ಸುದ್ದಿ

ಪೋಕ್ಸೊ ಕೇಸ್: ಮುರುಘಾ ಶ್ರೀಗಳಿಗೆ ಮತ್ತೆ ಜೈಲು

Share It

ಬೆಂಗಳೂರು: ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಪ್ರಕರಣದ ಆರೋಪಿಯಾಗಿರುವ ಚಿತ್ರದುರ್ಗದ ಮುರುಘರಾಜೇಂದ್ರ ಶರಣರಿಗೆ ಹೈಕೋರ್ಟ್‌ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್‌ ರದ್ದುಪಡಿಸಿದೆ.

ಸುಪ್ರೀಂಕೋರ್ಟ್ ನ ಈ ಆದೇಶದಿಂದಾಗಿ ಜಾಮೀನಿನ ಮೇಲೆ ಹೊರಗೆ ಬಂದಿದ್ದ ಸ್ವಾಮೀಜಿ ಮತ್ತೆ ಜೈಲು ಸೇರಲಿದ್ದಾರೆ.

ಕೆಲ ತಿಂಗಳುಗಳ ಹಿಂದೆ ಸ್ವಾಮೀಜಿಗೆ ಕರ್ನಾಟಕ ಹೈಕೋರ್ಟ್‌ ಹಲವು ಷರತ್ತುಗಳನ್ನು ವಿಧಿಸುವ ಮೂಲಕ ಜಾಮೀನು ನೀಡಿತ್ತು. ಆ ಬಳಿಕ ಅರ್ಜಿದಾರರು ಆರೋಪಿ ನ್ಯಾಯಾಂಗ ಬಂಧನದಿಂದ ಹೊರಗಿದ್ದು, ಸಾಕ್ಷಿ ನಾಶಪಡಿಸಬಹುದು ಎಂದು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಇಂದು ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನು ರದ್ದುಗೊಳಿಸಿದೆ. ಜತೆಗೆ ಆರೋಪಿಯನ್ನು ಪುನಃ ನ್ಯಾಯಾಂಗ ಬಂಧನಕ್ಕೆ ಕಳುಹಿಸುವಂತೆ ಆದೇಶ ನೀಡಿದೆ.

ಸುಪ್ರೀಂ ಕೋರ್ಟ್‌ ಆದೇಶದಂತೆ, ಮುರುಘಾ ಶ್ರೀಗಳು ಒಂದು ವಾರದೊಳಗೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಬೇಕು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯರು ಹಾಗೂ ಪೋಷಕರ ವಿಚಾರಣೆಗೆ ಮುಗಿಸುವವರೆಗೂ ಶ್ರೀಗಳು ನ್ಯಾಯಾಂಗ ಬಂಧನದಲ್ಲಿರಬೇಕು. ಮುಂದಿನ 4 ತಿಂಗಳಲ್ಲಿ ತನಿಖಾ ಸಂಸ್ಥೆ ಪ್ರಕರಣದ ತನಿಖೆ ಪೂರ್ಣಗೊಳಿಸಬೇಕು. ಒಂದು ವೇಳೆ ನಾಲ್ಕು ತಿಂಗಳಲ್ಲಿ ತನಿಖೆ ಮುಗಿಯದ್ದಿದ್ದರೆ ಇನ್ನು 2 ತಿಂಗಳ ಕಾಲ ಸ್ವಾಮೀಜಿಯ ಬಂಧನ ಅವಧಿಯನ್ನು ವಿಸ್ತರಣೆ ಮಾಡಬಹುದು ಎಂದು ಸುಪ್ರೀಂಕೋರ್ಟ್‌ ಸೂಚನೆ ನೀಡಿದೆ.

ಪ್ರಕರಣದ ಹಿನ್ನೆಲೆ: ಮುರುಘಾ ಶರಣರ ವಿರುದ್ಧ 2022 ಆಗಸ್ಟ್‌ 31 ರಂದು ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪದಡಿ ಪ್ರಕರಣ ದಾಖಲಾಗಿತ್ತು. ಸೆಪ್ಟೆಂಬರ್‌ 1ರಂದು ಶ್ರೀಗಳನ್ನು ಬಂಧಿಸಲಾಗಿತ್ತು. ಸುಮಾರು 14 ತಿಂಗಳ ಕಾಲ ಜೈಲಿನಲ್ಲಿದ್ದ ಶ್ರೀಗಳು 2023 ನವೆಂಬರ್ 16ರಂದು ಷರತ್ತುಬದ್ಧ ಜಾಮೀನಿನ ಮೇಲೆ ಹೊರಗೆ ಬಂದಿದ್ದರು.


Share It

You cannot copy content of this page