News

ಚುನಾವಣಾ ಬಾಂಡ್ ಅಕ್ರಮ ಆರೋಪ: ಬಿಜೆಪಿ ನಾಯಕರ ವಿರುದ್ಧದ ಕೇಸ್ ರದ್ದು

Share It

ಬೆಂಗಳೂರು: ಭಾರತೀಯ ಜನತಾ ಪಕ್ಷ ಚುನಾವಣಾ ಬಾಂಡ್‌ಗಳ ಮೂಲಕ ಬಹುಕೋಟಿ ದೇಣಿಗೆ ಪಡೆಯಲು ಜಾರಿ ನಿರ್ದೇಶನಾಲಯವನ್ನು ದುರ್ಬಳಕೆ ಮಾಡಿ ಸುಲಿಗೆ ಮಾಡಿರುವ ಆರೋಪದ ಮೇಲೆ ಬೆಂಗಳೂರಿನ ತಿಲಕ್‌ ನಗರ ಪೊಲೀಸ್ ಠಾಣೆಯಲ್ಲಿ ಬಿಜೆಪಿ ನಾಯಕರ ವಿರುದ್ಧ ದಾಖಲಿಸಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ.

ಎಫ್‌ಐಆರ್‌ ರದ್ದುಪಡಿಸಬೇಕು ಎಂದು ಕೋರಿ ಮಾಜಿ ಸಂಸದ ಹಾಗೂ ಬಿಜೆಪಿಯ ರಾಜ್ಯ ಘಟಕದ ಮಾಜಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಲ್ಲಿಸಿರುವ ಕ್ರಿಮಿನಲ್‌ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ. ಎಂ ನಾಗಪ್ರಸನ್ನ ಅವರಿದ್ದ ಪೀಠ, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್‌, ಜೆ ಪಿ ನಡ್ಡಾ ಮತ್ತಿತರರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ಅನ್ನು ರದ್ದುಪಡಿಸಿದೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

ಅರ್ಜಿದಾರ ಆದರ್ಶ್‌ ಐಯ್ಯರ್‌ ಪ್ರತಿನಿಧಿಸಿದ್ದ ವಕೀಲ ಪ್ರಶಾಂತ್‌ ಭೂಷಣ್‌ ಅವರು ವಾದ ಮಂಡಿಸಿ, ದೂರಿನಲ್ಲಿನ ಆರೋಪವು ಸುಲಿಗೆಗೆ ಕ್ಲಾಸಿಕ್‌ ಉದಾಹರಣೆಯಾಗಿದೆ. ಸುಲಿಗೆಗೆ ಗುರಿಯಾಗಿರುವ ವ್ಯಕ್ತಿಯೂ ಅಪರಾಧದಿಂದ ಲಾಭ ಪಡೆದಿದ್ದಾರೆ. ಬಿಜೆಪಿಗೆ ಚುನಾವಣಾ ಬಾಂಡ್‌ ಮೂಲಕ ದೇಣಿಗೆ ನೀಡಿದ ಬಳಿಕ ಅವರ ವಿರುದ್ಧ ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ ತನಿಖೆ ನಿಲ್ಲಿಸಲಾಗಿದೆ. ಈ ಕಾರಣಕ್ಕಾಗಿ ಅವರು ದೂರು ನೀಡಿಲ್ಲ. ಸಾಮಾನ್ಯ ಜನರೇ ಈ ಸಂಬಂಧ ದೂರು ನೀಡಬಹುದು ಎಂದಿದ್ದರು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆ.ಜಿ ರಾಘವನ್‌ ಅವರು “ಐಪಿಸಿ ಸೆಕ್ಷನ್‌ 384ರ ವ್ಯಾಖ್ಯಾನವು ಪ್ರತಿಯೊಂದು ಪ್ರಕರಣದ ವಾಸ್ತವಿಕ ವಿಚಾರದ ಮೇಲೆ ಬದಲಾಗುವುದಿಲ್ಲ. ಸಂತ್ರಸ್ತರು ನ್ಯಾಯಾಲಯದ ಮುಂದೆ ಬಂದಿಲ್ಲ, ಈ ಪ್ರಕರಣದಲ್ಲಿನ ದೂರುದಾರರಿಗೆ ಯಾವುದೇ ಹಾನಿಯಾಗಿಲ್ಲ. ಹೀಗಾಗಿ, ಇಲ್ಲಿ ಸುಲಿಗೆ ವಿಚಾರ ಅನ್ವಯಿಸುವುದಿಲ್ಲ. ಬರೀ ರಂಜನೆಗಾಗಿ ಪ್ರಕರಣವನ್ನು ಪರಿಗಣಿಸಲಾಗದು ಎಂದು ವಾದ ಮಂಡಿಸಿದ್ದರು.

ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಜನಾಧಿಕಾರ ಸಂಘರ್ಷ ಪರಿಷತ್‌ನ ಸಹ ಅಧ್ಯಕ್ಷರಾಗಿರುವ ಆದರ್ಶ್‌ ಆರ್‌. ಐಯ್ಯರ್‌ ಆರೋಪಿತರ ವಿರುದ್ಧ ಜನಪ್ರತಿನಿಧಿಗಳ ವಿರುದ್ಧ ಖಾಸಗಿ ದೂರು  ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಮತ್ತು ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಜೆ ಪಿ ನಡ್ಡಾ, ಬಿಜೆಪಿ ರಾಜ್ಯ ಘಟಕದ ಮಾಜಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 384 (ಸುಲಿಗೆ), 120(ಬಿ) (ಕ್ರಿಮಿನಲ್‌ ಪಿತೂರಿ) ಜೊತೆಗೆ 34ರ ಅಡಿ ಪ್ರಕರಣ ದಾಖಲಿಸಲು ತಿಲಕ್‌ ನಗರ ಪೊಲೀಸರಿಗೆ ಆದೇಶಿಸಿತ್ತು. ಕೋರ್ಟ್ ಆದೇಶದ ಅನ್ವಯ ಎಫ್‌ಐಆರ್‌ ದಾಖಲಾಗಿತ್ತು. ಈ ಕೇಸ್ ರದ್ದು ಕೋರಿ ಬಿಜೆಪಿ ನಾಯಕರು ಹೈಕೋರ್ಟ್ ಮೊರೆ ಹೋಗಿದ್ದರು.


Share It

You cannot copy content of this page