ಬೆಂಗಳೂರು: ಘೋರ ಅಪರಾಧ ಎಸಗಿರುವ ಆರೋಪಕ್ಕೆ ಸಿಲುಕಿರದ ವ್ಯಕ್ತಿಗಳ ವಿರುದ್ಧ ಜಾಮೀನು ರಹಿತ ವಾರಂಟ್ ಗಳನ್ನು ವಾಡಿಕೆಯಂತೆ ಜಾರಿ ಮಾಡುವ ನ್ಯಾಯಾಲಯಗಳಿಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದೆ.
ಘೋರ ಅಪರಾಧ ಎಸಗಿರುವ ಆರೋಪಕ್ಕೆ ಸಿಲುಕಿಲ್ಲದ ಅಥವಾ ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಇದೆ ಎಂದೆನಿಸದ ಅಥವಾ ಕಾನೂನು ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳುತ್ತಿದ್ದಾನೆ ಎಂದೆನ್ನಿಸದ ಆರೋಪಿಗಳ ವಿರುದ್ಧ ನೇರವಾಗಿ ಜಾಮೀನು ರಹಿತ ವಾರಂಟ್ ಜಾರಿ ಮಾಡಬಾರದೆಂದು ಸುಪ್ರೀಂ ಕೋರ್ಟ್ ಹೇಳಿದೆ.
ಮೇ 1 ರಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಲ್ಲಿ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಹಾಗು ನ್ಯಾ. ಎಸ್.ವಿ.ಎನ್ ಭ್ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪೀಠ ತನ್ನ ತೀರ್ಪಿನಲ್ಲಿ, ಜಾಮೀನು ರಹಿತ ವಾರಂಟ್‌ಗಳನ್ನು ನೀಡಲು ಯಾವುದೇ ಸಮಗ್ರ ಮಾರ್ಗಸೂಚಿಗಳಿಲ್ಲದಿದ್ದರೂ, ಆರೋಪಿಯ ಮೇಲೆ ಘೋರ ಅಪರಾಧದ ಆರೋಪ ಹೊರಿಸದ ಹೊರತು ಜಾಮೀನು ರಹಿತ ವಾರಂಟ್‌ಗಳನ್ನು ಹೊರಡಿಸಬಾರದು ಎಂದಿದೆ.
ಅಲ್ಲದೇ, ಆರೋಪಿ ಗಂಭೀರ ಸ್ವರೂಪದ ಆರೋಪ ಎದುರಿಸುತ್ತಿದ್ದಾನೆ ಮತ್ತು ಕಾನೂನಿನ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ ಎನ್ನಿಸಿದರೆ ಅಥವಾ ಸಾಕ್ಷ್ಯವನ್ನು ತಿರುಚುವ/ ನಾಶಪಡಿಸುವ ಸಾಧ್ಯತೆ ಇದೆ ಎನ್ನಿಸದ ಹೊರತು ಇಂತಹ ಜಾಮೀನು ರಹಿತ ವಾರಂಟ್ ಗಳನ್ನು ವಾಡಿಕೆಯಂತೆ ಜಾರಿ ಮಾಡಬಾರದು ಎಂದು ತಿಳಿಸಿದೆ.
ಅಲ್ಲದೇ, ಪ್ರಕರಣವು ಸಾರ್ವಜನಿಕ ಅಥವಾ ರಾಜ್ಯದ ಹಿತಾಸಕ್ತಿ ಹೊಂದಿಲ್ಲದ ಹೊರತು ವ್ಯಕ್ತಿಯ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲಾಗದು. ಅದರಂತೆ ಜಾಮೀನು ರಹಿತ ವಾರಂಟ್ ಗಳನ್ನು ವಾಡಿಕೆಯಂತೆ ಜಾರಿ ಮಾಡಲಾಗದು ಎಂಬುದು ಕಾನೂನಿನ ನಿಲುವು ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ: ಖಾಸಗಿ ವ್ಯಕ್ತಿಗಳ ನಡುವಿನ ಹಣಕಾಸು ವಿವಾದ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐಪಿಸಿ ಸೆಕ್ಷನ್ 323, 504, 506, 120ಬಿ, 308, 325 ಅಡಿಯಲ್ಲಿ ಪೊಲೀಸರು ಕ್ರಿಮಿನಲ್ ಕೇಸ್ ದಾಖಲಿಸಿದ್ದರು. ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ನ್ಯಾಯಾಲಯ ಜಾಮೀನು ಸಹಿತ ವಾರಂಟ್ ಜಾರಿ ಮಾಡಿತ್ತು. ಹಾಗಿದ್ದರೂ ಆರೋಪಿ ನ್ಯಾಯಾಲಯದ ಮುಂದೆ ಹಾಜರಾಗದ ಹಿನ್ನೆಲೆಯಲ್ಲಿ ವಿಚಾರಣಾ ನ್ಯಾಯಾಲಯ ಮೇಲ್ಮನವಿದಾರನ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ ಮಾಡಿತ್ತು. ಕೋರ್ಟ್ ಜಾರಿ ಮಾಡಿದ್ದ ವಾರಂಟ್ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದ್ದರಿಂದ ಮೇಲ್ಮನವಿದಾರರು ಸುಪ್ರೀಂ ಮೊರೆ ಹೋಗಿದ್ದರು.
(SPECIAL LEAVE PETITION (CRL.) NO. 1074 OF 2017)