ಬೆಂಗಳೂರು: ಕೊಲೆಯಂತಹ ಗಂಭೀರ ಆರೋಪ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರಿಗೆ ಮನೆ ಊಟ ನೀಡಲು ಅವಕಾಶ ನೀಡಬಾರದು ಎಂದು ವಕೀಲ ಎನ್.ಪಿ ಅಮೃತೇಶ್ ಜೈಲು ಅಧಿಕಾರಿಗಳಿಗೆ ಹಾಗೂ ಗೃಹ ಇಲಾಖೆಗೆ ಪತ್ರ ಬರೆದಿದ್ದಾರೆ.
ಕರ್ನಾಟಕದಲ್ಲಿ ದರ್ಶನ್ ದೊಡ್ಡ ಅಭಿಮಾನಿ ಬಳಗ ಹೊಂದಿರುವ ಮತ್ತು ಪ್ರಭಾವಿ ನಟ. ಆದರೆ ಯಾವುದೇ ಎಂಎಲ್ಎ, ಎಂಎಲ್ಸಿ ಅಥವಾ ಎಂಪಿ ಅಲ್ಲ. ಜೊತೆಗೆ ಯಾವುದೇ ಶಾಸನಬದ್ಧ ಹುದ್ದೆಯಲ್ಲಿ ಅವರಿಲ್ಲ. ವಿಐಪಿ ಸ್ಟೇಟಸ್ ಹೊಂದಿರುವ ರಾಜಕಾರಣಿಯೂ ಅಲ್ಲ. ಅವರು ಕಾನೂನಿನ ಕಣ್ಣಿನಲ್ಲಿ ಓರ್ವ ಸಾಮಾನ್ಯ ವ್ಯಕ್ತಿ. ಹೀಗಾಗಿ ಕಾನೂನಿನ ಅಡಿಯಲ್ಲೇ ಅವರನ್ನು ಪರಿಗಣಿಸಬೇಕು’ ಎಂದು ವಕೀಲ ಅಮೃತೇಶ್ ಮನವಿ ಮಾಡಿದ್ದಾರೆ.
ಕರ್ನಾಟಕ ಪ್ರಿಸನ್ಸ್ ಹಾಗೂ ಕರೆಕ್ಷನಲ್ ಮ್ಯಾನ್ಯುವಲ್ 2021, ಆ್ಯಕ್ಟ್ 1963, ಪ್ರಿಸನ್ಸ್ ರೂಲ್ಸ್ 1974 ಉಲ್ಲೇಖಿಸಿರುವ ವಕೀಲರು ‘ಕಾನೂನಿನಂತೆ ದರ್ಶನ್ ಯಾವುದೇ ವಿಶೇಷ ಸೌಲಭ್ಯಗಳನ್ನು ಪಡೆದುಕೊಳ್ಳುವಂತಿಲ್ಲ. ಮನೆಯ ಆಹಾರ, ಬಟ್ಟೆ, ಹಾಸಿಗೆ, ಬರೆಯುವ ಪರಿಕರ, ಎಸಿ, ಟೇಬಲ್, ಚೇರ್ ಮುಂತಾದವುಗಳನ್ನು ಪಡೆಯುವಂತಿಲ್ಲ’ ಎಂದಿದ್ದಾರೆ.
‘ಶಿಕ್ಷೆಗೆ ಒಳಪಡದ ವಿಚಾರಣಾಧೀನ ಕೈದಿಗೆ ಮನೆಯ ಆಹಾರದ ಅವಶ್ಯಕತೆಯಿದ್ದಲ್ಲಿ ಪ್ರಿಸನ್ಸ್ ಆ್ಯಕ್ಟ್ 1963 ಪ್ರಕಾರ ಪರೀಕ್ಷೆಗೆ ಒಳಪಡಿಸಿ ಐಜಿ ಅನುಮೋದನೆ ನೀಡಬಹುದು. ಆದರೆ, ಈಗಾಗಲೇ ಜೈಲು ನಿಯಮದಲ್ಲಿ ಕೈದಿಗಳಿಗೆ ನೀಡುವ ಆಹಾರದ ಬಗ್ಗೆ ಸ್ಪಷ್ಟವಾಗಿ ಹೇಳಲಾಗಿದೆ. ಆಹಾರದ ತೂಕ ಮತ್ತು ಮಾಂಸಹಾರದ ಪೂರೈಕೆಗೆ ಸಂಬಂಧಿಸಿದಂತೆ ನಮೂದಿಸಲಾಗಿದೆ. ದರ್ಶನ್ ಮನೆ ಊಟ ಕೇಳುತ್ತಿದ್ದು, ಇದರಿಂದ ಜೈಲಿನ ಆಹಾರದ ಗುಣಮಟ್ಟದ ಬಗ್ಗೆ ಹಾಗೂ ಜೈಲು ಅಧಿಕಾರಿಗಳ ಬಗ್ಗೆ ವ್ಯತಿರಿಕ್ತ ಭಾವನೆ ಮೂಡಿಸುತ್ತದೆ. ಅಷ್ಟೇ ಅಲ್ಲ, ದರ್ಶನ್ ಅವರಿಗೆ ಮನೆ ಊಟ ನೀಡಿದರೆ ಅಲ್ಲಿರುವ ಇತರೆ ಕೈದಿಗಳು ಕೂಡ ಪ್ರಶ್ನೆ ಮಾಡುತ್ತಾರೆ ಎಂದು ಅಮೃತೇಶ್ ಪತ್ರದಲ್ಲಿ ವಿವರಿಸಿದ್ದಾರೆ.
ಜೈಲಿನ ಊಟದ ಬಗ್ಗೆ ಅವರು ತಕಾರರು ತೆಗೆದಿರುವ ದರ್ಶನ್, ತಮಗೆ ಮನೆಯೂಟ ಪಡೆಯಲು ಅನುಮತಿ ಕೇಳಿದ್ದಾರೆ. ಈಗಾಗಲೇ ಮ್ಯಾಜಿಸ್ಟ್ರೇಟ್ ಕೋರ್ಟ್ ಇದಕ್ಕೆ ಅವಕಾಶ ನಿರಾಕರಿಸಿದೆ. ಈ ಆದೇಶವನ್ನು ದರ್ಶನ್ ಹೈಕೋರ್ಟ್ನಲ್ಲಿ ಪ್ರಶ್ನೆ ಮಾಡಿದ್ದು, ಹೈಕೋರ್ಟ್ ಸರ್ಕಾರದ ಸ್ಪಷ್ಟನೆ ಕೇಳಿದೆ. ಇದರ ಬೆನ್ನಲ್ಲೇ ದರ್ಶನ್ಗೆ ಯಾವುದೇ ವಿಶೇಷ ಸೌಕರ್ಯ ನೀಡದಂತೆ ಕಾರಾಗೃಹ ಇಲಾಖೆ ಐಜಿಗೆ ಹೈಕೋರ್ಟ್ನ ಹಿರಿಯ ವಕೀಲ ಅಮೃತೇಶ್ ಪತ್ರ ಬರೆದಿದ್ದಾರೆ.