ಅಪರಾಧ ಪ್ರಕರಣ ಹಿಂಪಡೆಯಲು ಸರಕಾರಕ್ಕೆ ಅಧಿಕಾರ ಇದೆಯೇ ಎಂಬುದು ಒಂದು ಕಾನೂನು ಪ್ರಶ್ನೆ. ಇದಕ್ಕೆ ಉತ್ತರ ದಂಡ ಪ್ರಕ್ರಿಯಾ ಸಂಹಿತೆ ಕಲಂ 321ರಲ್ಲಿ (ಬಿಎನ್ಎಸ್ಎಸ್) ನಲ್ಲಿ ಅವಕಾಶ ಇದೆ.
ಆದರೆ ಯಾವ ಪ್ರಕರಣ ಹಿಂಪಡೆಯ ಬೇಕು ಮತ್ತು ಅದಕ್ಕೆ ಕಾರಣಗಳು ಏನು ಎನ್ನುವ ಕುರಿತು ನಿರ್ಬಂಧಗಳು ಇವೆ. ಯಾವದೇ ಪ್ರಕರಣದಲ್ಲಿ ಸಾರ್ವಜನಿಕರ ಹಿತಾಸಕ್ತಿ ಉದ್ದೇಶ ಇದ್ದರೇ, ಅಂತ ಪ್ರಕರಣ ಹಿಂಪಡೆಯಲು ಸರಕಾರ ತೀರ್ಮಾನ ಮಾಡಿ ಸಂಬಂಧ ಪಟ್ಟ ಅಭಿಯೋಜಕರಿಗೆ ಹಿಂಪಡೆಯಲು ಆದೇಶ ಕಳಿಸಬಹದು. ಅಲ್ಲದೆ ದೊಡ್ಡ ದೊಡ್ಡ ದೊಂಬಿ ವಗೈರೆ ಪ್ರಕರಣಗಳಲ್ಲಿ ಸ್ಪಷ್ಟ ಸಾಕ್ಷಿ ಕೊರತೆ ಇದ್ದರೂ ಹಿಂಪಡೆಯಬಹುದು.
ಹಿಂದೆ 1980 ರಲ್ಲಿ ನರಗುಂದ ನವಲಗುಂದ ರೈತರ ಗಲಭೆ ಪ್ರಕರಣದಲ್ಲಿ, ಈ ರೀತಿ ಪ್ರಕರಣ ಸರಕಾರ ಹಿಂಪಡೆದಿತ್ತು. ಆ ಪ್ರಕರಣ ರೈತರು ತಮ್ಮ ಮೇಲೆ ಸರಕಾರ ರೈತರ ಮೇಲೆ ಅನಗತ್ಯ ಕರದ ಹೊರೆ ಹಾಕುತ್ತಿದೆ ಎಂದು ರೈತರು ಚಳುವಳಿ ಮಾಡುವಾಗ, ಒಮ್ಮೆಲೇ ಗಲಭೆ ವಿಕೋಪಕ್ಕೆ ಹೋಗಿ ಗೋಲಿಬಾರ್ ಆಗಿ ರೈತರು ಮತ್ತು ಪೋಲಿಸರು ಕೂಡಾ ಬಲಿಯಾಗಿದ್ದರು. ಆಗ ಈಗಿನಂತೆ ಸಿ ಸಿ ಟಿ ವಿ ವಗೈರೆ ಇರಲಿಲ್ಲ, ಹೀಗಾಗಿ ಸಮರ್ಪಕ ಸಾಕ್ಷಿ ಕೊರತೆ ಇತ್ತು ಮತ್ತು ಎಷ್ಟೋ ಅಮಾಯಕರು ಕೂಡಾ ಬಂದಿಸಲ್ಪಟ್ಟಿದ್ದರು. ಹೀಗಾಗಿ ಆ ಪ್ರಕರಣ ಹಿಂಪಡೆಯಲಾಗಿತ್ತು.
ನಂತರ 2000 ಇಸ್ವಿ ಅಗಸ್ಟ್ ನಲ್ಲಿ ವಿರಪ್ಪನ್ ಕನ್ನಡದ ಖ್ಯಾತ ನಟ ರಾಜಕುಮಾರ ಅವರನ್ನು ಅಪಹರಿಸಿ, ತನ್ನ ಸಹಚರರನ್ನು ಮೈಸೂರು ಜೈಲಿನಿಂದ ಬಿಡುಗಡೆ ಮಾಡಲು ಬೇಡಿಕೆ ಇಟ್ಟಾಗ, ಅದಕ್ಕೆ ಎಸ್. ಎಂ. ಕೃಷ್ಣ ಸರಕಾರ ಒಪ್ಪಿ ಪ್ರಕರಣ ಹಿಂಪಡೆಯಲು ತೀರ್ಮಾನ ಮಾಡಿ ಆ ಮೈಸೂರು ವಿಶೇಷ ನ್ಯಾಯಾಲಯದ ಅಭಿಯೋಜಕರಿಗೆ ಪ್ರಕರಣ ಹಿಂಪಡೆಯಲು ಸೂಚಿಸಿತ್ತು. ಆಗ ವಿಶೇಷ ನ್ಯಾಯಾಲಯ ಅಭಿಯೋಜಕರ ಅರ್ಜಿ ಮಂಜೂರು ಮಾಡಿತ್ತು. ಆ ಆದೇಶವನ್ನು ಆ ಪ್ರಕರಣದಲ್ಲಿ ಮೃತನಾಗಿದ್ದ ಪಿ ಎಸ್ ಆಯ್ ಶಕೀಲ್ ಅಹಮದ್ ತಂದೆ ಅಬ್ದುಲ್ ಕರೀಂ, ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದಾಗ ಅವರ ಅರ್ಜಿ ಮಂಜೂರು ಮಾಡಿ, ವಿಶೇಷ ನ್ಯಾಯಾಲಯದ ಆದೇಶ ರದ್ದು ಮಾಡಿ, ಈ ಪ್ರಕರಣ ಹಿಂಪಡೆಯಲು ಸಕಾರಣ ಇಲ್ಲ ಎಂದು ತೀರ್ಪು ನೀಡಿತ್ತು. ಇದನ್ನು ಎ ಆಯ್ ಆರ್ 2000 ದಲ್ಲಿ ನೋಡಬಹುದು ಕಾಡುಗಳ್ಳನ ಬೆದರಿಕೆಗೆ ಪ್ರಕರಣ ಹಿಂಪಡೆಯುವುದು ಸಕಾರಣ ಅಲ್ಲ ಎನ್ನುವುದನ್ನು, ಆ ಪ್ರಕರಣದಲ್ಲಿ ಅವಲೋಕನ ಮಾಡಿದ್ದು ಗಮನಾರ್ಹ.
ಇನ್ನು ಪ್ರಕರಣ ಹಿಂಪಡೆಯಲು ರಾಜ್ಯಸರ್ಕಾರ ಅರ್ಜಿ ಹಾಕಿದೆ ಎಂದ ತಕ್ಷಣ ಅದನ್ನು ನ್ಯಾಯಾಲಯ ಒಪ್ಪಲೇ ಬೇಕಾಗಿಲ್ಲ. ಸಕಾರಣಗಳು ಇದ್ದರೇ ಮಾತ್ರ ಹಿಂಪಡೆಯಲು ಅನುಮತಿ ನೀಡಬಹುದು.
ಹಿಂದೆ ನಾನು ದಾವಣಗೆರೆಯಲ್ಲಿ ನ್ಯಾಯಿಕ ದಂಡಾಧಿಕಾರಿಯಾಗಿದ್ದಾಗ, ಅಭಿಯೋಜಕರು ಮೂರು ಅಪರಾಧ ಪ್ರಕರಣ ಹಿಂಪಡೆಯಲು ಹಾಕಿದ ಮೂರು ಅರ್ಜಿಗಳನ್ನು ನಾನು ವಜಾ ಮಾಡಿದ್ದೆ. ಕಳ್ಳ ಭಟ್ಟಿ ಸಾಗಿಸುವ ಒಂದು ಪ್ರಕರಣ, ಖಾಸಗಿ ಜಗಳದ ಒಂದು ಪ್ರಕರಣ ಹಿಂಪಡೆಯಲು ಅರ್ಜಿ ಹಾಕಿದ್ದರು. ಕಳ್ಳ ಭಟ್ಟಿ ಪ್ರಕರಣ ಹಿಂಪಡೆಯುವ ಪ್ರಕರಣದಲ್ಲಿ ಯಾವ ಸಾರ್ವಜನಿಕ ಹಿತಾಸಕ್ತಿ ಇದೆ ಎನ್ನುವ ಪ್ರಶ್ನೆಗೆ ಅಭಿಯೋಜಕರ ಹತ್ತಿರ ಉತ್ತರ ಇರಲಿಲ್ಲ. ಇಂಥ ಪ್ರಕರಣ ಹಿಂಪಡೆದರೆ ಕಳ್ಳ ಭಟ್ಟಿ ಮಾಡುವವರಿಗೆ ಪ್ರೋತ್ಸಾಹ ಸಿಗುತ್ತದೆ ಮತ್ತು ಖಾಸಗಿ ಜಗಳದ ಪ್ರಕರಣದಲ್ಲಿ ಯಾವದೇ ಸಾರ್ವಜನಿಕ ಹಿತಾಸಕ್ತಿ ಇಲ್ಲ ಎಂದು ಅರ್ಜಿ ವಜಾಮಾಡಿದ್ದೆ.
ಇನ್ನೊಂದು ಪ್ರಕರಣದಲ್ಲಿ ‘ಬಿ’ ಪೊಲೀಸರು ವರದಿ ಹಾಕಿದ್ದರು. ಬಿ ವರದಿ ಅಂದರೆ ಆರೋಪ ನಿರೂಪಿಸುವ ಸಾಕ್ಷಿ ಇಲ್ಲ ಎಂದು ವರದಿ ಹಾಕಿದ್ದರು.ಇದನ್ನು ಹಿಂಪಡೆಯಲು ಪ್ರಕರಣವೇ ಇರಲಿಲ್ಲ. ಇದನ್ನು ಗಮನಿಸಿದಾಗ ಸರಕಾರದಲ್ಲಿ ಸಂಬಂಧಿಸಿದ ಇಲಾಖೆಗಳು, ಹೇಗೆ ವಿವೇಚನೆ ಬಳಸದೇ ಇಂಥ ತೀರ್ಮಾನ ಮಾಡುತ್ತವೆ ಎನ್ನುವದು ತಿಳಿಯುವದು. ಎಲ್ಲಾ ಪಕ್ಷದ ಸರಕಾರಗಳು ತಮ್ಮ ಮತ ಬ್ಯಾಂಕ್ ಸಲುವಾಗಿ ಇಂಥ ತೀರ್ಮಾನಗಳನ್ನ ಮಾಡಿದ ಉದಾಹರಣೆ ಇವೆ.
ಅಪರಾಧ ಪ್ರಕರಣ ಸಕಾರಣ ಹಿಂಪಡೆಯಲು ಸರಕಾರಕ್ಕೆ ಅಧಿಕಾರ ಇದೆ.ಆದರೆ ಸರಕಾರ ಕೇಳಿದೆ ಎಂಬ ಕಾರಣಕ್ಕೆ ಅನುಮತಿ ನೀಡಬೇಕು ಎನ್ನುವ ಯಾವ ನಿರ್ಭಂಧ ನ್ಯಾಯಾಲಯಕ್ಕೆ ಇಲ್ಲ.ನ್ಯಾಯಾಲಯ ಸಮಗ್ರ ವಿಚಾರಣೆ ಮಾಡಿ ಕಾನೂನು ಪ್ರಕಾರ ಸೂಕ್ತ ಎಂದು ಕಂಡು ಬಂದ ಅಪರಾಧ ಪ್ರಕರಣ ,ಹಿಂಪಡೆಯಲು ಅನುಮತಿ ನೀಡಬಹುದು.
ತತ್ವ: ಅಪರಾಧ ಪ್ರಕರಣ ಹಿಂಪಡೆಯಲು ಸಕಾರಣ ಬೇಕು ರಾಜಕಾರಣ ಅಲ್ಲ ಎನ್ನುವುದು ಕಾನೂನು.
ಲೇಖನ- ಎಸ್. ಎಚ್. ಮಿಟ್ಟಲಕೋಡ, ನಿವೃತ್ತ ಜಿಲ್ಲಾ ನ್ಯಾಯಾಧೀಶರು, ಧಾರವಾಡ.