News

850 ಕೋಟಿ ಬಿಟ್ ಕಾಯಿನ್ ಹಗರಣ: ಇನ್ಸಪೆಕ್ಟರ್ ಗೆ ಜಾಮೀನು ನಿರಾಕರಿಸಿದ ಹೈಕೋರ್ಟ್

Share It

ಬೆಂಗಳೂರು: ಬಿಟ್ ಕಾಯಿನ್ ಹಗರಣದ ಆರೋಪಿ ಪೊಲೀಸ್ ಇನ್ಸ್​ಪೆಕ್ಟರ್ ಡಿ.ಎಂ.ಪ್ರಶಾಂತ್ ಬಾಬು ಅವರಿಗೆ ನಿರೀಕ್ಷಣಾ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ.

ಪ್ರಕರಣದಲ್ಲಿ ತಮ್ಮನ್ನು ಬಂಧಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನು ಕೋರಿ ಸಿಸಿಬಿ ತಾಂತ್ರಿಕ ಸಹಾಯ ಕೇಂದ್ರದ ಪೊಲೀಸ್ ಇನ್ಸ್​ಪೆಕ್ಟರ್ ಆಗಿದ್ದ ಪ್ರಶಾಂತ್ ಬಾಬು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಉಮಾ ಅವರಿದ್ದ ಪೀಠ ಈ ಆದೇಶ ಮಾಡಿದೆ.

ಬಿಟ್ ಕಾಯಿನ್ ಪ್ರಕರಣದ ಪ್ರಮುಖ ಆರೋಪಿ ಶ್ರೀಕಿಯಿಂದ ವಶಪಡಿಸಿಕೊಂಡ ಆ್ಯಪಲ್ ಕಂಪೆನಿಯ ಮ್ಯಾಕ್‌ಬುಕ್‌ನಲ್ಲಿ ಫೈಲ್‌ಗಳು ಮತ್ತು ಫೋಲ್ಡರ್‌ ​ಗಳನ್ನು ಅಳಿಸಬಹುದಾದಂತಹ ಡೇಟಾ-ವೈಫಿಂಗ್ ಟೂಲ್ ಅನ್ನು ಇನ್‌ಸ್ಟಾಲ್ ಮಾಡಲಾಗಿದೆ. ಈ ಟೂಲ್ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿಯೂ ಅಳಿಸಿದ ಪೋಲ್ಡರ್‌ಗಳನ್ನು ಮರು ಪಡೆಯುವುದಕ್ಕೆ ಸಾಧ್ಯವಾಗದಂತೆ ಮಾಡುತ್ತದೆ ಎನ್ನಲಾಗಿದೆ. ಈ ಎಲ್ಲ ದತ್ತಾಂಶಕ್ಕೆ ಬಳಸಿರುವ ಯೂಸರ್‌ನೇಮ್ ಅರ್ಜಿದಾರ ಪ್ರಶಾಂತ್ ಬಾಬು ಹೆಸರಿನಲ್ಲಿದ್ದು, ಸುಮಾರು 16 ಫೈಲ್‌ಗಳನ್ನು ಅಳಿಸಿಹಾಕಲಾಗಿದೆ ಎಂಬ ಅಂಶವನ್ನು ವಿಧಿವಿಜ್ಞಾನ ಪ್ರಯೋಗಾಲಯದ ವರದಿ ನೀಡಿದೆ..

ಅಲ್ಲದೆ, ಅರ್ಜಿದಾರರು ಬಿಟ್ ಕಾಯಿನ್ ತನಿಖೆ ನಡೆಸುತ್ತಿರುವ ಸಂಸ್ಥೆಯ ತಾಂತ್ರಿಕ ಸಹಾಯ ಕೇಂದ್ರದ ಮುಖ್ಯಸ್ಥರಾಗಿದ್ದಾರೆ. ಹೀಗಾಗಿ ಅವರು ತಮ್ಮ ವಿರುದ್ಧದ ಆರೋಪಕ್ಕೆ ಸಮಂಜಸವಾದ ವಿವರಣೆ ನೀಡುವುದಕ್ಕೆ ಜವಾಬ್ದಾರಿ ಹೊಂದಿದ್ದಾರೆ. ಇನ್ನು ಪ್ರಕರಣದ ಮತ್ತೋರ್ವ ಆರೋಪಿ ಬಿ.ಎಸ್ ಗಗನ್ ಸಿಆರ್ಪಿಸಿ ಸೆ.164 ಹೇಳಿಕೆಯಲ್ಲಿ 850 ಕೋಟಿ ಮೌಲ್ಯದ 4000 ಬಿಟ್ ಕಾಯಿನ್ ಗಳನ್ನು ಪ್ರಶಾಂತ್ ಬಾಬು ತಮ್ಮ ಕಂಪ್ಯೂಟರ್ ಗೆ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಇಂತಹ ಹೇಳಿಕೆಯನ್ನು ಹಗುರವಾಗಿ ಪರಿಗಣಿಸಲಾಗದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟು, ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.

ಪ್ರಕರಣದ ಹಿನ್ನೆಲೆ: 2020ರಲ್ಲಿ ಬಿಟ್ ಕಾಯಿನ್ ಪ್ರಕರಣದ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ವಿರುದ್ಧ ಬೆಂಗಳೂರಿನ ಕಾಟನ್‌ಪೇಟೆ, ಅಶೋಕನಗರ, ಕೆಜಿ ನಗರ ಮತ್ತು ಸೈಬರ್ ಕ್ರೈಂ ಠಾಣೆಗಳಲ್ಲಿ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿದ್ದವು. ಈ ಎಲ್ಲಾ ಪ್ರಕರಣಗಳನ್ನು ವಿಶೇಷ ತನಿಖಾ ತಂಡಕ್ಕೆ ವರ್ಗಾಯಿಸಲಾಗಿತ್ತು. ಶ್ರೀಕಿಯ ಆ್ಯಪಲ್ ಮ್ಯಾಕ್‌ಬುಕ್‌ ಅನ್ನು ಅರ್ಜಿದಾರ ಇನ್ಸಪೆಕ್ಟರ್ ಪ್ರಶಾಂತ್ ಬಾಬು ಕೊಠಡಿಯಲ್ಲಿದ್ದ ವೇಳೆ ಪರಿಶೀಲಿಸಿದ್ದರು. ಈ ವೇಳೆ ಅರ್ಜಿದಾರರ ಕಂಪ್ಯೂಟರ್ ಗೆ ಬಿಟ್ ಕಾಯಿನ್‌ಗಳನ್ನು ವರ್ಗಾವಣೆ ಮಾಡಿಕೊಂಡಿದ್ದಾರೆ ಎಂಬ ಆರೋಪವಿದೆ.

ಈ ಸಂಬಂಧ ವಿಜ್ಞಾನ ಪ್ರಯೋಗಾಲಯ ಮುಚ್ಚಿದ ಲಕೋಟೆಯಲ್ಲಿ ವರದಿ ನೀಡಿದೆ. ಅಲ್ಲದೆ, ಮ್ಯಾಕ್‌ಬುಕ್‌ನಲ್ಲಿದ್ದ 4 ಸಾವಿರ ಬಿಟ್ ಕಾಯಿನ್‌ಗಳನ್ನು ವರ್ಗಾವಣೆ ಮಾಡಿದ್ದು, ಆ ಸಂದರ್ಭದಲ್ಲಿ ಒಂದು ಬಿಟ್ ಕಾಯಿನ್ ಮೌಲ್ಯ ಸುಮಾರು 29 ಸಾವಿರ ಡಾಲರ್ ಅಥವಾ 21.2 ಲಕ್ಷ ರೂ.ಗಳಿಗೆ ಸಮನಾಗಿತ್ತು. ವರ್ಗಾವಣೆಗೊಂಡ ಒಟ್ಟು ಬಿಟ್ ಕಾಯಿನ್‌ಗಳ ಮೌಲ್ಯ 850 ಕೋಟಿ ರೂ.ಗಳಾಗಿತ್ತು. ಪ್ರಕರಣ ಸಂಬಂಧ ಅರ್ಜಿದಾರರನ್ನು ಈಗಾಗಲೇ ಏಳು ದಿನಗಳ ಕಾಲ ವಶಕ್ಕೆ ಪಡೆದು ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಈ ನಡುವೆ ಮತ್ತೊಮ್ಮೆ ತನಿಖಾಧಿಕಾರಿಯ ಮುಂದೆ ಹಾಜರಾಗಲು ಪ್ರಶಾಂತ್ ಬಾಬು ಅವರಿಗೆ ನೋಟಿಸ್ ನೀಡಲಾಗಿತ್ತು. ಇದರಿಂದ ಬಂಧನ ಭೀತಿಗೆ ಒಳಗಾಗಿದ್ದ ಬಾಬು ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು.

(CRL.P No. 6403 of 2024)


Share It

You cannot copy content of this page