ಎರ್ನಾಕುಲಂ: ಆರೋಪಿ ತನ್ನನ್ನು ಸಮರ್ಥಿಸಿಕೊಳ್ಳಲು ಬೌದ್ದಿಕವಾಗಿ ಅಸಮರ್ಥನಿದ್ದಾಗ ಆತನ ವಿರುದ್ಧದ ವಿಚಾರಣಾ ಪ್ರಕ್ರಿಯೆಯನ್ನು ಮುಂದೂಡಬೇಕಾಗುತ್ತದೆ. ಈ ನಿಯಮ ಬಿಎನ್ಎಸ್ ನಲ್ಲಿಯೂ ಪೂರ್ವಾನ್ವಯ ಆಗುತ್ತದೆ ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿದೆ.
ಆರೋಪಿಯ ಮಾನಸಿಕ ಆರೋಗ್ಯ ಸ್ಥಿತಿ ಪರೀಕ್ಷೆ ನಡೆಸುವಂತೆ ವಿಚಾರಣಾ ನ್ಯಾಯಾಲಯದ ನೀಡಿದ್ದ ಆದೇಶ ಪ್ರಶ್ನಿಸಿ ತಂಕಪ್ಪನ್(74) ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಕೆ. ಬಾಬು ಅವರಿದ್ದ ಪೀಠ ಈ ತೀರ್ಪು ನೀಡಿದೆ.
ಹೈಕೋರ್ಟ್ ತನ್ನ ತೀರ್ಪಿನಲ್ಲಿ, ಅಸ್ವಸ್ಥ ಮನಸ್ಸಿನ ವ್ಯಕ್ತಿ ಅಥವಾ ಬೌದ್ದಿಕವಾಗಿ ಅಮಸರ್ಥನಿರುವ ಆರೋಪಿಯ ವಿರುದ್ಧ ವಿಚಾರಣೆ ನಡೆಸುವಾಗ ನ್ಯಾಯಾಲಯಗಳು ಅನುಸರಿಸಬೇಕಾದ ಕಾರ್ಯ ವಿಧಾನಗಳ ಕುರಿತು ಸಿಆರ್‌ಪಿಸಿಯ ಸೆಕ್ಷನ್ 328 ರಿಂದ 330 ರಲ್ಲಿ ಹೇಳಲಾಗಿದೆ. ಇವುಗಳನ್ನು ಬಿಎನ್‌ಎಸ್‌ನ ಸೆಕ್ಷನ್ 367 ರಿಂದ 369 ಲ್ಲಿ ವಿವರಿಸಲಾಗಿದೆ.
ಆರೋಪಿ ಅಸ್ವಸ್ಥ ಮನಸ್ಸಿನವರಾಗಿದ್ದರೆ, ಮತ್ತು ಇದೇ ಕಾರಣಕ್ಕೆ ಆತ ಪ್ರತಿವಾದ ಮಂಡಿಸಲು ಅಸಮರ್ಥನೆಂದು ಕಂಡುಬಂದರೆ, ನ್ಯಾಯಾಲಯ ಬಿಎನ್ಎಸ್ ಸೆಕ್ಷನ್ 368 ಅಡಿ ವಿಚಾರಣೆಯನ್ನು ಮುಂದೂಡಬೇಕಾಗುತ್ತದೆ. ಒಂದೊಮ್ಮೆ ಇಂತಹ ಆರೋಪಿಯ ವಿರುದ್ಧ ವಿಚಾರಣೆ ಮುಂದುವರೆಸಿದರೆ, ನ್ಯಾಯಯುತ ವಿಚಾರಣೆಯ ಹಕ್ಕನ್ನು ಮತ್ತು ಆತನ ರಕ್ಷಣೆಗೆ ಆದ್ಯತೆ ನೀಡುವ ಅವಕಾಶಕ್ಕೆ ಅಡ್ಡಿ ಉಂಟಾಗುತ್ತದೆ ಎಂದು ಹೈಕೋರ್ಟ್ ಹೇಳಿದೆ.
ಹಾಗೆಯೇ ಈ ಸೆಕ್ಷನ್‌ಗಳನ್ನು ಪೂರ್ವಾನ್ವಯವಾಗುವಂತೆ ವಿಸ್ತರಿಸದೆ ಹೋದರೆ ಬೌದ್ಧಿಕ ಅಸಾಮರ್ಥ್ಯ ಇರುವ ಆರೋಪಿ ತನ್ನನ್ನು ನ್ಯಾಯಾಲಯದಲ್ಲಿ ಸಮರ್ಥಿಸಿಕೊಳ್ಳಲು ಅಸಾಧ್ಯವಾಗಿ, ನ್ಯಾಯಯುತ ವಿಚಾರಣೆಯೂ ವಿಫಲವಾಗುತ್ತದೆ ಎಂದು ಹೈಕೋರ್ಟ್ ವಿವರಿಸಿದೆ.
ಇನ್ನು ಪ್ರಕರಣದ ಆರೋಪಿಯಾಗಿರುವ ವ್ಯಕ್ತಿ 74 ವರ್ಷ ವಯಸ್ಸಿನವರಾಗಿದ್ದು, ಅಲ್ಜೆಮೈರ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹೀಗಾಗಿ, ಬಿಎನ್‌ಎಸ್‌ಎಸ್ ಅಡಿಯಲ್ಲಿ ಲಭ್ಯವಿರುವ ರಕ್ಷಣೆಗೆ ಅರ್ಹರಾಗಿದ್ದಾರೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್ ವಿಚಾರಣಾ ನ್ಯಾಯಾಲಯ ಮಾನಸಿಕ ಆರೋಗ್ಯ ಪರೀಕ್ಷೆಗೆ ಒಳಪಡುವಂತೆ ನೀಡಿದ್ದ ಆದೇಶವನ್ನು ರದ್ದುಪಡಿಸಿದೆ. ಅಲ್ಲದೇ, ಸಿಆರ್ಪಿಸಿ ಸೆಕ್ಷನ್ 329 (ಬಿಎನ್ಎಸ್ ಸೆಕ್ಷನ್ 368) ಅಡಿ ಆರೋಪಿ ಸಲ್ಲಿಸಿರುವ ಅರ್ಜಿಯನ್ನು ಮರುಪರಿಶೀಲಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಿದೆ.
ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ದಾಖಲಿಸಿರುವ ಕ್ರಿಮಿನಲ್ ಪ್ರಕರಣದಲ್ಲಿ ಆರೋಪಿಯಾಗಿರುವ 74 ವರ್ಷದ ವ್ಯಕ್ತಿ ಅಲ್ಜೆಮೈರ್ ಕಾಯಿಲೆಯಿಂದ ಬಳಲುತ್ತಿದ್ದು, ಆರೋಪಿ ಪರ ವಕೀಲರು ಸಿಆರ್ಪಿಸಿ ಸೆಕ್ಷನ್ 329ರ ಅಡಿ ಅರ್ಜಿ ಸಲ್ಲಿಸಿ ಅವರ ವಿರುದ್ಧದ ವಿಚಾರಣೆಯನ್ನು ಮುಂದೂಡುವಂತೆ ವಿಚಾರಣಾ ನ್ಯಾಯಾಲಯಕ್ಕೆ ಕೋರಿದ್ದರು. ಅರ್ಜಿ ವಿಚಾರಣೆ ನಡೆಸಿದ ವಿಚಾರಣಾ ನ್ಯಾಯಾಲಯ, ಅರ್ಜಿದಾರರು ಬೌದ್ಧಿಕ ಅಸಾಮರ್ಥ್ಯದಿಂದ ಬಳಲುತ್ತಿದ್ದಾರೆ ಎಂಬ ವಾದವನ್ನು ತಿರಸ್ಕರಿಸಿತ್ತು. ಜತೆಗೆ, ಅವರು ಮಾನಸಿಕ ದೌರ್ಬಲ್ಯ ಅಥವಾ ಅಸ್ವಸ್ಥತೆಯಿಂದ ಬಳಲುತ್ತಿಲ್ಲ ಎಂದು ಅಭಿಪ್ರಾಯಪಟ್ಟು, ವೈದ್ಯಕೀಯ ತಪಾಸಣೆಗೆ ನಿರ್ದೇಶಿಸಿತ್ತು. ಈ ಆದೇಶವನ್ನು ಆರೋಪಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
(CRL.MC NO. 6370 OF 2023 / 2024:KER:67342)