ಸುದ್ದಿ

ಸೊಸೆಯನ್ನು ಮಗಳಂತೆ ಪರಿಗಣಿಸಬಹುದು: ಸೊಸೆಗೆ ಅನುಕಂಪದ ನೌಕರಿ ನೀಡಲು ಹೈಕೋರ್ಟ್ ಸೂಚನೆ

Share It

ಅಲಹಾಬಾದ್: ಮೃತರ ಪುತ್ರ ಶೇ.75 ಅಂಗವೈಕಲ್ಯದಿಂದ ಬಳಲುತ್ತಿರುವುದನ್ನು ಪರಿಗಣಿಸಿದ ಅಲಹಾಬಾದ್ ಹೈಕೋರ್ಟ್ ಸೊಸೆಗೆ ಅನುಕಂಪದ ನೌಕರಿ ನೀಡಲು ಆದೇಶಿಸಿದೆ. ಇದೇ ವೇಳೆ ಸೊಸೆ ಕುಟುಂಬದ ಅವಿಭಾಜ್ಯ ಅಂಗವಾಗಿದ್ದು, ಮಗಳಂತೆ ಪರಿಗಣಿಸಬಹುದು ಎಂದು ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ಅನುಕಂಪದ ನೌಕರಿ ನಿರಾಕರಿಸಿದ ಕ್ರಮ ಪ್ರಶ್ನಿಸಿ ಮಹಿಳೆ(ಸೊಸೆ)ಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿವೇಕ್ ಕುಮಾರ್ ಬಿರ್ಲಾ ಮತ್ತು ನ್ಯಾಯಮೂರ್ತಿ ಡಿ ರಮೇಶ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಹೈಕೋರ್ಟ್ ತನ್ನ ತೀರ್ಪಿನಲ್ಲಿ, “ಭಾರತೀಯ ಸಮಾಜದ ಪದ್ಧತಿಯ ಪ್ರಕಾರ, ಸೊಸೆಯನ್ನು ಸಹ ಮಗಳಂತೆ ಪರಿಗಣಿಸಬೇಕು, ಏಕೆಂದರೆ ಅವಳು ಕುಟುಂಬದ ಅವಿಭಾಜ್ಯ ಅಂಗವಾಗಿದ್ದಾಳೆ. ಅನುಕಂಪದ ನೌಕರಿ ನೀಡುವುದರ ಉದ್ದೇಶ ಮರಣ ಹೊಂದಿದ ಸರ್ಕಾರಿ ನೌಕರನ ಅವಲಂಬಿತರಿಗೆ ಉದ್ಯೋಗದ ಮೂಲಕ ಆರ್ಥಿಕ ಪ್ರಯೋಜನವನ್ನು ವಿಸ್ತರಿಸುವುದಾಗಿದೆ. ಹೀಗಾಗಿ ಅನುಕಂಪದ ನೇಮಕಾತಿಯನ್ನು ಸೊಸೆಗೆ ನೀಡಬಹುದು ಎಂದು ತಿಳಿಸಿದೆ.

ಪ್ರಕರಣದ ಹಿನ್ನೆಲೆ: 2022 ರಲ್ಲಿ ಸರ್ಕಾರಿ ನೌಕರಿಯಲ್ಲಿದ್ದ ಮಹಿಳೆ(ಅತ್ತೆ) ಸಾವನ್ನಪ್ಪಿದ್ದರು. ಇದಕ್ಕೂ ಮುನ್ನವೇ 2019 ರಲ್ಲಿ ಅವರ ಪುತ್ರ ಅಪಘಾತಕ್ಕೆ ಸಿಲುಕಿ ತೀವ್ರವಾಗಿ ಗಾಯಗೊಂಡ ಪರಿಣಾಮ ಶೇಕಡಾ 75 ರಷ್ಟು ಅಂಗವೈಕಲ್ಯಕ್ಕೆ ಒಳಗಾಗಿದ್ದರು. ಮೃತರ ಪುತ್ರ ದೈಹಿಕ ನ್ಯೂನ್ಯತೆಗೆ ಸಿಲುಕಿದ್ದರಿಂದ ಕುಟುಂಬ ನಿರ್ವಹಣೆ ಅರ್ಜಿದಾರರ (ಸೊಸೆ) ಹೆಗಲೇರಿತ್ತು. ಈ ಹಿನ್ನೆಲೆಯಲ್ಲಿ ಅತ್ತೆಯ ಸಾವಿನ ಬಳಿಕ ಸೊಸೆ ಅನುಕಂಪದ ನೌಕರಿ ಕೋರಿ ಅರ್ಜಿ ಸಲ್ಲಿಸಿದ್ದರು.

ಆದರೆ ಉದ್ಯೋಗ ನೀಡಬೇಕಿದ್ದವರು, ಉತ್ತರ ಪ್ರದೇಶ ರಾಜ್ಯದಲ್ಲಿ ಅನುಕಂಪದ ನೌಕರಿ ನೀಡುವ (U.P. Recruitment of Dependents of Government Servants Dying in Harness Rules, 1974.) ನಿಯಮ 2(ಸಿ) ಅಡಿಯಲ್ಲಿ ಸೊಸೆಯನ್ನು ಅನುಕಂಪದ ನೌಕರಿ ಪಡೆಯಬಹುದಾದ ‘ಕುಟುಂಬ’ ವ್ಯಾಪ್ತಿಯಲ್ಲಿ ಸೇರಿಸಿಲ್ಲ ಎಂಬ ಕಾರಣಕ್ಕಾಗಿ ಅರ್ಜಿಯನ್ನು ತಿರಸ್ಕರಿಸಿದ್ದರು.

ಯುಪಿ ಕಾನೂನು: ನಿಯಮ 2(ಸಿ) ಯಲ್ಲಿನ ‘ಕುಟುಂಬ’ದ ವ್ಯಾಖ್ಯಾನದ ಅಡಿಯಲ್ಲಿ ಮೃತ ಸರ್ಕಾರಿ ನೌಕರರ ಪತ್ನಿ ಅಥವಾ ಪತಿ, ಪುತ್ರರು ಮತ್ತು ದತ್ತು ಪಡೆದ ಪುತ್ರರು, ಪುತ್ರಿಯರು (ದತ್ತು ಪಡೆದ ಹೆಣ್ಣುಮಕ್ಕಳು ಸೇರಿದಂತೆ) ಮತ್ತು ವಿಧವೆ ಸೊಸೆಯರು, ಅವಿವಾಹಿತ ಸಹೋದರರು, ಅವಿವಾಹಿತ ಸಹೋದರಿಯರು ಮತ್ತು ಮೃತ ಸರ್ಕಾರಿ ನೌಕರನ ಮೇಲೆ ಅವಲಂಬಿತರಾಗಿರುವ ವಿಧವೆ ತಾಯಿ ಒಳಪಡುತ್ತಾರೆ.

ಅರ್ಜಿದಾರರ ವಾದ: ಅರ್ಜಿದಾರರ ಪರ ವಕೀಲರು ವಾದಿಸಿ ನಿಯಮ 2 (ಸಿ) ಮತ್ತು ನಿಯಮ 5 ರ ಅನುಸಾರ ಅರ್ಜಿದಾರ ಸೊಸೆಯನ್ನು ಅನುಕಂಪದ ನೇಮಕಾತಿಗೆ ಅರ್ಹವಾದ ‘ಕುಟುಂಬ’ ವ್ಯಾಖ್ಯಾನದಲ್ಲಿ ಸೇರಿಸಿಲ್ಲ. ಆದರೆ ಶೇಕಡಾ 75 ರಷ್ಟು ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾಗಿರುವ ಪತಿಯೊಂದಿಗೆ ವಾಸಿಸುತ್ತಿರುವ ಅರ್ಜಿದಾರರನ್ನು ನಿಯಮಗಳ ಅಡಿಯಲ್ಲಿ ‘ಕುಟುಂಬ’ ವ್ಯಾಪ್ತಿಯಲ್ಲಿ ಸೇರಿಸಿಲ್ಲ ಎಂಬ ಕಾರಣಕ್ಕಾಗಿ ಅನುಕಂಪದ ನೇಮಕಾತಿಗೆ ಪರಿಗಣಿಸದಿರುವುದು ಮತ್ತು ಅವರ ಅರ್ಜಿಯನ್ನು ತಿರಸ್ಕರಿಸರಿಸುವುದು ಸರಿಯಲ್ಲ ಎಂದು ವಾದಿಸಿದರು.

ತೀರ್ಪು: ವಾದ ಪರಿಗಣಿಸಿದ ಹೈಕೋರ್ಟ್, ಉತ್ತರ ಪ್ರದೇಶ ರಾಜ್ಯದ ಅನುಕಂಪದ ನೌಕರಿ ನಿಯಮಗಳನ್ನು ಅಸಾಧಾರಣ ಸಂದರ್ಭಗಳಲ್ಲಿ ವಿಶಾಲವಾಗಿ ಅರ್ಥೈಸಿಕೊಳ್ಳಬೇಕು. ಈ ಪ್ರಕರಣದಲ್ಲಿ ಮೃತಪಟ್ಟಿರುವ ಉದ್ಯೋಗಿಯ ಮಗ ಶೇ 75 ರಷ್ಟು ಅಂಗವೈಕಲ್ಯಕ್ಕೆ ಒಳಗಾಗಿದ್ದಾರೆ. ಆತನಿಗೆ ಜೀವನೋಪಾಯಕ್ಕೆ ಪತ್ನಿ ಹೊರತುಪಡಿಸಿ ಅನ್ಯ ಮಾರ್ಗವಿಲ್ಲ. ಇನ್ನು ಭಾರತೀಯ ಸಂಸ್ಕೃತಿಯಲ್ಲಿ ಸೊಸೆಯನ್ನು ಮಗಳಾಗಿ ಪರಿಗಣಿಸಲಾಗುತ್ತದೆ. ಹೀಗಾಗಿ ಅರ್ಜಿದಾರರಿಗೆ ಅನುಕಂಪದ ನೇಮಕಾತಿ ನೀಡಲು ಅವರ ಮನವಿಯನ್ನು ಪರಿಗಣಿಸಿ ಎಂದು ನಿರ್ದೇಶಿಸಿದೆ.

(Case: WRIT – A No. – 5017 of 2023)


Share It

You cannot copy content of this page