News ⓇJudgements

ಅಪ್ಪ-ಅಮ್ಮ ಇಬ್ಬರೂ ಬೇಕೆಂದ ಮಗು: ಅಪರೂಪದ ತೀರ್ಪು ಪ್ರಕಟಿಸಿದ ಹೈಕೋರ್ಟ್

Share It

ಬೆಂಗಳೂರು: ದಂಪತಿ ವಿಚ್ಛೇದನ ಪಡೆದಾಗ ಮಗುವಿಗಾಗಿ ಅಪ್ಪ-ಅಮ್ಮನ ನಡುವೆ ವ್ಯಾಜ್ಯ ಏರ್ಪಡುವುದು ಸಾಮಾನ್ಯ. ಇಂತಹ ಸಂದರ್ಭದಲ್ಲಿ ಅಪ್ರಾಪ್ತ ಮಕ್ಕಳು ಸಹಜವಾಗಿ ತಾಯಿಯ ಸುಪರ್ದಿಗೆ ಹೋಗುತ್ತಾರೆ. ಆದರೆ ಪ್ರಕರಣವೊಂದರಲ್ಲಿ ಮಗು ಅಪ್ಪ-ಅಮ್ಮ ಇಬ್ಬರೂ ಬೇಕೆಂದು ಕೇಳಿಕೊಂಡಿದ್ದನ್ನು ಪರಿಗಣಿಸಿರುವ ಹೈಕೋರ್ಟ್, ಮಗುವಿನ ಸುಪರ್ದಿಯನ್ನು ತಂದೆ-ತಾಯಿ ಇಬ್ಬರ ನಡುವೆಯೂ ಹಂಚಿಕೆ ಮಾಡಿ ಅಪರೂಪದ ತೀರ್ಪು ನೀಡಿದೆ.

ದೇಶದ ಕಾನೂನುಗಳಲ್ಲಿ ವಿಚ್ಛೇದಿತ ದಂಪತಿಯ ನಡುವೆ ಅಪ್ರಾಪ್ತ ಮಕ್ಕಳ ಪಾಲನೆಯನ್ನು ಹಂಚಿಕೆ ಮಾಡುವ ನಿಯಮಗಳಿಲ್ಲ. ಹಾಗಿದ್ದೂ ಹೈಕೋರ್ಟ್ ವಿಭಾಗೀಯ ಪೀಠ ವಿದೇಶಗಳಲ್ಲಿ ಜಾರಿಯಲ್ಲಿರುವ ಮಕ್ಕಳ “ಪಾಲನೆ ಹಂಚಿಕೆ” (Shared parenting) ಆಧಾರದಲ್ಲಿ ಪೋಷಕರಿಬ್ಬರೂ ಮಗುವಿನ ಸುಪರ್ದಿಯನ್ನು ನೀಡಿದೆ. ಮಗುವಿಗಾಗಿ ಪೋಷಕರಿಬ್ಬರೂ ನ್ಯಾಯಾಲಯದಲ್ಲಿ ಹಲವು ವರ್ಷಗಳಿಂದ ಕಾನೂನು ಹೋರಾಟ ಮಾಡುತ್ತಿದ್ದುದನ್ನು ಹಾಗೂ ಮಗುವಿಗೆ ಇಬ್ಬರೂ ಬೇಕೆಂಬುದನ್ನು ಗಮನದಲ್ಲಿಟ್ಟುಕೊಂಡು ಇಂತಹ ವಿರಳಾತಿ ವಿರಳ ತೀರ್ಪು ಪ್ರಕಟಿಸಿದೆ.

ಪ್ರಕರಣದ ಹಿನ್ನೆಲೆ: ಕೆಲ ಕಾಲ ಅಮೆರಿಕಾದಲ್ಲಿ ವಾಸವಿದ್ದ ಬೆಂಗಳೂರಿನ ದಂಪತಿ ನಡುವೆ ವಿರಸ ಉಂಟಾಗಿ ಪರಸ್ಪರ ಸಮ್ಮತಿ ಮೇರೆಗೆ ವಿಚ್ಛೇದನ ಪಡೆದುಕೊಂಡಿದ್ದರು. ಆದರೆ ಮಗುವಿನ ಸುಪರ್ದಿಗಾಗಿ ಇಬ್ಬರೂ ಕಾನೂನು ಹೋರಾಟ ಮಾಡಿಕೊಂಡು ಬಂದಿದ್ದರು. ಪ್ರಕರಣ ಬೆಂಗಳೂರಿನ 3ನೇ ಹೆಚ್ಚುವರಿ ಪ್ರಧಾನ ಕೌಟುಂಬಿಕ ನ್ಯಾಯಾಲಯದ ಎದುರು ಬಂದಾಗ ಪೋಷಕರು ಮತ್ತು ರಕ್ಷಕರು ಕಾಯ್ದೆ -1890ರ ಅಡಿ ಆದೇಶ ನೀಡಿತ್ತು. 2014ರ ನವೆಂಬರ್ 21 ರಂದು ನೀಡಿದ್ದ ಆದೇಶದಲ್ಲಿ ಮಗುವನ್ನು ತಾಯಿಯ ಸುಪರ್ದಿಗೆ ನೀಡಿ, ತಂದೆಗೆ ವಾರಾಂತ್ಯಗಳಲ್ಲಿ, ರಜಾ ಕಾಲದಲ್ಲಿ ಭೇಟಿಯಾಗಲು ಅವಕಾಶ ನೀಡಿತ್ತು. ಆದರಂತೆ 2020ರ ಮಾರ್ಚ್ ಬೇಸಿಗೆ ರಜೆಗೆ ತಂದೆ ಮನೆಗೆ ಹೋದ ಮಗು ಲಾಕ್​ಡೌನ್​ ಪರಿಣಾಮವಾಗಿ ತಿಂಗಳುಗಳ ಕಾಲ ಅಲ್ಲೇ ಉಳಿದಿತ್ತು. ಈ ಹಿನ್ನೆಲೆಯಲ್ಲಿ ತಾಯಿ ಸಂಪೂರ್ಣ(ಪೂರ್ಣಾವಧಿ) ಸುಪರ್ದಿಯನ್ನು ತಮಗೇ ನೀಡುವಂತೆ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ನ್ಯಾಯಾಲಯ ಅರ್ಜಿ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ತಾಯಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ಅಪ್ಪ-ಅಮ್ಮ ಇಬ್ಬರೂ ಬೇಕೆಂದ ಮಗು: ಅರ್ಜಿಯನ್ನು ಸುದೀರ್ಘ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ 2020ರ ಫೆಬ್ರವರಿ 10 ರಂದು ಮಗುವನ್ನು ಪ್ರತ್ಯೇಕವಾಗಿ ಕರೆಸಿ ಅಭಿಪ್ರಾಯ ಆಲಿಸಿತ್ತು. ಈ ವೇಳೆ ಮಗು ತನಗೆ ಇಬ್ಬರೂ ಬೇಕು. ಹೀಗಾಗಿ ಇಬ್ಬರ ಮನೆಯಲ್ಲೂ ಉಳಿಯಲು ಅವಕಾಶ ಮಾಡಿಸಿಕೊಡಿ. ಆದರೆ, ಈ ವಿಚಾರವನ್ನು ಯಾರಲ್ಲಿಯೂ ಹೇಳಬೇಡಿ ಎಂದು ನ್ಯಾಯಮೂರ್ತಿಗಳಿಗೆ ಕೇಳಿಕೊಂಡಿತ್ತು.

ಹೈಕೋರ್ಟ್ ತೀರ್ಪು : ಮಗುವಿನ ಬೇಡಿಕೆ ಹಾಗೂ ಪೋಷಕರಿಬ್ಬರಿಗೂ ಮಗುವಿನ ಬಗ್ಗೆ ಕಾಳಜಿ ಇರುವುದನ್ನು ಪರಿಗಣಿಸಿದ ಪೀಠ, ಅಂತಿಮವಾಗಿ ಇಬ್ಬರಿಗೂ “ಪಾಲನೆ ಹಂಚಿಕೆ” ಮಾಡಿ ತೀರ್ಪು ನೀಡಿದೆ. ವರ್ಷದ 6 ತಿಂಗಳು ತಂದೆಯ ಮನೆಯಲ್ಲೂ, ಇನ್ನಾರು ತಿಂಗಳು ತಾಯಿಯ ಮನೆಯಲ್ಲೂ ಇರಬೇಕು. ಶೈಕ್ಷಣಿಕ ಅವಧಿ 10 ತಿಂಗಳಾದರೆ ತಲಾ 5-5 ತಿಂಗಳು ಹಾಗೂ ರಜಾ ಕಾಲದಲ್ಲಿ ಅರ್ಧರ್ಧ ಸಮಯ ಇಬ್ಬರ ಮನೆಯಲ್ಲಿರಬೇಕು. ಮಗು ಮತ್ತೊಬ್ಬರ ಜತೆಗಿದ್ದಾಗ ತಂದೆ ಅಥವಾ ತಾಯಿ ತಿಂಗಳ ಎರಡನೇ ಮತ್ತು ನಾಲ್ಕನೇ ಶುಕ್ರವಾರ ರಾತ್ರಿ 8 ಗಂಟೆಯಿಂದ ಭಾನುವಾರ ರಾತ್ರಿ 8ಗಂಟೆವರೆಗೂ ಜತೆಗಿರಿಸಿಕೊಂಡು ಕಳುಹಿಸಿಕೊಡಬೇಕು.

ಮಗುವಿನ ಮುಂದೆ ಪೋಷಕರು ಪರಸ್ಪರ ಆರೋಪ ಪ್ರತ್ಯಾರೋಪ ಮಾಡಬಾರದು. ಮಗುವಿನ ಮನಸ್ಸಿನಲ್ಲಿ ಮತ್ತೊಬ್ಬರ ಬಗ್ಗೆ ಬೇಸರ ಹುಟ್ಟವಂತೆ ನಡೆದುಕೊಳ್ಳಬಾರದು. ಮಗುವಿನ ಆರೋಗ್ಯ, ಶಿಕ್ಷಣ, ಪಠ್ಯೇತರ ಚಟುವಟಿಕೆಗಳ ಕುರಿತು ಪರಸ್ಪರ ಮಾಹಿತಿ ಹಂಚಿಕೊಳ್ಳಬೇಕು. ಒಬ್ಬರ ಮನೆಯಿಂದ ಮತ್ತೊಬ್ಬರ ಮನೆಗೆ ಹೋದಾಗ ಮಗುವಿನ ಮನಸ್ಸಿಗೆ ಕಿರಿಕಿರಿಯಾಗದಂತ ವಾತಾವರಣ ಮಾಡಿಕೊಡಬೇಕು. ಮಗುವಿನ ಮಾನಸಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಸರ್ವತೋಮುಕ ಅಭಿವೃದ್ಧಿಗೆ ಪೋಷಕರು ಜವಾಬ್ದಾರಿ ಹೊರಬೇಕು ಎಂದು ಸೂಚಿಸಿದೆ.

ಮಗುವಿಗೆ 18 ವರ್ಷಗಳಾಗುವವರೆಗೆ ಪೋಷಕರಿಬ್ಬರೂ ಈ ನಿರ್ದೇಶನಗಳನ್ನು ಪಾಲಿಸಬೇಕು. ಅಭ್ಯಂತರ ಇಲ್ಲವೆಂದರೆ ನಂತರವೂ ಮುಂದುವರೆಸಬಹುದು ಎಂದು ಸ್ಪಷ್ಟಪಡಿಸಿದೆ. ಪ್ರಸ್ತುತ ಪೋಷಕರಿಬ್ಬರೂ ಬೆಂಗಳೂರಿನಲ್ಲೇ ವಾಸವಿದ್ದು, ಬೇರೆಡೆ ತೆರಳುವ ಸಾಧ್ಯತೆಗಳಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ನಂತರವೇ ನ್ಯಾಯಾಲಯ ಈ ತೀರ್ಪು ಪ್ರಕಟಿಸಿದೆ. ಹಾಗೆಯೇ ತಾಯಿಯ ಮನೆಗೆ ಸಮೀಪದಲ್ಲೇ ತಂದೆ ಮನೆ ಮಾಡಿಕೊಳ್ಳುವಂತೆ ಸೂಚಿಸಿದೆ.

ಅನುಕಂಪ ವ್ಯಕ್ತಪಡಿಸಿರುವ ಹೈಕೋರ್ಟ್ : ನ್ಯಾಯಾಲಯ ತನ್ನ ತೀರ್ಪಿನಲ್ಲಿ ಅಪ್ಪ-ಅಮ್ಮ ವಿಚ್ಛೇದನ ಪಡೆದುಕೊಂಡಂತಹ ಸಂದರ್ಭದಲ್ಲಿ ಅತಿ ಹೆಚ್ಚು ಪರಿಣಾಮ ಬೀರುವುದು ಮಗುವಿನ ಮೇಲೆ. ಇವರಿಬ್ಬರ ಪ್ರತ್ಯೇಕತೆಯಿಂದ ಮಗು ಮಾನಸಿಕವಾಗಿ, ಭಾವನಾತ್ಮಕವಾಗಿ ಕುಗ್ಗಿ ಹೋಗುತ್ತದೆ. ಮಗುವಿನ ಸರ್ವತೋಮುಖ ಬೆಳವಣಿಗೆಗೆ ಪೋಷಕರಿಬ್ಬರೂ ಬೇಕು. ಇಬ್ಬರ ಆರೈಕೆ, ಪ್ರೀತಿ ಸಿಕ್ಕಾಗಲೇ ಮಗು ಎಲ್ಲ ರೀತಿಯಿಂದ ಉತ್ತಮವಾಗಿ ಬೆಳೆಯಲು ಸಾಧ್ಯ. ಇದು ಪೋಷಕರಿಬ್ಬರ ಜವಾಬ್ದಾರಿಯೂ ಹೌದು ಎಂದು ವಿಚ್ಛೇದಿತ ದಂಪತಿಯ ಮಕ್ಕಳ ಕುರಿತು ಅನುಕಂಪ ವ್ಯಕ್ತಪಡಿಸಿದೆ.

ತೀರ್ಪಿಗೆ ಆಧಾರವೇನು : ಅಪ್ಪ-ಅಮ್ಮ ವಿಚ್ಚೇದನ ಪಡೆದಾಗ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದನ್ನು ತಡೆಯಲು ಹಾಗೂ ಜವಾಬ್ದಾರಿಯನ್ನು ಹಂಚಿಕೆ ಮಾಡಲು ವಿದೇಶಗಳಲ್ಲಿ ಮಗುವಿನ ಪಾಲನೆಯ ಹಂಚಿಕೆ ಪದ್ದತಿ (Shared parenting system) ಸಾಕಷ್ಟು ಚಾಲ್ತಿಯಲ್ಲಿದೆ. ಭಾರತದಲ್ಲಿ ಇಂತಹ ಪ್ರಕರಣಗಳು ಬೇಕಾದಷ್ಟಿದ್ದರೂ ಈ ವ್ಯವಸ್ಥೆ ಜಾರಿಗೊಳಿಸಲು ಪೂರಕವಾದ ಕಾನೂನುಗಳಿಲ್ಲ. ಕೆನಡಾ, ಸಿಂಗಪೂರ್, ಕೀನ್ಯಾ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಇಂತಹ ಪದ್ದತಿ ಇದೆ. ಕೌಟುಂಬಿಕ ಕಾನೂನುಗಳಲ್ಲಿ ಮಕ್ಕಳ ಪಾಲನೆಯ ಹಂಚಿಕೆಯನ್ನು ನಿಯಮಬದ್ಧಗೊಳಿಸಲಾಗಿದೆ.

2014ರಲ್ಲಿ ಜರ್ಮನಿಯಲ್ಲಿ ನಡೆದ ಇಂಟರ್ ನ್ಯಾಷನಲ್ ಕೌನ್ಸಿಲ್ ಆನ್ ಶೇರ್ಡ್ ಪೇರೆಂಟಿಂಗ್ (ಐಸಿಎಸ್ ಪಿ) ಸಮಾವೇಶದಲ್ಲಿ ಪೋಷಕರು ಒಟ್ಟಿಗಿರಲಿ ಅಥವಾ ಪ್ರತ್ಯೇಕವಾಗಿರಲಿ ಅವರು ಮಗುವಿನ ಪೋಷಣೆ ಪಾಲನೆಯಲ್ಲಿ ಸಮನಾದ ಜವಾಬ್ದಾರಿ ಹೊಂದಬೇಕು ಎಂದು ನಿರ್ಣಯಿಸಲಾಗಿದೆ. ಯು.ಎಸ್ ನಲ್ಲಿ ನಡೆದ ಅಂತರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಒಪ್ಪಂದಗಳ ಪ್ರಕಾರ ಮಕ್ಕಳ ಇಚ್ಚೆಗೆ ವಿರುದ್ಧವಾಗಿ ಅವರನ್ನು ಪೋಷಕರಿಂದ ದೂರವಿರಿಸಬಾರದು ಎಂದು ನಿರ್ಣಯಿಸಲಾಗಿದೆ.

ಪಾಲನೆ ಹಂಚಿಕೆ ಪದ್ದತಿ ಸಂಬಂಧ ಭಾರತದಲ್ಲಿ ಯಾವುದೇ ಕಾನೂನು ಇಲ್ಲ. “ಭಾರತದಲ್ಲಿ ಪಾಲನೆ ಹಂಚಿಕೆಯ ಪದ್ದತಿ ಅಳವಡಿಸಿಕೊಳ್ಳುವುದು” ವಿಚಾರವಾಗಿ ಭಾರತ ಕಾನೂನು ಆಯೋಗ ಸಮಾಲೋಚನೆ ನಡೆಸಿದ ವರದಿಯನ್ನಷ್ಟೇ ಬಿಡುಗಡೆ ಮಾಡಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ. ಆಯೋಗ ಬಿಡುಗಡೆ ಮಾಡಿರುವ ವರದಿಯಲ್ಲಿ ಪೋಷಕರು ಮತ್ತು ರಕ್ಷಕರ ಕಾಯ್ದೆ-1890ನ್ನು ಬಲಪಡಿಸುವ, ಪೋಷಕರಿಬ್ಬರಿಗೂ ಮಗುವಿನ ಅಭಿರಕ್ಷೆ ಮತ್ತು ಪಾಲನೆ ವಿಚಾರವಾಗಿ ಸಮಾನ ಜವಾಬ್ದಾರಿ ನೀಡುವ ಕುರಿತು ಶಿಫಾರಸು ಮಾಡಲಾಗಿದೆ ಎಂದು ಕೋರ್ಟ್ ತನ್ನ ತೀರ್ಪಿಗೆ ಪೂರಕ ವಿಷಯಗಳನ್ನು ಪ್ರಸ್ತಾಪಿಸಿದೆ.

(M.F.A. No.1536 OF 2015 [GW])


Share It

You cannot copy content of this page