ಬೆಂಗಳೂರು: ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಮಾಜಿ ಸಚಿವ ಎಚ್ ಡಿ ರೇವಣ್ಣ ಹಿಂಪಡೆದಿದ್ದಾರೆ.
ಸಂತ್ರಸ್ತ ಮಹಿಳೆಯರಿಬ್ಬರು ದಾಖಲಿಸಿರುವ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಎಚ್ ಡಿ ರೇವಣ್ಣ ಮಧ್ಯಂತರ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಇಂದು ವಿಚಾರಣೆ ನಡೆಸಿದರು.
ವಿಚಾರಣೆ ವೇಳೆ ಎಸ್ಐಟಿ ಪೊಲೀಸರ ಪರ ಹಾಜರಿದ್ದ ವಿಶೇಷ ಸರ್ಕಾರಿ ಅಭಿಯೋಜಕರಾದ ಬಿ ಎನ್ ಜಗದೀಶ್ ಅವರು ನ್ಯಾಯಾಲಯಕ್ಕೆ ಮಾಹಿತಿ ನೀಡಿ, ಹೊಳೆನರಸೀಪುರ ಪಟ್ಟಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ಗೆ ಯಾವುದೇ ಹೊಸ ಸೆಕ್ಷನ್‌ಗಳನ್ನು ಅನ್ವಯಿಸಿಲ್ಲ. ರೇವಣ್ಣ ಅವರಿಗೆ ತನಿಖೆಗೆ ಹಾಜರಾಗುವಂತೆ ಸಿಆರ್ಪಿಸಿ ಸೆಕ್ಷನ್ 41ಎ ಅಡಿ ನೋಟಿಸ್ ಜಾರಿ ಮಾಡಲಾಗಿದೆ. ಅವರ ವಿರುದ್ಧದ ಆರೋಪಗಳು ಜಾಮೀನು ನೀಡುವಂತಹವಾಗಿವೆ ಎಂದು ಮೆಮೊ ಸಲ್ಲಿಸಿದರು.
ಈ ವೇಳೆ ಆರೋಪಿ ಎಚ್.ಡಿ ರೇವಣ್ಣ ಪರ ಹಿರಿಯ ವಕೀಲ ಮೂರ್ತಿ ಡಿ. ನಾಯಕ್ ನ್ಯಾಯಾಲಯಕ್ಕೆ ಮನವಿ ಮಾಡಿ, ಎಸ್‌ಪಿಪಿ ಹೇಳಿಕೆಯನ್ನು ದಾಖಲಿಸಿಕೊಳ್ಳಬೇಕು ಎಂದರು. ಅಲ್ಲದೇ, ಅಗತ್ಯ ಬಿದ್ದಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಲು ಅನುಮತಿಸಲು ಅವಕಾಶವಿರುವಂತೆ ತಮ್ಮ ಅರ್ಜಿಯನ್ನು ಹಿಂಪಡೆಯಲು ಸಮ್ಮತಿಸುವಂತೆ ನ್ಯಾಯಾಲಯಕ್ಕೆ ಕೋರಿದರು. ರೇವಣ್ಣ ಪರ ವಕೀಲರ ಮನವಿಯಂತೆ ನ್ಯಾಯಾಲಯ ಅರ್ಜಿಯನ್ನು ಇತ್ಯರ್ಥಪಡಿಸಿತು.
ಸಂತ್ರಸ್ತ ಮಹಿಳೆಯು ರೇವಣ್ಣ ಹಾಗೂ ಅವರ ಪುತ್ರ ಪ್ರಜ್ವಲ್ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಿ ನೀಡಿದ ದೂರಿನ ಮೇರೆಗೆ ಆರೋಪಿತರ ವಿರುದ್ಧ ಐಪಿಸಿ ಸೆಕ್ಷನ್ 354A (ಲೈಂಗಿಕ ಕಿರುಕುಳ), 354D (ಹಿಂಬಾಲಿಸುವಿಕೆ), 506 (ಅಪರಾಧ ಬೆದರಿಕೆ), ಮತ್ತು 509 (ಮಹಿಳೆಗೆ ಅವಮಾನ) ಅಡಿಯಲ್ಲಿ ಹಾಸನ ಜಿಲ್ಲೆ ಹೊಳೆನರಸೀಪುರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.