ಬೆಂಗಳೂರು: ಹೊಸ ಕ್ರಿಮಿನಲ್ ಕಾಯ್ದೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 479 ಪೂರ್ವಾನ್ವಯವಾಗಲಿದ್ದು, ಅಪರಾಧಗಳಿಗೆ ನಿಗದಿಪಡಿಸಿರುವ ಮೂರನೇ ಒಂದರಷ್ಟು ಶಿಕ್ಷೆ ಪೂರೈಸಿರುವ ಅರ್ಹ ವಿಚಾರಣಾಧಿನ ಕೈದಿಗಳಿಗೆ ಜಾಮೀನು ಸಿಗಲಿದೆ.
ಈ ಕುರಿತಂತೆ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಗೆ ಸ್ಪಷ್ಟನೆ ನೀಡಿದ್ದು, ಸೆಕ್ಷನ್ 479 ಪೂರ್ವಾನ್ವಯವಾಗಲಿದೆ ಎಂದು ತಿಳಿಸಿದೆ. ಅದರಂತೆ ಆರೋಪಿ ಮೊದಲ ಬಾರಿಗೆ ಅಪರಾಧ ಪ್ರಕರಣದಲ್ಲಿ ಸಿಲುಕಿದ್ದು, ಈ ಹಿಂದೆ ಯಾವುದೇ ಶಿಕ್ಷೆಗೆ ಗುರಿಯಾಗಿರದೇ ಇದ್ದಲ್ಲಿ, ಅಪರಾಧಕ್ಕೆ ನಿಗದಿಪಡಿಸಿರುವ ಶಿಕ್ಷೆ ಅವಧಿಯ ಮೂರನೇ ಒಂದರಷ್ಟು ಸಮಯ ನ್ಯಾಯಾಂಗ ಬಂಧನದಲ್ಲಿ ಕಳೆದಿದ್ದರೆ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬಹುದಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಗೆ ಮಾಹಿತಿ ನೀಡಿದೆ.
ಕೇಂದ್ರದ ಹೇಳಿಕೆಯನ್ನು ದಾಖಲಿಸಿಕೊಂಡಿರುವ ಸುಪ್ರೀಂಕೋರ್ಟ್ ದೇಶದ ಎಲ್ಲಾ ಜೈಲು ಅಧಿಕಾರಿಗಳು ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದೆ. ಬಿಎನ್ಎನ್ಎಸ್ ನ ಸೆಕ್ಷನ್ 479 ನ ಈ ನಿಬಂಧನೆಯನ್ನು ಮೂರು ತಿಂಗಳೊಳಗೆ ತ್ವರಿತವಾಗಿ ಜಾರಿ ಮಾಡಬೇಕು ಮತ್ತು ಈ ಕುರಿತಂತೆ ಜೈಲು ಅಧೀಕ್ಷಕರು ವರದಿ ಸಲ್ಲಿಸಬೇಕು ಎಂದು ಆದೇಶಿಸಿದೆ.
ಜೈಲುಗಳಲ್ಲಿ ಅವುಗಳ ಸಾಮರ್ಥ್ಯಕ್ಕಿಂತ ಹೆಚ್ಚಿನ ಕೈದಿಗಳನ್ನು ಇರಿಸಿರುವ ವಿಚಾರವಾಗಿ ಸುಪ್ರೀಂಕೋರ್ಟ್ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ವಿಚಾರಣೆ ನಡೆಸುತ್ತಿದೆ. ಹಿಂದಿನ ವಿಚಾರಣೆ ವೇಳೆ ನ್ಯಾ. ಹಿಮಾ ಕೊಹ್ಲಿ ಮತ್ತು ನ್ಯಾ. ಸಂದೀಪ್ ಮೆಹ್ತಾ ಅವರಿದ್ದ ಪೀಠ ಸೆಕ್ಷನ್ 479 ಪೂರ್ವಾನ್ವಯವಾಗಲಿದೆಯೇ ಎಂದು ಕೇಂದ್ರ ಸರ್ಕಾರದ ಪರ ವಕೀಲರನ್ನು ಕೇಳಿತ್ತು. ಇದಕ್ಕೆ ಸ್ಪಷ್ಟನೆ ನೀಡಲು ಕೇಂದ್ರದ ಪರ ಹಾಜರಿದ್ದ ಅಡಿಷನಲ್ ಸಾಲಿಸಿಟರ್ ಜನರಲ್ ಕಾಲಾವಕಾಶ ಕೋರಿದ್ದರು.
ಇಂದು ನ್ಯಾಯಪೀಠಕ್ಕೆ ಮಾಹಿತಿ ನೀಡಿರುವ ಕೇಂದ್ರ ಸರ್ಕಾರ ಕಾಯ್ದೆಯ ಸೆಕ್ಷನ್ 479 ಪೂರ್ವಾನ್ವಯವಾಗುತ್ತದೆ ಎಂದು ಸ್ಪಷ್ಟಪಡಿಸಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದಾಗಿ ದೊಡ್ಡ ಸಂಖ್ಯೆಯ ವಿಚಾರಣಾಧೀನ ಕೈದಿಗಳಿಗೆ ಬಿಡುಗಡೆ ಭಾಗ್ಯ ಸಿಕ್ಕಂತಾಗಿದೆ.
ಸೆಕ್ಷನ್ 479 ಹೇಳುವುದೇನು: ಬಿಎನ್ಎನ್ಎಸ್ ನ ಸೆಕ್ಷನ್ 479 ನಿಯಮವು ಸಿಆರ್ಪಿಸಿಯ ಸೆಕ್ಷನ್ 436ಎಗೆ ಪ್ರರ್ಯಾಯವಾಗಿ ಜಾರಿಗೆ ಬಂದಿದೆ. ಸೆಕ್ಷನ್ 436ಎ ನಿಯಮದ ಪ್ರಕಾರ ಆರೋಪಿಯು ನ್ಯಾಯಾಂಗ ಬಂಧನದಲ್ಲಿದ್ದು ಆತನ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ಅಥವಾ ನ್ಯಾಯಾಲಯದ ವಿಚಾರಣೆ ತ್ವರಿತವಾಗಿ ಮುಗಿಯದಿದ್ದಾಗ, ಆರೋಪಿಯು ಆತನ ವಿರುದ್ಧದ ಆರೋಪಗಳಿಗೆ ನಿಗದಿಪಡಿಸಲಾಗಿರುವ ಶಿಕ್ಷೆಯ ಅರ್ಧದಷ್ಟು ಸಮಯ ನ್ಯಾಯಾಂಗ ಬಂಧನದಲ್ಲಿ ಕಳೆದಿದ್ದರೆ ಆತನಿಗೆ ಜಾಮೀನು ನೀಡಬಹುದಾಗಿದೆ.
ಬಿಎನ್ಎನ್ಎಸ್ ಸೆಕ್ಷನ್ 479 ನಲ್ಲಿ ಈ ನಿಬಂಧನೆಯ ಜತೆಗೆ ಮತ್ತೊಂದು ನಿಬಂಧನೆಯನ್ನು ಜಾರಿ ಮಾಡಲಾಗಿದೆ. ಅದರ ಪ್ರಕಾರ ಮೊದಲ ಬಾರಿಗೆ ಅಪರಾಧ ಎಸಗಿದ ಆರೋಪದಡಿ ನ್ಯಾಯಾಂಗ ಬಂಧನಕ್ಕೆ ಸಿಲುಕಿದ್ದರೆ ಮತ್ತು ಈ ಹಿಂದೆ ಶಿಕ್ಷೆಗೆ ಗುರಿಯಾಗಿರದೇ ಇದ್ದರೆ ಅಂತಹ ಆರೋಪಿಯು ಆತನ ವಿರುದ್ಧದ ಆಪಾದನೆಗೆ ನಿಗದಿಪಡಿಸಲಾದ ಶಿಕ್ಷೆ ಅವಧಿಯ ಮೂರನೇ ಒಂದರಷ್ಟು ಸಮಯ ಜೈಲಿನಲ್ಲಿ ಕಳೆದಿದ್ದರೆ ಆತನನ್ನು ಸೆಕ್ಷನ್ 479 ಅಡಿ ಜಾಮೀನಿನ ಮೇಲೆ ಬಿಡುಗಡೆ ಮಾಡಬಹುದಾಗಿದೆ. ಈ ನಿಯಮ ಮರಣದಂಡನೆ, ಜೀವಾವಧಿ ಶಿಕ್ಷೆ ನೀಡಬಹುದಾದ ಅಪರಾಧಗಳ ಅಡಿ ನ್ಯಾಯಾಂಗ ಬಂಧನಕ್ಕೆ ಸಿಲುಕಿರುವವರಿಗೆ ಅನ್ವಯಿಸುವುದಿಲ್ಲ. ಸೆಕ್ಷನ್ 479 ಅಡಿ ಜಾಮೀನು ಸಿಗಲು ಪ್ರಾಸಿಕ್ಯೂಷನ್ ಸಮ್ಮತಿಯೂ ಅಗತ್ಯವಿದೆ.