸೂಲಿ ಮಾಡಿಕೊಳ್ಳಲು ನಿರ್ದೇಶಿಸಬೇಕು ಎಂದು ಕೋರಿದ್ದರು.
(WP No.25471/2024)