ಬೆಂಗಳೂರು: ಊಟ, ಬಟ್ಟೆ, ವೈದ್ಯಕೀಯ ವೆಚ್ಚ ಸೇರಿದಂತೆ ಪ್ರತಿ ತಿಂಗಳು 6 ಲಕ್ಷ ರೂಪಾಯಿ ಜೀವನಾಂಶ ನೀಡುವಂತೆ ಪತಿಗೆ ನಿರ್ದೇಶಿಸಬೇಕು ಎಂದು ಕೋರಿ ಪತ್ನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಅಷ್ಟೊಂದು ಖರ್ಚು ಮಾಡುವುದಿದ್ದರೆ ಆಕೆಯೇ ದುಡಿಯಲಿ ಎಂದು ಮೌಖಿಕವಾಗಿ ಎಚ್ಚರಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ (ಆಗಸ್ಟ್ 21) ವಿಚಾರಣೆ ನಡೆದಿದ್ದು, ಈ ಕುರಿತ ವಿಡಿಯೋ ಇದೀಗ ವೈರಲ್ ಆಗಿದೆ.
ಪ್ರಕರಣದ ವಿಚಾರಣೆ ವೇಳೆ ಮಹಿಳೆಯ ಪರ ವಾದ ಮಂಡಿಸಿದ ವಕೀಲರು, ಅರ್ಜಿದಾರರಿಗೆ ಪೌಷ್ಟಿಕ ಆಹಾರದ ಅಗತ್ಯವಿದೆ. ಆಕೆಯ ಆಹಾರಕ್ಕಾಗಿ ತಿಂಗಳಿಗೆ ₹ 40,000 ವೆಚ್ಚವಾಗುತ್ತದೆ. ಮಹಿಳೆಯ ವಿಚ್ಛೇದಿತ ಪತಿ ಪ್ರತಿದಿನ ಬ್ರಾಂಡೆಡ್ ಬಟ್ಟೆಗಳನ್ನು ಧರಿಸುತ್ತಾರೆ. ಅವರು ಧರಿಸುವ ಟೀ ಶರ್ಟ್‌ಗಳ ಬೆಲೆ ತಲಾ 10,000 ರೂ ಇದೆ. ಆದರೆ ಮಹಿಳೆ ಹಳೆಯ ಬಟ್ಟೆ ಧರಿಸುತ್ತಿದ್ದು ಬಟ್ಟೆಗೆ ತಿಂಗಳಿಗೆ 50,000 ಬೇಕಾಗುತ್ತದೆ. ಸೌಂದರ್ಯವರ್ಧಕಗಳು ಮತ್ತು ವೈದ್ಯಕೀಯ ವೆಚ್ಚಕ್ಕಾಗಿ 60,000 ಅಗತ್ಯವಿದೆ. ಎಲ್ಲ ವೆಚ್ಚವೂ ಸೇರಿ ತಿಂಗಳಿಗೆ 6,16,300 ರೂಪಾಯಿ ಆಗಲಿದೆ ಎಂದು ವಿವರಿಸಿದರು.
ಮಹಿಳೆ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠ, “ತಿಂಗಳಿಗೆ 6,16,300 ರೂ.? ಯಾರಾದರೂ ಇಷ್ಟು ಖರ್ಚು ಮಾಡುತ್ತಾರೆಯೇ? ಆಕೆ ಅಷ್ಟು ಹಣ ಖರ್ಚು ಮಾಡಲೇಬೇಕೆಂದು ಬಯಸಿದರೆ, ಆಕೆಯೇ ಸಂಪಾದಿಸಲಿ. ಗಂಡನ ಮೇಲೆ ಏಕೆ ಅವಲಂಬಿತವಾಗಬೇಕು. ಆಕೆಗೆ ಕುಟುಂಬದ ಬೇರೆ ಯಾವುದೇ ಜವಾಬ್ದಾರಿ ಇಲ್ಲ. ಮಕ್ಕಳನ್ನು ನೋಡಿಕೊಳ್ಳಬೇಕಾಗಿಲ್ಲ. ಸ್ವಂತ ಖರ್ಚಿಗೆ ಇಷ್ಟು ಹಣ ಕೇಳುತ್ತಿದ್ದಾರೆ. ನಿಜಕ್ಕೂ ಇದು ಅಸಮಂಜಸವಾಗಿದೆ. ಜೀವನಾಂಶವು ಯಾವುದೇ ಕಾರಣಕ್ಕೂ ಗಂಡನಿಗೆ ಶಿಕ್ಷೆಯಾಗಬಾರದು” ಎಂದು ಅಭಿಪ್ರಾಯಪಟ್ಟಿದೆ.
ಜತೆಗೆ ತಿಂಗಳಿಗೆ ಕನಿಷ್ಟ 5 ಲಕ್ಷವಾದರೂ ಜೀವನಾಂಶ ನೀಡಬೇಕೆಂಬ ಮಹಿಳೆ ಪರ ವಕೀಲರ ವಾದಕ್ಕೆ ಪ್ರತಿಕ್ರಿಯಿಸಿರುವ ಹೈಕೋರ್ಟ್, ಚೌಕಾಸಿ ಮಾಡಲು ಇದು ಮಾರುಕಟ್ಟೆಯಲ್ಲ. ಅವರಿಗೆ ನೀವಾದರೂ ತಿಳಿ ಹೇಳಿ. ಆಕೆಯ ನೈಜ ಅವಶ್ಯಕತೆಗಳಿಗೆ ಎಷ್ಟು ಬೇಕು ಎಂದು ಸ್ಪಷ್ಟಪಡಿಸಿ. ಅದರಂತೆ ಪರಿಹಾರ ನಿರ್ಧರಿಸಬಹುದು. ಇಲ್ಲದಿದ್ದರೆ ಅರ್ಜಿ ವಜಾ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಕೌಟುಂಬಿಕ ನ್ಯಾಯಾಲಯ 50 ಸಾವಿರ ಮಾಸಿಕ ಪರಿಹಾರ ನೀಡುವಂತೆ ಪತಿಗೆ ಆದೇಶಿಸಿದ್ದು, ಈ ಮೊತ್ತ ತೀರಾ ಕಡಿಮೆಯಾಗಿದ್ದು, ಹೆಚ್ಚಿನ ಮೊತ್ತ ಜೀವನಾಂಶ ನೀಡಲು ಆದೇಶಿಸುವಂತೆ ಕೋರಿ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿರುವ ಹೈಕೋರ್ಟ್ ಮುಂದಿನ ವಿಚಾರಣೆಯನ್ನು ಸೆ.9ಕ್ಕೆ ಮುಂದೂಡಿದೆ.
ಆಗಸ್ಟ್ 21 ರಂದು ಹಂಚಿಕೊಳ್ಳಲಾದ ವಿಡಿಯೋ ಲಕ್ಷಾಂತರ ಬಾರಿ ವೀಕ್ಷಣೆಯಾಗಿದೆ. ಜತೆಗೆ ನ್ಯಾಯಾಲಯದ ಪ್ರತಿಕ್ರಿಯೆಗೆ ಮೆಚ್ಚುಗೆ ವ್ಯಕ್ತವಾಗಿದೆ.