News

ಪ್ರಚೋದನಾಕಾರಿ ಹೇಳಿಕೆ: ಬಿಜೆಪಿ ಶಾಸಕರ ವಿರುದ್ಧದ ಕೇಸ್ ರದ್ದುಪಡಿಸಿದ ಹೈಕೋರ್ಟ್

Share It

ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಎಲ್ಲಾ ಹಿಂದೂಗಳು ಕಾಂಗ್ರೆಸ್‌ ಪಕ್ಷವನ್ನು ಬಹಿಷ್ಕರಿಸುತ್ತಾರೆ ಎಂದು ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ.

ತನ್ನ ವಿರುದ್ಧ ಚುನಾವಣಾಧಿಕಾರಿಗಳು ದಾಖಲಿಸಿರುವ ಖಾಸಗಿ ದೂರು ಮತ್ತು ಗದಗ ಜಿಲ್ಲೆಯ 1ನೇ ಹೆಚ್ಚುವರಿ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ವಿಚಾರಣೆಯನ್ನು ರದ್ದುಪಡಿಸುವಂತೆ ಕೋರಿ ವಿಜಯಪುರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ಮಾಡಿದೆ.

ವಿಚಾರಣೆ ವೇಳೆ ಯತ್ನಾಳ್ ಪರ ವಕೀಲರು ವಾದ ಮಂಡಿಸಿ, ಚುನಾವಣಾ ಅಧಿಕಾರಿ ದಾಖಲಿಸಿದ್ದ ಖಾಸಗಿ ದೂರು ಆಧರಿಸಿ ವಿಚಾರಣಾ ನ್ಯಾಯಾಲಯ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 188ರ ಅಪರಾಧವನ್ನು ಪರಿಗಣಿಸಿ, ಸಮನ್ಸ್‌ ಜಾರಿಗೊಳಿಸಿದೆ. ಆದರೆ, ಈ ಪ್ರಕರಣದಲ್ಲಿ ಐಪಿಸಿ ಸೆಕ್ಷನ್‌ 188 ಅನ್ವಯಿಸುವುದಿಲ್ಲ. ಹೀಗಾಗಿ, ಖಾಸಗಿ ದೂರು ಮತ್ತು ಈ ಮೇರೆಗೆ ವಿಚಾರಣಾ ನ್ಯಾಯಾಲಯ ಕೈಗೊಂಡಿರುವ ಪ್ರಕ್ರಿಯೆಯನ್ನು ರದ್ದುಪಡಿಸಬೇಕು ಎಂದು ಕೋರಿದರು.

ಪ್ರಕರಣದ ಹಿನ್ನೆಲೆ: ಕಳೆದ ವಿಧಾನಸಭೆ ಚುನಾವಣೆ ವೇಳೆ 2023ರ ಮೇ 2ರಂದು ಗದಗ ನಗರ ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ಪರ ರೋಡ್‌ ಶೋ ನಡೆದಿತ್ತು. ಈ ವೇಳೆ ಮಾಧ್ಯಮ ಪ್ರತಿನಿಧಿಗಳ ಜೊತೆ ಬಸನಗೌಡ ಪಾಟೀಲ ಯತ್ನಾಳ್‌ ಮಾತನಾಡಿದ್ದರು. 2ಎ ಮೀಸಲಾತಿ ವಿಚಾರವಾಗಿ ಮಾಧ್ಯಮದವರು ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದ ಯತ್ನಾಳ್‌, ‘ಎಲ್ಲಾ ಹಿಂದೂಗಳು ಕಾಂಗ್ರೆಸ್‌ ಪಕ್ಷವನ್ನು ಬಹಿಷ್ಕಾರ ಮಾಡುತ್ತಾರೆ’ ಎಂದಿದ್ದರು.

ಈ ವಿಚಾರವಾಗಿ ಗದಗ ಮತಕ್ಷೇತ್ರದ ಸಂಚಾರ ವಿಚಕ್ಷಣಾ ದಳದ ಅಧಿಕಾರಿಯಾಗಿದ್ದ ಸಹಾಯಕ ಎಂಜಿನಿಯರ್‌ ಮಂಜುನಾಥ್‌, ಗದಗ 1ನೇ ಹೆಚ್ಚುವರಿ ಸಿವಿಲ್‌ ಮತ್ತು ಜೆಎಂಎಫ್‌ಸಿ ಕೋರ್ಟ್ ನಲ್ಲಿ ಖಾಸಗಿ ದೂರು ದಾಖಲಿಸಿದ್ದರು. ವಿಚಾರಣಾ ನ್ಯಾಯಾಲಯ 2023ರ ಮೇ 11ರಂದು ಯತ್ನಾಳ್‌ ಅವರಿಗೆ ಸಮನ್ಸ್‌ ಜಾರಿಗೊಳಿಸಲು ಆದೇಶಿಸಿತ್ತು.

(CRL.P 12996/2023)


Share It

You cannot copy content of this page