News

ಲೈಂಗಿಕ ಕಾರ್ಯಕರ್ತರಿಗೆ ಸಂಬಂದಪಟ್ಟ ಕಾನೂನುಗಳಿವು

Share It

ಲೇಖನ: ಪದ್ಮಶ್ರೀ. ಬಿ. ಲ್. ಬಿಳಿಯ, ವಕೀಲರು, ಬೆಂಗಳೂರು. 9741628251.

ಬೆಂಗಳೂರು: ಭಾರತದಲ್ಲಿ ಲೈಂಗಿಕ ಕಾರ್ಯಕರ್ತರ ಕೆಲಸಕ್ಕೆ ಕಾನೂನಾತ್ಮಕವಾಗಿ ಯಾವುದು ರೂಪುರೇಷೆಗಳು ಇಲ್ಲದಿದ್ದರೂ, ಯಾವುದೇ ನಿರ್ದಿಷ್ಟವಾದ ಕಾನೂನುಬದ್ಧತೆಯಲ್ಲಿ ನಿಬಂಧನೆಗೊಳಪಡುವುದಿಲ್ಲ ಮತ್ತು ಹೆಣ್ಣು ಮಕ್ಕಳು, ಮಹಿಳೆಯರ ಕಳ್ಳಸಾಗಣೆ (ಅನೈತಿಕ ಸಂಚಾರ) ಕಾನೂನು ಬಾಹಿರವಾಗಿದೆ. ಭಾರತದಲ್ಲಿ ಲೈಂಗಿಕ ಕಾರ್ಯಕರ್ತರ ಕೆಲಸವು ಪುರಾತನವಾಗಿದೆ.

ಇನ್ನು, ಲೈಂಗಿಕ ಕಾರ್ಯಕರ್ತರ ವೃತ್ತಿಗೆ ಮುಖ್ಯ ಕಾರಣ ಮತ್ತು ಪರಿಣಾಮಗಳು ಎಂದರೆ, ಬಾಲ್ಯ ವಿವಾಹದ ಅಡ್ಡ ಪರಿಣಾಮವಾಗಿ ಹೆಂಡತಿಯನ್ನು ತೊರೆಯುವುದು, ಮನೋರಂಜನೆ ಚಟುವಟಿಕೆಯ ಕೊರತೆ, ಅಜ್ಞಾನ, ಲೈಂಗಿಕ ಕಾರ್ಯಕರ್ತರ ಧಂದೆಯ ಮನಪೂರ್ವಕ ಸ್ವೀಕಾರ, ಮಾನಸಿಕ ಕಾರಣಗಳಾದ ದೈಹಿಕ ಸಂತೃಪ್ತಿ, ದೈಹಿಕ ದುರಾಸೆ ಹಾಗೂ ದೈಹಿಕ ಹತಾಷೆ.

ಮಾನವ ಅನೈತಿಕ ಸಂಚಾರ (ತಡೆಗಟ್ಟುವಿಕೆ) ಕಾಯಿದೆ ಪ್ರಕಾರ “ಲೈಂಗಿಕ ಕಾರ್ಯಕರ್ತರ ಧಂದೆ” ಎಂದರೆ ಹೆಣ್ಣನ್ನು ಲೈಂಗಿಕ ಶೋಷಣೆಗೆ ಒಳಪಡಿಸುವುದು ಅಥವಾ ವ್ಯವಹಾರದ ಸಲುವಾಗಿ ದುರುಪಯೋಗ ಪಡಿಸಿಕ್ಕೊಳುವುದು. ಕಾನೂನಿನಲ್ಲಿ ಲೈಂಗಿಕ ಕಾರ್ಯಕರ್ತರ ಕೆಲಸದ ಬಗ್ಗೆ ಉಲ್ಲೇಖವಿದ್ದರೂ ಕೇವಲ ಅಪ್ರಾಪ್ತ ಬಾಲಕಿಯರ ಮೇಲೆ ಎಸಗುವ ಲೈಂಗಿಕ ಶೋಷಣೆ ಶಿಕ್ಷೆಗೆ ಸೀಮಿತವಾಗಿದೆ.

ಲೈಂಗಿಕ ಕಾರ್ಯವೃತ್ತಿಯಲ್ಲಿ ತೊಡಗಿಸಿಕೊಳ್ಳುವ ವಿಧಾನಗಳು ಎಂದರೆ, ರಸ್ತೆ ಪಾದಚಾರಿಗಳನ್ನು ಆಕರ್ಷಣೆ ಮಾಡುವುದು, ಧಾರ್ಮಿಕ ಹೆಸರು ದುರುಪಯೋಗಪಡಿಸಿಕೊಂಡು ಲೈಂಗಿಕ ಕಾರ್ಯವೃತ್ತಿ ನಡೆಸುವುದು, ಲೈಂಗಿಕ ಕಾರ್ಯ ವೃತ್ತಿ ಗೃಹದಲ್ಲಿ ಧಂದೆ ನಡೆಸುವುದು, ಹಾಡು ಮತ್ತು ಕುಣಿಯುತ ಗಂಡಸರನ್ನು ಆಕರ್ಷಣೆ ಮಾಡವುದು, ಬಾರ್ ಗಳಲ್ಲಿ ಬೆತ್ತಲೆ ನೃತ್ಯ ಮಾಡುವುದು, ಮಸಾಜ್ ಪಾರ್ಲರ್ಗಳ ಹೆಸರಲ್ಲಿ ಅಕ್ರಮ ಲೈಂಗಿಕ ವ್ಯವಹಾರವನ್ನು ಮಾಡುವುದು, ‘ಕಾಲ್ ಗರ್ಲ್’ ಹೆಸರಲ್ಲಿ ವ್ಯವಹಾರ ನಡೆಸುವುದು.

ಲೈಂಗಿಕ ಕಾರ್ಯವೃತ್ತಿಯು ಸಾಮಾಜಿಕ ದುಷ್ಪರಿಣಾಮಗಳನ್ನು ಬೀರುತ್ತದೆ. ಮುಖ್ಯವಾಗಿ, ಇದು ಲಿಂಗಭೇದ ತಾರತಮ್ಯ ಬೀರುತ್ತದೆ. ಹೆಣ್ಣನ್ನು ಲೈಂಗೀಕ ಸಂಭೋಗದ ವಸ್ತುವನ್ನಾಗಿಸಿಕೊಂಡು ಗಂಡು ತನ್ನ ಕಾಮತೃಷೆಯನ್ನು ತೀರಿಸಿ ಕೊಳ್ಳುವಂತಗುತ್ತದೆ. ವಿವಾಹ ಪದ್ಧತಿಯು ಚದರುತ್ತದೆ. ಹಾಗೂ ಕೌಟುಂಬಿಕ ವ್ಯವಸ್ಥೆಯು ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತದೆ. ಸೆಕ್ಸ್ ವರ್ಕರ್ ಹಾಗೂ ಲೈಂಗಿಕ ಕಾರ್ಯಕರ್ತೆಯರು ಅಪರಾಧವನ್ನೇ ತಮ್ಮ ಜೀವನದ ದುಡಿಮೆಯನ್ನಾಗಿ ಜೀವನ ಸಾಗಿಸುತ್ತಾರೆ.

ಲೈಂಗಿಕ ಕಾರ್ಯ ವೃತ್ತಿಯು ಚಾರಿತ್ರಿಕ ಹಿನ್ನಲೆ ಇರುವಂತ ಹಳೆಯ ವೃತ್ತಿ. ಭಾರತದಲ್ಲಿ ಹೆಚ್ಚಾಗಿ ವಲಸಿಗರಾಗಿ ಚೀನಾ, ಅರಬ್ ರಾಷ್ಟ್ರಗಳು, ಜಪಾನ್, ಬಾಂಗ್ಲಾದೇಶ, ಶ್ರೀಲಂಕಾ ಹಾಗೂ ಇನ್ನಿತರ ದೇಶಗಳಿಂದ ಬಂದಂತಹ ಮಹಿಳೆಯರು ಮತ್ತು ಹುಡುಗಿಯರು ಲೈಂಗಿಕ ಕಾರ್ಯಕರ್ತೆಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2015 ರಲ್ಲಿ, 10 ಥಾಯೀ ಹೆಂಗಸರು ಭಾರತದಲ್ಲಿ ಮಸಾಜ್ ಪಾರ್ಲರ್ ಹೆಸರಿನಲ್ಲಿ ಛದ್ಮ ವೇಷಧಾರಿಗಳಾಗಿ ಲೈಂಗಿಕ ವ್ಯವಹಾರ ಗೃಹವನ್ನು ನಡೆಸಿ, ಪೊಲೀಸರ ಮೂಲಕ ಬಂಧನಕ್ಕೊಳಗಾಗಿರುವುದು ಈ ದೇಶದ ಜನರಲ್ಲಿ ಭಯ ಹುಟ್ಟಿಸಿರುತ್ತದೆ. 2013 ರಲ್ಲಿ ಆಫ್ಘ್ನ್ ಮಹಿಳೆಯನ್ನು ಕಳ್ಳ ಸಾಗಣೆ ಮಾಡಿ, ಲೈಂಗಿಕ ಕಿರುಕುಳ ನೀಡಿ, ಲೈಂಗಿಕ ಕಾರ್ಯಕರ್ತೆಯಾಗಿ ಪರಿವರ್ತನೆ ಮಾಡಲು ಭಾರತ ದೇಶಕ್ಕೆ ಕರೆತಂದು, ಬಲವಂತ ಮಾಡಿದಾಗ ಪೊಲೀಸರ ವಶಕ್ಕೆ ಅಪರಾಧಿಗಳು ಸಿಲುಕಿರುತ್ತಾರೆ.

ಉಜ್ಬೇಕ್ ಮಹಿಳೆಯರು ಭಾರತಕ್ಕೆ ಲೈಂಗಿಕ ಕಾರ್ಯಕರ್ತೆಯಾಗಿ ಕೆಲಸ ನಿರ್ವಹಿಸಲು ಬರುತ್ತಾರೆ ಎಂಬ ವರದಿಗಳು ಇದೆ. “ಕಾಮಾಟಿಪುರ” ಎಂಬ ಸ್ಥಳವು ಅತಿಹೆಚ್ಚು ಲೈಂಗಿಕ ಚಟುವಟಿಕೆ ನಡೆಸುವುದರ ಮೂಲಕ ಪ್ರಸಿದ್ದಿಯಾಗಿದೆ. ಕೊಲ್ಕತಾದ ಸೋನಾಗಚಿ, ಬೆಂಗಳೂರಿನ ಮೆಜೆಸ್ಟಿಕ್, ಗ್ವಾಲಿರ್ ನ ರೇಷ್ಮಾಪುರ್, ಮುಂಬೈನ ಸೋನಾಪುರ, ದೆಹಲಿಯ ಜಿ. ಬಿ. ರಸ್ತೆಯು ಇನ್ನಿತರ ಪ್ರಮುಖ ಲೈಂಗಿಕ ಕಾರ್ಯ ವೃತ್ತಿಯ ಸ್ಥಳವಾಗಿದೆ. ಸಹರಂಪುರದ ನಕ್ಕಸ ಬಜಾರ್, ಮುಜ್ಜಾಫರ್ಪುರದ ಚತುರಬುಜ್ ಸ್ಥಾನ್, ವಾರಣಾಸಿಯ ಲಾಲ್ಪುರ್, ಮರ್ವಾದಿಹ್, ಅಲಹಬಾದ್ನ ಮೀರ್ಗಂಜ್, ಅಜಾಮ್ಗರ್ಹ್ ನ ಕಲಿನ್ಗಂಜ್, ಮೀರತ್ನ ಕಬಡಿ ಬಜಾರ್ಗಳಲ್ಲಿ ಹಿಂದೆ ಲೈಂಗಿಕ ಕಾರ್ಯವೃತ್ತಿ ಬಹಳ ಇತ್ತು.

ಅನೈತಿಕ ಸಂಚಾರ ತಡೆಗಟ್ಟುವಿಕೆ ಕಾಯಿದೆ,1956 (The Immoral Traffic (Prevention) Act, 1956 ಪ್ರಕಾರ, 1. “ಲೈಂಗಿಕ ಕಾರ್ಯ ಚಟುವಟಿಕೆಯ ಸ್ಥಳ” (BROTHEL)ನ್ನು ನಡೆಸುವುದು ತಪ್ಪು ಹಾಗೂ ಅದಕ್ಕೆ ಸಂಬಂಧಪಟ್ಟ ಸ್ಥಳದ ಮಾಲೀಕ/ಬಾಡಿಗೆದಾರ/ಭೋಗ್ಯದಾರ ಯಾರೇ ಆಗಲಿ ಅವರು ಹೊಣೆಗಾರರು ಆಗಿರುತ್ತಾರೆ, ಅವರಿಗೆ 3 ವರ್ಷದಿಂದ 5 ವರ್ಷದವರೆಗೆ ಶಿಕ್ಷೆ ಹಾಗೂ ಜೂಲ್ಮನೆ ವಿಧಿಸಲಾಗುತ್ತದೆ.

2. 18 ವರ್ಷ ತುಂಬಿದ, ಯಾವ ವ್ಯಕ್ತಿಯಾಗಲಿ ಲೈಂಗಿಕ ಕ್ರಿಯೆಯ ಚಟುವಟಿಕೆಯಲ್ಲಿ ಸಂಪಾದನೆ ಮಾಡುತ್ತಿದ್ದರೆ ಅಂತಹ ವ್ಯಕ್ತಿಗೆ 2 ವರ್ಷದಿಂದ 7 ವರ್ಷದವರೆಗೂ ಜೈಲು ಶಿಕ್ಷೆ ಹಾಗೂ ಜೂಲ್ಮನೆ ಹಾಕಲಾಗುತ್ತದೆ.

3. ಯಾವುದೇ ವ್ಯಕ್ತಿ ಲೈಂಗಿಕ ಚಟುವಟಿಕೆಯಲ್ಲಿ ಸಂಪಾದನೆ/ವ್ಯವಹಾರ ಮಾಡುವ ಉದ್ದೇಶದಿಂದ ಮಹಿಳೆ/ಹುಡುಗಿಯರನ್ನು ಕಲೆಹಾಕಿದರೆ/ಸಂಗ್ರಹಿಸಿದರೆ ಅಂತವರು ಶಿಕ್ಷೆಗೆ ಗುರಿಯಾಗುತ್ತಾರೆ. ಅದರಲ್ಲೂ, ಮಕ್ಕಳು/ಅತೀ ಚಿಕ್ಕ ಮಕ್ಕಳನ್ನು ದುರುದ್ದೇಶದಿಂದ ಈ ರೀತಿ ಸಂಗ್ರಹಣೆ ಮಾಡಿದಾದ್ರೆ 14 ವರ್ಷ ಅಥವಾ ಜೀವಾವದಿ ಶಿಕ್ಷೆಗೆ ಗುರಿಪಡಿಸುತ್ತಾರೆ.

4. ಆ ರೀತಿ ದುರುಪಯೋಗ ಮಾಡುವ ಉದ್ದೇಶದಿಂದ ಕನ್ಯಯರನ್ನು ಲೈಂಗಿಕ ಚಟುವಟಿಕೆ ನಡೆಸುವ ಗೃಹದಲ್ಲಿ ಬಂಧನಕ್ಕೊಳಪಡಿಸಿದರೆ ಅಂತಹ ವ್ಯಕ್ತಿಗಳಿಗೆ 7 ವರ್ಷದವರೆಗೂ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

5. ಲೈಂಗಿಕ ವ್ಯವಹಾರದ ಉದ್ದೇಶದಿಂದ ಸಾರ್ವಜನಿಕ ಸ್ಥಳದಲ್ಲಿ/ಕಟ್ಟಡಗಳಲ್ಲಿ ಮೋಹಿಸುವ/ಲೈಂಗಿಕ ಬೇಡಿಕೆಗಳನ್ನು ಇಡುವ ಸನ್ನೆಗಳನ್ನು ಮಾಡಿ ಸಾರ್ವಜನಿಕರನ್ನು ಬಲವಂತದಿಂದ ಸೆಳೆಯುವ ಪ್ರಯತ್ನ ಮಾಡಿದರೆ ಅಂತವರಿಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ 500 ರೂಪಾಯಿ ಜೂಲ್ಮನೆ ಹಾಕಲಾಗುತ್ತದೆ.

6. ಲೈಂಗಿಕ ವ್ಯವಹಾರದಲ್ಲಿ ತೊಡಗಿಸಲು, ವ್ಯಕ್ತಿಗಳನ್ನು/ಗಿರಾಕಿಗಳನ್ನು ಮೋಹಿಸಲು/ಸೆಳೆಯಲು ಹೆಣ್ಣನ್ನು ಬಲವಂತದಿಂದ ಸುಪರ್ದಿಗೆ ಪಡೆದುಕೊಂಡರೆ ಅಂಥವರಿಗೆ 7 ವರ್ಷಗಳ ವರೆಗೂ ಜೈಲು ಶಿಕ್ಷೆಯಾಗುತ್ತದೆ.

7. ಲೈಂಗಿಕ ಕಾರ್ಯವೃತ್ತಿಯಲ್ಲಿ ಸಿಲುಕಿಕೊಂಡ ವ್ಯಕ್ತಿ/ಮಹಿಳೆಯರು ಪೊಲೀಸ್ ವಶಕ್ಕೆ ಸಿಕ್ಕಿದಾಗ ತಕ್ಷಣ ಅಂತಹವರ ಬಗ್ಗೆ ಪೂರ್ವಪರ ವಿಚಾರಣೆ ಮತ್ತು ಹಳೆಯ ಶಿಕ್ಷೆಯಾಧಾರಿತ ಮಾಹಿತಿಯನ್ನು ಹೊರತೆಗೆಯಲಾಗುತ್ತದೆ.

8. ಇಂತಹ ಲೈಂಗಿಕ ಪ್ರಕರಣಗಳ ತನಿಖೆಗೆ ಸ್ಪೆಷಲ್ ಪೊಲೀಸ್ ಆಫೀಸರನ್ನು ರಾಜ್ಯ ಸರ್ಕಾರ ನಿಯೋಜನೆ ಮಾಡುತ್ತದೆ ಹಾಗೂ ಟ್ರಾಫಿಕ್ಕಿಂಗ್ ಪೊಲೀಸ್ ಆಫೀಸರ್ನ್ನು ಕೇಂದ್ರ ಸರ್ಕಾರ ನಿಯೋಜನೆ ಮಾಡುತ್ತದೆ.

9. ಲೈಂಗಿಕ ಕಾರ್ಯ ಚಟುವಟಿಕೆ ಬಗ್ಗೆ ಪೊಲೀಸರಿಗೆ ಮಾಹಿತಿ ದೊರಕಿದ ತಕ್ಷಣ ವಾರಂಟ್ ಇಲ್ಲದೆ ತಪಾಸಣೆ ನಡೆಸಿ ಅರೆಸ್ಟ್ ಮಾಡಬಹುದಾಗಿದೆ.

10. ಸೆಕ್ಸ್ ವರ್ಕರ್ಗಳಿಂದ ಪೊಲೀಸರು ನ್ಯಾಯಧೀಶರ ಆಜ್ಞೆಯ ಮೂಲಕ ಪಾರುಗಾಣಿಕೆಯಿಂದ ವಶಕ್ಕೆ ಪಡೆದುಕೊಂಡ ಮಹಿಳೆಯರನ್ನು ಅವರ ಪೋಷಕರು/ಸಂಬಂಧಿಕರ ಯಥಾರ್ತತೆ ಅರಿತು ಅವರಿಗೆ ಒಪ್ಪಿಸಲಾಗುತ್ತದೆ. ಒಂದು ವೇಳೆ, ಅವರ ಪೋಷಕರು ಯಾರು ಇಲ್ಲದಿದ್ದರೆ ಅಂತಹವರನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಂಘ ಸಂಸ್ಥೆಗಳಲ್ಲಿ ಇರಿಸಲಾಗುತ್ತದೆ.

11. ಸೆಕ್ಸ್ ವರ್ಕರ್ಗಳು ಬಳಸುತ್ತಿದ್ದ ಅಪರಾಧಿಕ ಗೃಹವನ್ನು ಕೋರ್ಟ್ ನಿರ್ದೇಶನದ ಮೂಲಕ 7 ದಿನಗಳಲ್ಲಿ ತೆರವುಗೊಳಿಸಿ ಬೀಗಮುದ್ರೆ ಹಾಕಲಾಗುತ್ತದೆ. ಒಂದು ವೇಳೆ, ಬೇರೆಯವರಿಗೆ ಬಾಡಿಗೆಗೆ ಕೊಡಬೇಕು ಅಂದರೆ ಕೋರ್ಟ್ ಮೂಲಕ ಪರ್ಮಿಷನ್ ಪಡೆದು 1 ವರ್ಷದ ನಂತರ ಬಾಡಿಗೆಗೆ ನೀಡಬಹುದು.

12. ತನಿಖಾಧಿಕಾರಿಯು ಇಂತಹ ಲೈಂಗಿಕ ಪ್ರಕರಣಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಬಹಳ ಜೋಪಾನವಾಗಿ ಇಡಬೇಕು. ಯಾವ ಸಂದರ್ಭದಲ್ಲಿ ಮುಂದಿನ ತನಿಖೆ ಹಾಗೂ ನ್ಯಾಯಾಲಯಕ್ಕೆ ಬೇಕಾದಾಗ ತಕ್ಷಣ ಒದಗಿಸಬೇಕು.

30ನೇ ಡಿಸೆಂಬರ್, 1956 ರಂದು ಅನೈತಿಕ ಸಂಚಾರ ನಿಗ್ರಹ ಕಾನೂನು The Immoral Traffic (Suppression) Act (SITA), 1956 ಜಾರಿಗೆ ಬಂತು. ಇದರ ಪ್ರಕಾರ, ಲೈಂಗಿಕ ಕಾರ್ಯಕರ್ತೆಯರು ಅವರ ಕಾರ್ಯ ಚಟುವಟಿಕೆಯನ್ನು ಮಾಡಬಹುದು, ಆದರೆ, ಯಾವುದೇ ವಿಧಾನದ ಸಾರ್ವಜನಿಕ ಅಡೆತಡೆ ಮಾಡದೆ, ಕಾನೂನು ಬಾಹಿರ ಚಟುವಟಿಕೆ ಮಾಡದೆ ತಮ್ಮ ಲೈಂಗಿಕ ಕಾರ್ಯ ಚಟುವಟಿಕೆಯನ್ನು ಖಾಸಗಿಯಾಗಿ ನಡೆಸಬೇಕು. ಸೆಕ್ಸ್ ಕಾರ್ಯ ಚಟುವಟಿಕೆಯು ಸಾರ್ವಜನಿಕ ಸ್ಥಳದಿಂದ 200 ಯಾರ್ಡ್ಸ್ ದೂರದಲ್ಲಿ ಇರಬೇಕು. ಸೆಕ್ಸ್ ರಾಕೆಟ್ ತನಿಖೆ ನಡೆಸುವಾಗ ಸ್ಪೆಷಲ್ ಪೊಲೀಸ್ ಅಧಿಕಾರಿಯು ಪ್ರತಿಯೊಂದು ವಸ್ತುವನ್ನು ಜಪ್ತಿ ಮಾಡಬೇಕು. ಅದರಲ್ಲಿ ಪ್ರಮುಖವಾದದ್ದು ಎಂದರೆ, ಮೊಬೈಲ್, ಕಾಂಡೊಮ್, ಹೆಣ್ಣಿನ ಉಡುಗೆಗಳು, ಯೋನಿ ಸ್ವಾಬ್, ಹಣದ ನೋಟುಗಳು, ಕೂದಲು, ಗರ್ಭಕಂಠದ ಸ್ವಾಬ್, ಸಾರ್ವಜನಿಕ ಕೂದಲು, ಹೆಚ್ಚಿನ ಯೋನಿ ಸ್ಮೆಯರ್, ರಕ್ತದ ಸ್ಯಾಂಪಲ್, ನೆತ್ತಿಯ ಕೂದಲು, ಉಗುರಿನ ಕ್ಲಿಪಿಂಗ್, ವೈರಲ್ ವೀರ್ಯ, ಗಾಯದ ಪ್ರಮಾಣಪತ್ರ, ಸಾಕ್ಷಿದಾರರ ಸಹಿಗಳು.

ಬಾಸ್ಕೋ (BOSCO) ಸಂಸ್ಥೆಯು ಇಂತಹ ಲೈಂಗಿಕ ಹಿಂಸೆಯಿಂದ ನೊಂದ ಹೆಣ್ಣು ಮಕ್ಕಳ ನೆರವಾಗಿ ನಿಂತು ಸದಾಕಾಲ ಸಹಾಯ ಹಸ್ತ ಚಾಚುತ್ತಿದೆ. 2011 ರಲ್ಲಿ, ಸರ್ವೋಚ್ಚ ನ್ಯಾಯಲಯವು ಸರ್ಕಾರಕ್ಕೆ ಆದೇಶವನ್ನು ನೀಡಿದೆ. ಆ ಆದೇಶದ ಪ್ರಕಾರ, ದೇಶವ್ಯಾಪ್ತಿ ಇರುವ ಲೈಂಗಿಕ ಕಾರ್ಯಕರ್ತೆಯರ ಸಂಖ್ಯೆಯನ್ನು ಸಮೀಕ್ಷೆ ನಡೆಸಿ, ಅವರಿಗೆ ಪುನರ್ವಸತಿ ಕಲ್ಪಿಸಿಕೊಡುವುದು ಸರ್ಕಾರದ ಕರ್ತವ್ಯವಾಗಿದೆ. 2012ರಲ್ಲಿ ಕೇಂದ್ರ ಸರ್ಕಾರವು ಸರ್ಕಾರಿ ಸಂಸ್ಥೆಗಳಿಗೆ ಮನವಿ ಮಾಡಿದೆ. ಲೈಂಗಿಕ ಕಾರ್ಯಕರ್ತೆಯರಿಗೆ ಸಮಾಜದಲ್ಲಿ ಗೌರವದಿಂದ ಬದುಕುವ ಹಕ್ಕು ಇದೆ. ಆಸ್ಪತ್ರೆಗಳಲ್ಲಿ ಅವರು ಅಬಾರ್ಶನ್ ಮಾಡಿಸಿಕೊಳ್ಳಲು ಹೋದಾಗ ಅವರಿಗೆ ಗಂಡನ ಸಹಿಯ ಬಲವಂತ ಮಾಡುವ ಹಾಗಿಲ್ಲ. ಕಾರಣ, ಅವರ ಆರೋಗ್ಯ ಕ್ಷೇಮ ಪ್ರಮುಖವಾದ ಅಂಶ. ಅವರಿಂದ ಆಸ್ಪತ್ರೆ ಖರ್ಚು ಹೆಚ್ಚು ಭರಿಸಲು ಸಾಧ್ಯವಿಲ್ಲದ ಕಾರಣ ಆಸ್ಪತ್ರೆ ಅವರಿಗೆ ಹೆಚ್ಚು ಬಿಲ್ ಮಾಡುವ ಹಾಗಿಲ್ಲ. ಕಡ್ಡಾಯವಾಗಿ ಏಡ್ಸ್ ಪರೀಕ್ಷೆ ಮಾಡಲೇಬೇಕು. 2021ರಲ್ಲಿ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಲೈಂಗಿಕ ಕಾರ್ಯಕರ್ತೆಯರಿಗೆ ಯಾವುದೇ ವಿಳಾಸದ ದಾಖಲೆ ಕೇಳದೆ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಮಾಡಿಕೊಡಬೇಕು.

ಒಟ್ಟಾರೆಯಾಗಿ ಹೇಳೋದಾದ್ರೆ, “ಹೆಣ್ಣು ಮಕ್ಕಳನ್ನು ಸುಶಿಕ್ಷಿತಳನ್ನಾಗಿ ಮಾಡಿ, ಆಕೆಗೆ ಸುರಕ್ಷೆಯ ಜೀವನ ನೀಡುವುದರ ಮೂಲಕ ಸಮಾಜದ ಪ್ರತಿಯೋರ್ವರು ಲೈಂಗಿಕ ಕಾರ್ಯ ಚಟುವಟಿಕೆಗೆ ಸಂಪೂರ್ಣ ವಿರಾಮ ನೀಡಬಹುದು.


Share It

You cannot copy content of this page