News

ಹಣಕಾಸು ಅವ್ಯವಹಾರ ಆರೋಪ: ಬಿಜೆಪಿ ಮುಖಂಡ ವೀರಯ್ಯ ವಿರುದ್ಧದ ತನಿಖೆಗೆ ತಡೆಯಾಜ್ಞೆ

Share It

ಬೆಂಗಳೂರು: ಬೆಂಗಳೂರು: ಕರ್ನಾಟಕ ಸರ್ಕಾರದ ಉದ್ದಿಮೆ ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್ ನಿಯಮಿತದಲ್ಲಿ (ಡಿಡಿಯುಟಿಟಿಎಲ್‌) ನಡೆದಿದೆ ಎನ್ನಲಾದ 47.50 ಕೋಟಿ ಅಕ್ರಮ ಆರೋಪದಡಿ ನಿಗಮದ ಮಾಜಿ ಅಧ್ಯಕ್ಷ ಬಿಜೆಪಿ ಮುಖಂಡ ಡಿ ಎಸ್‌ ವೀರಯ್ಯ ವಿರುದ್ಧದ  ಪ್ರಕರಣಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.

ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಡಿ ಎಸ್‌ ವೀರಯ್ಯ ಅವರು ಪ್ರಕರಣ ರದ್ದು ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾ, ಎಂ. ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ನೀಡಿದೆ.

ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶರು ಮತ್ತು ಮಾಜಿ ಅಧ್ಯಕ್ಷ ವೀರಯ್ಯ ಅವರು ಪಿತೂರಿ ನಡೆಸಿ ಕಂಪನಿಯ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬುದು ಈಗಿರುವ ಆರೋಪವಾಗಿದೆ. ಆದರೆ, ಈ ಪ್ರಕರಣದಲ್ಲಿ ಪ್ರಾಥಮಿಕ ತನಿಖೆಯನ್ನೂ ನಡೆಸಿಲ್ಲ ಮತ್ತು ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್‌ 17(ಎ) ಅಡಿ ಅನುಮತಿ ಪಡೆದಿಲ್ಲ. ಪ್ರಾಥಮಿಕ ತನಿಖೆ ನಡೆಸದೆಯೇ ಆರೋಪ ಪಟ್ಟಿಯಲ್ಲಿ ವೀರಯ್ಯ ಅವರನ್ನು ಆರೋಪಿಯನ್ನಾಗಿ ಮಾಡಲಾಗಿದೆ ಎಂದರು.

ಅಲ್ಲದೇ, 2023ರ ಸೆಪ್ಟೆಂಬರ್‌ನಲ್ಲಿ ಅನಾಮಿಕರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿತ್ತು. ಇದಾದ ಬಳಿಕ 9 ತಿಂಗಳು ತನಿಖೆ ನಡೆಸಲಾಗಿದೆ. ಆ ಬಳಿಕ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್‌ 17ಎ ಅಡಿ ಪೂರ್ವಾನುಮತಿ ಕೋರಿದ್ದು, ಮೊದಲ ಆರೋಪಿ ಶಂಕರಪ್ಪ ವಿರುದ್ಧ ಪೂರ್ವಾನುಮತಿ ದೊರೆತಿದೆ. ಆದರೆ, ವೀರಯ್ಯ ವಿಚಾರದಲ್ಲಿ ಯಾವುದೇ ಕಾನೂನು ಪ್ರಕ್ರಿಯೆ ಪಾಲಿನೆ ಮಾಡಿಲ್ಲ ಎಂದು ವಾದಿಸಿದರು.

ವಾದ ಆಲಿಸಿದ ಹೈಕೋರ್ಟ್, ಅರ್ಜಿದಾರ ವೀರಯ್ಯ ಅವರ ವಿರುದ್ಧದ ಹೆಚ್ಚುವರಿ ತನಿಖೆ ಮತ್ತು ಈಗಾಗಲೇ ಸಲ್ಲಿಕೆ ಮಾಡಲಾಗಿರುವ ಆರೋಪ ಪಟ್ಟಿಗೆ ತಡೆಯಾಜ್ಞೆ ನೀಡಲಾಗಿದೆ ಎಂದು ಆದೇಶಿಸಿದೆ. ವಿಚಾರಣೆಯನ್ನು ಡಿ.19ಕ್ಕೆ ಮುಂದೂಡಿದೆ.

ಪ್ರಕರಣದ ಹಿನ್ನೆಲೆ: 2021-23ರ ಅವಧಿಯಲ್ಲಿ ನಿಯಮಿತದ ಹಣಕಾಸು ದುರ್ಬಳಕೆಯಾಗಿದೆ ಎಂಬ ಆರೋಪದಡಿ ಎಸ್‌ ಶಂಕರಪ್ಪ ಅವರನ್ನು ಮೊದಲಿಗೆ ಬಂಧಿಸಲಾಗಿತ್ತು. ಶಂಕರಪ್ಪ ಅವರು ಆ ಸಂದರ್ಭದಲ್ಲಿ ಡಿಡಿಯುಟಿಟಿಎಲ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು.

ನಂತರ ಜುಲೈ 12ರಂದು ಡಿಡಿಯುಟಿಟಿಎಲ್‌ನ ಮಾಜಿ ಅಧ್ಯಕ್ಷ ವೀರಯ್ಯ ಅವರನ್ನು ಸಿಐಡಿ ಬಂಧಿಸಿತ್ತು. ನಿಯಮಿತದ ನಿಯಮಾವಳಿಗಳಲ್ಲಿ ತುಂಡು ಗುತ್ತಿಗೆಗೆ ಅನುಮತಿ ಇಲ್ಲದೆ ಹೋದರೂ ಸುಮಾರು 2 ಕೋಟಿ ಮೌಲ್ಯದ ಕೆಲಸಗಳನ್ನು ಟೆಂಡರ್‌ ಕರೆಯದೇ ಗುತ್ತಿಗೆ ನೀಡಬಹುದು ಎನ್ನುವ ರೀತಿಯಲ್ಲಿ ನಿಯಮಿತದ ದಾಖಲೆಗಳನ್ನು ತಿರುಚಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಅಲ್ಲದೆ, ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರರಿಗೂ ಪೂರ್ಣ ಹಣ ಬಿಡುಗಡೆ ಮಾಡಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು.


Share It

You cannot copy content of this page