ಬೆಂಗಳೂರು: ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಚರ್ಚ್ ಪಾದ್ರಿಯ ಆತ್ಮಹತ್ಯೆಗೆ, ಆಕೆಯ ಪತಿಯ ಪ್ರಚೋದನೆ ಕಾರಣ ಎನ್ನಲು ಸಾಧ್ಯವಿಲ್ಲ, ಮನುಷ್ಯನ ಮನಸ್ಸು ನಿಗೂಢ ಹಾಗೂ ಮನಸ್ಸಿನ ರಹಸ್ಯ ಬಿಚ್ಚಿಡುವುದು ಅಸಾಧ್ಯ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ರದ್ದುಗೊಳಿಸುವಂತೆ ಕೋರಿ ಉಡುಪಿಯ ಡೇವಿಡ್ ಡಿಸೋಜಾ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ನೀಡಿದೆ. ಪೀಠ ತನ್ನ ತೀರ್ಪಿನಲ್ಲಿ, ಪತ್ನಿಯ ಜತೆಗೆ ಮೃತರು ಸಂಬಂಧ ಹೊಂದಿದ್ದರು. ಈ ವಿಚಾರ ಅವರ ಗಮನಕ್ಕೆ ಬಂದಾಗ ಭಯದಲ್ಲಿ ಹೋಗಿ ನೇಣಿಗೆ ಶರಣಾಗಿದ್ದಾರೆ. ಇದು ಆತ್ಮಹತ್ಯೆಗೆ ಪ್ರಚೋದನೆ ನೀಡಿದಂತಾಗುವುದಿಲ್ಲ. ಅಲ್ಲದೆ, ಪಾದ್ರಿ 2019 ರ ಅಕ್ಟೋಬರ್ 11 ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2020 ರ ಫೆಬ್ರವರಿ 26ರಂದು ಅರ್ಜಿದಾರರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ದೂರಿನಲ್ಲಿ ಆರೋಪಿ ಡೇವಿಡ್ ಡಿಸೋಜಾ ಹಾಗೂ ಮೃತ ಪಾದ್ರಿ ಮಹೇಶ್ ಡಿಸೋಜಾ ದೂರವಾಣಿಯ ಮೂಲಕ ಸಂಭಾಷಣೆ ನಡೆಸಿದ ಬಳಿಕ ಕೆಲವೇ ಹೊತ್ತಿನಲ್ಲಿ ಪಾದ್ರಿಯೂ ಆತ್ಮಹತ್ಯೆಗೆ ಶರಣಾಗಿದ್ದರು ಎಂದು ತಿಳಿಸಲಾಗಿದೆ. ಆತ್ಮಹತ್ಯೆಗೆ ಹಲವು ಕಾರಣಗಳು ಇರಬಹುದು. ಅದರಲ್ಲಿ ಒಂದು ಚರ್ಚ್ ನ ಪಾದ್ರಿಯಾಗಿ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿರುವುದು ಆಗಿರಬಹುದು. ಮನುಷ್ಯನ ಮನಸ್ಸು ಅತ್ಯಂತ ನಿಗೂಢ. ಆತನ ಮನಸ್ಸಿನ ರಹಸ್ಯ ಬಿಚ್ಚಿಡುವುದು ಅಸಾಧ್ಯ. ಆದ್ದರಿಂದ ಅರ್ಜಿದಾರರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದ್ದರೂ ಮುಂದಿನ ಪ್ರಕ್ರಿಯೆಗಳಿಗೆ ಅನುಮತಿ ನೀಡುವುದು ಕಾನೂನು ದುರ್ಬಳಕೆಯಾಗಲಿದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ, ಪ್ರಕರಣವನ್ನು ರದ್ದುಪಡಿಸಿದೆ.
ಉಡುಪಿ ಜಿಲ್ಲೆಯ ಶಿರ್ವಾ ಚರ್ಚ್ ನ ಸಹಾಯಕ ಧರ್ಮಗುರು ಹಾಗೂ ಶಿರ್ವಾ ಡಾನ್ ಬಾಸ್ಕೋ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಫಾದರ್ ಮಹೇಶ್ ಡಿಸೋಜ ಅವರು 2019 ರ ಅಕ್ಟೋಬರ್ 11 ರಂದು ರಾತ್ರಿ ಶಾಲೆಯ ಮುಖ್ಯೋಪಾಧ್ಯಾಯರ ಕೊಠಡಿಯ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಆತ್ಮಹತ್ಯೆ ಪ್ರಕರಣ ಹಲವು ಸಂಶಯಗಳಿಗೆ ಕಾರಣವಾಗಿತ್ತು. ಘಟನೆ ಸಂಬಂಧ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 204, 306, 504, 506 ಅಡಿ ಎಫ್ಐಆರ್ ದಾಖಲಿಸಿದ್ದರು.
ಪ್ರಕರಣದ ತನಿಖಾ ಹಂತದಲ್ಲಿ, ಆತ್ಮಹತ್ಯೆಗೆ ಶರಣಾಗುವ ಕೆಲವು ಹೊತ್ತಿಗೆ ಮುನ್ನ ಮೃತರ ಮೊಬೈಲ್ ಸಂಖ್ಯೆಗೆ 3 ಕರೆಗಳು ಬಂದಿರುವುದು ಸಿಡಿಆರ್‌ನಿಂದ ಗೊತ್ತಾಗಿತ್ತು. ಆ ಕರೆಯ ಕಾಲ್ ರೆಕಾರ್ಡಿಂಗ್‌ನಲ್ಲಿ ಅರ್ಜಿದಾರರು ಮತ್ತು ಮೃತರು ಕೊಂಕಣಿ ಭಾಷೆಯಲ್ಲಿ ಸಂಭಾಷಣೆ ನಡೆಸಿದ್ದು ಪಾದ್ರಿಗೆ ಬೈದಿದ್ದಾರೆ. ನೀನು ನನ್ನ ಪತ್ನಿಗೆ ಏನೆಂದು ಮೆಸೇಜ್ ಮಾಡುತ್ತೀಯಾ? ಚರ್ಚಿಗೆ ಬಂದು ನಿನ್ನ ಸೊಂಟ ಮುರಿಯುತ್ತೇನೆ, ಆಕೆಯನ್ನು ಕತ್ತರಿಸುತ್ತೇನೆ. ನಿಮ್ಮ ಈ ಸಂಬಂಧದ ಕುರಿತು ಬಹಿರಂಗಪಡಿಸುತ್ತೇನೆ. ನೀನು ಆತ್ಮಹತ್ಯೆ ಮಾಡಿಕೋ, ಆಕೆಯೂ ಆತ್ಮಹತ್ಯೆಗೆ ಶರಣಾಗುತ್ತಾಳೆ ಎಂದು ಮಾತನಾಡಿರುವ ಹೇಳಿಕೆ ದಾಖಲಾಗಿತ್ತು.
ಇದಾದ ಬಳಿಕ ಮಹೇಶ್ ಡಿಸೋಜ ಶಾಲೆಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಅಲ್ಲದೆ ಆರೋಪಿಯ ಕರೆ ಬಂದ ಬಳಿಕ 30 ನಿಮಿಷದೊಳಗೆ ಸಾವನ್ನಪ್ಪಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಗೊತ್ತಾಗಿತ್ತು. ಈ ಸಂಬಂಧ ಆರೋಪಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೇಟ್ಟಿಲೇರಿದರು.
ಪ್ರಕರಣದ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರು ಮೃತ ಪಾದ್ರಿ ತನ್ನ ಪತ್ನಿಯ ಜತೆಗೆ ಅಕ್ರಮ ಸಂಬಂಧ ಹೊಂದಿರುವುದನ್ನು ತಿಳಿದ ಕೂಡಲೇ ಪಾದ್ರಿಗೆ ಕರೆ ಮಾಡಿ ಚರ್ಚಿಸಿದ್ದರು. ಇದೇ ಸಂದರ್ಭದಲ್ಲಿ ನೇಣು ಹಾಕಿಕೊಳ್ಳಿ ಎಂದು ಹೇಳಿದ್ದರು. ಇದು ಆತ್ಮಹತ್ಯೆಗೆ ಪ್ರಚೋದನೆ ನೀಡಿದಂತಾಗದು. ಅಲ್ಲದೆ, ಪ್ರಕರಣದಲ್ಲಿ ಪಾದ್ರಿಯೂ ತನ್ನ ಅಕ್ರಮ ಸಂಬಂಧ ವಿಷಯ 3ನೇ ವ್ಯಕ್ತಿಗಳಿಗೆ ತಿಳಿದಿದೆ ಎಂದು ಗಾಬರಿಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾಗಾಗಿ ಅರ್ಜಿದಾರರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆಂದು ಆರೋಪಿಸಲಾಗದು. ಹೀಗಾಗಿ, ಪ್ರಕರಣ ರದ್ದುಗೊಳಿಸಬೇಕು ಎಂದು ಮನವಿ ಮಾಡಿದ್ದರು. ಮನವಿ ಪುರಸ್ಕರಿಸಿದ ನ್ಯಾಯಾಲಯ ಪ್ರಕರಣವನ್ನು ರದ್ದುಗೊಳಿಸಿದೆ.
(CRIMINAL PETITION No.4851 OF 2022)