ಮಧುರೈ: ತಾನು ನಡೆಸುತ್ತಿರುವ ವೇಶ್ಯಾವಾಟಿಕೆ ಕೇಂದ್ರಕ್ಕೆ ಪೊಲೀಸರು ಕಿರುಕುಳ ನೀಡದಂತೆ ರಕ್ಷಣೆ ನೀಡಬೇಕು ಎಂದು ವಿಚಿತ್ರ ಮನವಿ ಮಾಡಿ ಅರ್ಜಿ ಸಲ್ಲಿಸಿದ್ದ ವಕೀಲನಿಗೆ ಮದ್ರಾಸ್ ಹೈಕೋರ್ಟ್ ಚೀಮಾರಿ ಹಾಕಿದೆ.
ಅಲ್ಲದೇ, ಅರ್ಜಿದಾರ ವಕೀಲನಿಗೆ 10 ಸಾವಿರ ರೂಪಾಯಿ ದಂಡ ವಿಧಿಸಿರುವ ಹೈಕೋರ್ಟ್, ಆತನ ಶೈಕ್ಷಣಿಕ ದಾಖಲೆಗಳ ನೈಜತೆಯನ್ನು ಪರಿಶೀಲಿಸುವಂತೆ ತಮಿಳುನಾಡು ವಕೀಲರ ಪರಿಷತ್ತಿಗೆ ಸೂಚಿಸಿದೆ.
ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ನಾಗರಕೋಯಿಲ್‌ನಲ್ಲಿ ತಾನು ನಡೆಸುತ್ತಿರುವ ವೇಶ್ಯಾವಾಟಿಕೆ ಅಡ್ಡೆಗೆ ರಕ್ಷಣೆ ನೀಡಬೇಕು ಎಂದು ಕೋರಿ ವಕೀಲ ರಾಜಾ ಮುರ್ರುಗನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ. ಪುಗಳೇಂದಿ ಅವರಿದ್ದ ಪೀಠ ತೀವ್ರ ಆಘಾತ ವ್ಯಕ್ತಪಡಿಸಿದೆ.
ವಕೀಲ ಎಂದು ಹೇಳಿಕೊಂಡಿರುವ ವ್ಯಕ್ತಿ ತಾನು ವೇಶ್ಯಾವಾಟಿಕೆ ನಡೆಸುತ್ತಿದ್ದು, ಅದಕ್ಕೆ ರಕ್ಷಣೆ ಒದಗಿಸಬೇಕು ಎಂದು ಕೋರಿ ಅರ್ಜಿ ಸಲ್ಲಿಸುವುದು ಸಮಾಜದಲ್ಲಿ ನ್ಯಾಯವಾದಿಗಳ ಹೆಸರಿಗೆ ಮಸಿ ಬಳಿಯುವ ಕೆಲಸ. ಈ ಪ್ರಕರಣ ನ್ಯಾಯಾಲಯವನ್ನು ಆಘಾತಕ್ಕೆ ತಳ್ಳಿದೆ. ಹಿಂದೊಮ್ಮೆ ವಕೀಲರೊಬ್ಬರ ವಿರುದ್ಧ ಡಕಾಯಿತಿ ಆರೋಪದಡಿ ಬಂಧಿಸಿದ ವರದಿಯಾಗಿತ್ತು. ಇಂತಹ ವಕೀಲರಿಂದಾಗಿ ಸಮಾಜದಲ್ಲಿ ನ್ಯಾಯವಾದಿಗಳ ಗೌರವ ಕಡಿಮೆಯಾಗುತ್ತಿದೆ. ಈಗಲಾದರೂ ವಕೀಲರ ಪರಿಷತ್ತುಗಳು ಕಾನೂನು ಪದವೀದರರನ್ನು ವಕೀಲರನ್ನಾಗಿ ನೋಂದಾಯಿಸಿಕೊಳ್ಳುವಾಗ ಅವರ ಹಿನ್ನೆಲೆ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಅಲ್ಲದೇ, ಅರ್ಜಿದಾರ ಕಾನೂನು ಮತ್ತು ಸುಪ್ರೀಂ ಕೋರ್ಟ್ ತೀರ್ಪನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಕಾನೂನುಗಳು ಲೈಂಗಿಕ ಕಾರ್ಯಕರ್ತರನ್ನು ರಕ್ಷಿಸುವ ಮತ್ತು ಪುನರ್ಸವಸತಿ ಕಲ್ಪಿಸುವ ಉದ್ದೇಶಗಳನ್ನು ಹೊಂದಿವೆಯೇ ವಿನಾ ವೇಶ್ಯಾವಾಟಿಕೆ ನಡೆಸುವುದು ಕಾನೂನಬದ್ಧ ಎಂದು ಎಂದಿಗೂ ಹೇಳಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ
ಪ್ರಕರಣದ ಹಿನ್ನೆಲೆ: ಅರ್ಜಿದಾರ ವಕೀಲ ರಾಜಾ ಮುರ್ರುಗನ್ ‘ಫ್ರೆಂಡ್ಸ್ ಫಾರ್ ಎವರ್ ಟ್ರಸ್ಟ್ʼ ಎಂಬ ಸಂಸ್ಥೆ ಸ್ಥಾಪಿಸಿದ್ದು ಅದರ ಮೂಲಕ ತನ್ನ ಸದಸ್ಯರು ಹಾಗೂ ಗ್ರಾಹಕರಿಗೆ ಆಯಿಲ್ ಮಸಾಜ್ ಸೇರಿದಂತೆ ಇನ್ನಿತರೆ ಲೈಂಗಿಕ ಸೇವೆಗಳನ್ನು ಒದಗಿಸಲಾಗುತ್ತಿದೆ. ಇಲ್ಲಿ ಸಮ್ಮತಿಯ ಮೇರೆಗೆ ವಯಸ್ಕರು ಪರಸ್ಪರ ಲೈಂಗಿಕ ಕ್ರಿಯೆಯಲ್ಲಿ ತೊಡಬಹುದಾಗಿದೆ. ಆದರೆ, ಪೊಲೀಸರು ಸಂಸ್ಥೆಯ ಚಟುವಟಿಕೆಗಳಿಗೆ ಅಡ್ಡಿಪಡಿಸುತ್ತಿದ್ದಾರೆ. ಇತ್ತೀಚೆಗೆ ಸಂಸ್ಥೆ ಮೇಲೆ ದಾಳಿ ಮಾಡಿ ವೇಶ್ಯಾವಾಟಿಕೆ ನಡೆಸುತ್ತಿರುವ ಆರೋಪದ ಮೇಲೆ ತನ್ನ ವಿರುದ್ಧ ಅನೈತಿಕ ಮಾನವ ಕಳ್ಳಸಾಗಣೆ (ತಡೆ) ಕಾಯ್ದೆ, ಪೊಕ್ಸೋ ಕಾಯ್ದೆ ಹಾಗು ಐಪಿಸಿಯ ವಿವಿಧ ಸೆಕ್ಷನ್ ಗಳ ಅಡಿ ಎಫ್ಐಆರ್ ದಾಖಲಿಸಿದ್ದಾರೆ.
ಲೈಂಗಿಕ ಕಾರ್ಯಕರ್ತರನ್ನು ಘನತೆಯಿಂದ ನಡೆಸಿಕೊಳ್ಳಬೇಕು ಮತ್ತು ಸಮ್ಮತಿಯ ಸೆಕ್ಸ್ ವಿರುದ್ಧ ಕ್ರಮ ಕೈಗೊಳ್ಳಲಾಗದು ಎಂದು ಬುದ್ಧದೇವ್ ಕರ್ಮಾಸ್ಕರ್ ಪರ್ಸಸ್ ಪಶ್ಚಿಮ ಬಂಗಾಳ ಸರ್ಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಹೀಗಾಗಿ, ತನ್ನ ಸಂಸ್ಥೆಗೆ ಪೊಲೀಸರು ಯಾವುದೇ ತೊಂದರೆ ನೀಡದಂತೆ ರಕ್ಷಣೆ ನೀಡಬೇಕು ಹಾಗೂ ಸಂಸ್ಥೆಯ ಮೇಲೆ ದಾಳಿ ಮಾಡಿ ಅದರ ಕಾರ್ಯ ಚಟುವಟಿಕೆ ಸ್ಥಗಿತಗೊಳಿಸಿರುವುದಕ್ಕೆ 5 ಲಕ್ಷ ಪರಿಹಾರ ಕೊಡಿಸಬೇಕು ಎಂದು ಅರ್ಜಿದಾರ ಕೋರಿದ್ದ ಮತ್ತು ಪ್ರಕರಣದಲ್ಲಿ ತಾನೇ ಖುದ್ದಾಗಿ ವಾದಿಸಿದ್ದ.
CRL OP(MD) No.9399 of 2024