ಪ್ರತಿ ತಿಂಗಳು ಹಣ ಕೊಡಬೇಕು, ಇಲ್ಲದೇ ಹೋದರೆ ನಿಮ್ಮ ವಿರುದ್ಧ ಮಾನಹಾನಿಕರ ಲೇಖನ ಪ್ರಕಟಿಸುತ್ತೇನೆ ಎಂದು ಬೆದರಿಕೆ ಹಾಕಿದ್ದ ಆರೋಪ ಪ್ರಕರಣದಲ್ಲಿ ಪತ್ರಕರ್ತ ಅಮಿತ್ ಮೌರ್ಯ ಎಂಬಾತನಿಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಯು.ಪಿ. ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಅಪಪ್ರಚಾರ ಮಾಡಿದ ಹಾಗೂ ಪ್ರತಿ ತಿಂಗಳು ಹಣ ಕೊಡದಿದ್ದರೆ ಮಾನಹಾನಿಕರ ಲೇಖನ ಪ್ರಕಟಿಸುವುದಾಗಿ ಪೂರ್ವಾಂಚಲ್ ಟ್ರಕ್ ಮಾಲೀಕರ ಸಂಘದ ಉಪಾಧ್ಯಕ್ಷರಿಗೆ ಬೆದರಿಕೆ ಹಾಕಿದ್ದ ಆರೋಪ ಪ್ರಕರಣದಲ್ಲಿ ಜಾಮೀನು ಕೋರಿ ಪತ್ರಕರ್ತ ಅಮಿತ್ ಕೋರ್ಟ್ ಮೊರೆ ಹೋಗಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್ ಆರೋಪಿ ಪತ್ರಕರ್ತನಿಗೆ ಜಾಮೀನು ನೀಡಲು ನಿರಾಕರಿಸಿದೆ. ಪತ್ರಕರ್ತರ ಇಂತಹ ಕ್ರಮಗಳು ಪತ್ರಿಕೋದ್ಯಮದ ಸಮಗ್ರತೆಯನ್ನು ಹಾಳುಮಾಡುತ್ತದೆ. ಅಷ್ಟೇ ಅಲ್ಲ ಸಾರ್ವಜನಿಕರು ಮಾಧ್ಯಮಗಳ ಮೇಲಿಟ್ಟಿರುವ ನಂಬಿಕೆಯನ್ನು ಕುಗ್ಗಿಸುತ್ತದೆ ಮತ್ತು ಪ್ರಜಾಸತ್ತಾತ್ಮಕ ಮೌಲ್ಯವನ್ನು ನಾಶಪಡಿಸುತ್ತದೆ ಎಂದು ಅಭಿಪ್ರಾಯಪಟ್ಟಿದೆ.
ಅಲ್ಲದೇ, ಧಾರ್ಮಿಕ ವೈವಿಧ್ಯತೆಗಳಿಂದ ಕೂಡಿರುವ ಭಾರತದಲ್ಲಿ ಪರಸ್ಪರ ಗೌರವ ಮತ್ತು ತಿಳುವಳಿಕೆಯ ವಾತಾವರಣವನ್ನು ಬೆಳೆಸುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಪ್ರಕಾಶಕರು ಮತ್ತು ಪತ್ರಕರ್ತರು ನಿರ್ಣಾಯಕ ಪಾತ್ರ ವಹಿಸುತ್ತಾರೆ. ಇಂತಹ ಪತ್ರಕರ್ತರು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು. ಸಹಿಷ್ಣುತೆ, ಗೌರವ ಮತ್ತು ಸಮಾನತೆಯ ತತ್ವಗಳನ್ನು ಎತ್ತಿಹಿಡಿಯುವ ಮೂಲಕ ಜಾತ್ಯತೀತ ಪ್ರಜಾಪ್ರಭುತ್ವಕ್ಕೆ ಶಕ್ತಿ ತುಂಬಬೇಕು ಎಂದು ಹೈಕೋರ್ಟ್ ಹೇಳಿದೆ
ಆದರೆ ಈ ಪ್ರಕರಣದಲ್ಲಿ, ಆರೋಪಿ ಪತ್ರಕರ್ತರ ಸೋಗಿನಲ್ಲಿ ಪತ್ರಿಕೋದ್ಯಮವನ್ನು ಬಲಾತ್ಕಾರದ ಸಾಧನವಾಗಿ ದುರುಪಯೋಗ ಮಾಡಿಕೊಂಡಿದ್ದಾನೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟು ಜಾಮೀನು ನೀಡಲು ನಿರಾಕರಿಸಿದೆ.
ಆರೋಪಿ ಪತ್ರಕರ್ತನ ವಿರುದ್ಧ, ಪ್ರಧಾನಮಂತ್ರಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೆಲವು ಧಾರ್ಮಿಕ ಮುಖಂಡರು ಸೇರಿದಂತೆ ಸಾರ್ವಜನಿಕ ಜೀವನದಲ್ಲಿ ಗುರುತಿಸಿಕೊಂಡಿರುವ ಗಣ್ಯ ವ್ಯಕ್ತಿಗಳ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿ ಪೋಸ್ಟ್ ಗಳನ್ನು ಹಾಕಿದ ಮತ್ತು ದ್ವೇಷ ಭಾಷಣವನ್ನು ಮಾಡಿದ ಆರೋಪದಡಿ ಮತ್ತು ಸುಲಿಗೆ ಆರೋಪದಡಿ ಯುಪಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Case: CRIMINAL MISC. BAIL APPLICATION No. 6712 of 2024