News

ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗೆ ಜಾಮೀನು: ಹೈಕೋರ್ಟ್ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

Share It

ದೆಹಲಿ: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗೆ ಹೈಕೋರ್ಟ್ ಜಾಮೀನು ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ.

ಹತ್ಯೆ ಪ್ರಕರಣದ ಆರೋಪಿ ಮೋಹನ್ ನಾಯಕ್ ಮನವಿ ಪುರಸ್ಕರಿಸಿದ್ದ ಹೈಕೋರ್ಟ್ 2023ರ ಡಿಸೆಂಬರ್ 7ರಂದು ಜಾಮೀನು ನೀಡಿ ಆದೇಶಿಸಿತ್ತು. ಪ್ರಕರಣದ ವಿಚಾರಣೆ ವಿಳಂಬವಾಗುತ್ತಿದೆ ಎಂಬ ಅಂಶವನ್ನು ಪರಿಗಣಿಸಿದ್ದ ಹೈಕೋರ್ಟ್, ವಿಚಾರಣೆ ಶೀಘ್ರವಾಗಿ ಮುಗಿಯುವ ಸಾಧ್ಯತೆ ಇಲ್ಲವೆಂದು ಅಭಿಪ್ರಾಯಪಟ್ಟು, ಜಾಮೀನು ನೀಡಿತ್ತು.

ಹೈಕೋರ್ಟ್ ಆರೋಪಿಗೆ ಜಾಮೀನು ನೀಡಿದ್ದ ಆದೇಶ ಪ್ರಶ್ನಿಸಿ ಹಾಗೂ ಜಾಮೀನನ್ನು ರದ್ದುಪಡಿಸುವಂತೆ ಕೋರಿ ರಾಜ್ಯ ಸರ್ಕಾರ ಹಾಗೂ ಗೌರಿ ಲಂಕೇಶ್ ಅವರ ಸೋದರಿ ಕವಿತಾ ಲಂಕೇಶ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಜಾಮೀನು ರದ್ದುಪಡಿಸಲು ನಿರಾಕರಿಸಿದೆ.

ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ, ಹೈಕೋರ್ಟ್ ಆರೋಪಿಗೆ ಜಾಮೀನು ನೀಡುವ ವೇಳೆ ಆರೋಪಿಗಳು ವಿಚಾರಣೆಗೆ ಸಹಕರಿಸುವಂತೆ ಸೂಚಿಸಿದೆ. ಅಲ್ಲದೇ, ವಿಚಾರಣಾ ನ್ಯಾಯಾಲಯಕ್ಕೂ ಪ್ರಕರವಣನ್ನು ತ್ವರಿತವಾಗಿ ನಡೆಸುವಂತೆ ಸೂಚಿಸಿದೆ. ಆರೋಪಿಗಳು ನ್ಯಾಯಾಲಯದ ವಿಚಾರಣೆಗೆ ಸಹಕರಿಸುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸಲು ಸೂಕ್ತ ಕಾರಣವಿಲ್ಲ ಎಂದು ನ್ಯಾಯಮೂರ್ತಿ ಬೇಲಾ ಎಂ. ತ್ರಿವೇದಿ ಹಾಗೂ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠ ಅಭಿಪ್ರಾಯಪಟ್ಟು, ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದೆ.

ಇದೇ ವೇಳೆ ಆರೋಪಿಗಳು ಅನಗತ್ಯ ಗೈರುಹಾಜರಾದರೆ ಅಥವಾ ಜಾಮೀನು ನೀಡುವ ವೇಳೆ ವಿಧಿಸಿರುವ ಷರತ್ತುಗಳನ್ನು ಉಲ್ಲಂಘಿಸಿದರೆ ಸರ್ಕಾರ ಆರೋಪಿಗಳ ಜಾಮೀನು ಕೋರಿ ಅರ್ಜಿ ಸಲ್ಲಿಸಲು ಮುಕ್ತ ಅವಕಾಶವಿದೆ ಎಂದು ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.

(Petition for Special Leave to Appeal (Crl.)  No.740/2024)


Share It

You cannot copy content of this page