Columns

ವಾಲ್ಮೀಕಿ ಹಗರಣ: ಸರ್ಕಾರ ಬೇರೆಯವರ ಮೇಲೆ ಹಾಕಿ ಬಚಾವ್ ಆಗುವ ತಂತ್ರ ಮಾಡಿದ್ದು ಸ್ಪಷ್ಟ

Share It

ಲೇಖಕರು: ಎಸ್. ಎಚ್. ಮಿಟ್ಟಲಕೋಡ, ನಿವೃತ್ತ ಜಿಲ್ಲಾ ನ್ಯಾಯಾಧೀಶರು, ಧಾರವಾಡ.

ವಾಲ್ಮೀಕಿ ನಿಗಮದ ಹಗರಣದಲ್ಲಿ ಸಿಕ್ಕ ಕಾಂಗ್ರೆಸ್, ಹಗರಣ ನಡೆದಿಲ್ಲ ಎಂದು ಹೇಳಿಲ್ಲ. ಆದರೆ ಅದರಲ್ಲಿ ಸರಕಾರ ಅಥವಾ ಶಾಸಕರ ಪಾತ್ರ ಇಲ್ಲ ಎಂದು ಹೇಳಿದ್ದು ಸಹಜ. ಯಾಕೆಂದರೆ ರೇಣುಕಾ ಸ್ವಾಮಿ ಕೊಲೆ ಪ್ರಕರಣದಂತಹ ಕೆಲವು ಪ್ರಕರಣಗಳಲ್ಲಿ ತಾವೇ ಕೊಲೆಗಾರರು, ಎಂದು ಕೆಲವು ಆರೋಪಿಗಳು ಒಪ್ಪಿದ್ದು ಬಿಟ್ಟರೆ, ಸಾಮಾನ್ಯವಾಗಿ ಆರೋಪಿಗಳು ತಾವೇ ಕೊಲೆಗಾರರು ಎಂದು ಒಪ್ಪುವುದಿಲ್ಲ.

ಈಗ  ವಾಲ್ಮೀಕಿ ನಿಗಮದ ಪ್ರಕರಣದ ತನಿಖೆ ನಡೆಯುತ್ತಿದೆ. ಸರಕಾರ ಹಗರಣ ನಿರಾಕರಿಸದೇ ಬೇರೆಯವರ ಮೇಲೆ ಹಾಕಿ ಬಚಾವ್ ಆಗುವ ತಂತ್ರ ಮಾಡಿದ್ದು ಸ್ಪಷ್ಟ. ಅಲ್ಲದೇ ಬಿಜೆಪಿ ಸರಕಾರದ ಅವಧಿಯ ಭ್ರಷ್ಟಚಾರ ಹೊರಗೆ ತರಲು ಹೇಳಿದ್ದು ಎದಿರೇಟು. ನಿಜವಾಗಿ ಅದು ಕೂಡಾ ಒಳ್ಳೆಯದೇ. ಒಟ್ಟಾರೆ ಇಬ್ಬರೂ ಸಾಚಾ ಅಲ್ಲ ಎನ್ನುವದು, ರಾಜಕೀಯ ಏಟು ಎದಿರೇಟಿನಿಂದ ಸ್ಪಷ್ಟ ಗೋಚರ.

ಅವರು ಇವರ ಹಗರಣ ಹೊರ ತೆಗೆಯುವದು, ಇವರು ಅವರ ಹಗರಣ ಹೊರ ತೆಗೆಯುವದು ಇದು ರಾಜಕೀಯ. ಆದರೆ  ಭ್ರಷ್ಟಚಾರ ಹೊರತೆಗೆಯುವ ಬೆದರಿಕೆ ಇವು ಬರಿ ರಾಜಕೀಯ ಸ್ಟೆಂಟ್, ಅಲ್ಲದೇ ಬೇರೇನೂ ಅಲ್ಲ ಎನ್ನುವದು ಹಿಂದಿನ ಇಂತಹ ಘಟನೆಗಳಿಂದ ಗೊತ್ತಾಗುವುದು. ಇಂತಹ ಪ್ರಕರಣಗಳ ತನಿಖೆಗಾಗಿ ಸಮಿತಿ ಆಯೋಗ ರಚನೆ ಮಾಡಿ, ವರದಿ ಕೊಡಲು ಕನಿಷ್ಠ ಆರು ತಿಂಗಳ ಸಮಯ ನೀಡುತ್ತಾರೆ. ಅಂತ ಆಯೋಗ ಕಾರ್ಯಾರಂಭ ಮಾಡಲು ಕೆಲವು ತಿಂಗಳ ಕಳೆದು ನಂತರ ಆಯೋಗದ ಅವಧಿ ವಿಸ್ತರಣೆ ಆಗುವದು. ಈ ವರದಿ ಬರುವ ವೇಳೆಗೆ ಜನ ಮಾನಸದಲ್ಲಿ ಈ ಘಟನೆ ಮಾಸಿ ಹೋಗುತ್ತದೆ. ಕಾರಣ ಬಹಳಷ್ಟು  ಪ್ರಕರಣಗಳು ತಾರ್ಕಿಕ ಅಂತ್ಯ ಕಾಣದೇ ಇತಿಹಾಸದ ಪುಟಗಳಲ್ಲಿ ಸೇರಿವೆ. ಇಲ್ಲಿ ನಾವು ಗಮನಿಸ ಬೇಕಾದ ಅಂಶ ಎಂದರೆ, ರಾಜಕೀಯದ ಈ ಆಟದಲ್ಲಿ ಭ್ರಷ್ಟಚಾರದ ಹಗರಣ ಸದ್ದಿಲ್ಲದೆ ಶವ ಪೆಟ್ಟಿಗೆ ಸೇರುತ್ತದೆ.

ಮತದಾರರು ಮಾತ್ರ ತಮಗೆ ಇದಾವುದೂ ಸಂಬಂಧಿಸಿದ್ದು ಅಲ್ಲ ಎನ್ನುವಂತೆ, ನಿರ್ಲಿಪ್ತ ಭಾವನೆ ಯಿಂದ ತಮ್ಮ ಕಾಯಕದಲ್ಲಿ ತೊಡಗಿರುತ್ತಾರೆ. ಈಗ ಈ ದೇಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡು ರಾಷ್ಟ್ರೀಯ ಪಕ್ಷಗಳು ಮಾತ್ರ ಇವೆ. ಇವೆರಡೂ ಭ್ರಷ್ಟಾಚಾರದಲ್ಲಿ ಪೈಪೋಟಿಯಲ್ಲಿ ಇವೆ. ಮುಂದೆ ಇವುಗಳಲ್ಲಿ ಒಂದನ್ನು ಮಾತ್ರ ಆಯ್ಕೆ ಮಾಡುವ ಅನಿವಾರ್ಯತೆ. ಅಂದರೆ ಭ್ರಷ್ಟಾಚಾರದ ಬ್ರಹ್ಮ ರಾಕ್ಷಸ ಸುರಕ್ಷಿತವಾಗಿ ಉಳಿಯುತ್ತದೆ. ಭ್ರಷ್ಟಾಚಾರ ನಮ್ಮ ಎಲ್ಲ ಸಮಸ್ಯೆಗಳ ಬೇರು ಎನ್ನುವದು ಎಲ್ಲರಿಗೂ ಗೊತ್ತಿರುವ ಸಂಗತಿ.

ಪ್ರಜಾಪ್ರಭುತ್ವದಲ್ಲಿ ಮತದಾರರು ಜಾಗೃತ ಆಗದೇ ಹೋದರೆ, ಅಲ್ಲಿ ದುರಾಡಳಿತಕ್ಕೆ ಮುಕ್ತ ಅವಕಾಶ. ಭ್ರಷ್ಟಾಚಾರ ಹೋಗದೆ ಅಭಿವೃದ್ದಿ ಇಲ್ಲ, ಅದು ಹೋಗುವ ಮಾತೇ ಇಲ್ಲ ಅನ್ನುವ ಸ್ಥಿತಿ ಇದೆ. ಈಗಲಾದರೂ ನಮ್ಮ ಜನ ಎಚ್ಚೆತ್ತುಕೊಳ್ಳುವುದು ಅನಿವಾರ್ಯ. ಇಲ್ಲದೇ ಹೋದರೆ ಈ ದೇಶವನ್ನು ನಮ್ಮ ಕೋಟ್ಯಂತರ ದೇವತೆಗಳು ಕೂಡಾ ಕಾಪಾಡಲಾರರು ಎನ್ನುವದು ಸತ್ಯ.


Share It

You cannot copy content of this page