News

ಬಿಎನ್‌ಎಸ್‌ಎಸ್ ಅಡಿಯಲ್ಲಿ ಹೈಕೋರ್ಟ್ನಿಂದ ಮೊದಲ ತೀರ್ಪು: ಯತ್ನಾಳ್ ವಿರುದ್ಧದ ಕೇಸ್ ರದ್ದು

Share It

ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕರೊಬ್ಬರ ವಿರುದ್ಧ ನಗರದ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) ಸೆಕ್ಷನ್ 223 ಅಡಿಯಲ್ಲಿ ಜಾರಿಗೊಳಿಸಿದ್ದ ನೋಟಿಸ್‌ ಅನ್ನು ಹೈಕೋರ್ಟ್ ರದ್ದುಪಡಿಸಿದೆ. ಅಲ್ಲದೆ, ಹೊಸದಾಗಿ ವಿಚಾರಣೆ ನಡೆಸಲು ವಿಶೇಷ ನ್ಯಾಯಾಲಯಕ್ಕೆ ನಿರ್ದೇಶಿಸಿದೆ.

ಶಿವಾನಂದ ಪಾಟೀಲ್ ಅವರ ಖಾಸಗಿ ದೂರು ಪರಿಗಣಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾರಿಗೊಳಿಸಿದ್ದ ನೋಟಿಸ್ ರದ್ದುಪಡಿಸುವಂತೆ ಕೋರಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಪೀಠ ಈ ತೀರ್ಪು ನೀಡಿದೆ.

ಯತ್ನಾಳ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 156ರ ಅಡಿಯಲ್ಲಿ ವಿಶೇಷ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿತ್ತು. ಅದನ್ನು ವಿಚಾರಣೆಗೆ ಅಂಗೀಕರಿಸಿದ್ದ ವಿಶೇಷ ನ್ಯಾಯಾಲಯ ಬಿಎನ್‌ಎಸ್‌ಎಸ್ ಸೆಕ್ಷನ್ 223 ಅಡಿಯಲ್ಲಿ ಯತ್ನಾಳ್ ಅವರಿಗೆ ನೋಟಿಸ್ ಜಾರಿ ಮಾಡಿತ್ತು.

ಇದನ್ನು ಆಕ್ಷೇಪಿಸಿ ಯತ್ನಾಳ್ ಹೈಕೋರ್ಟ್ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ಬಿಎನ್‌ಎಸ್‌ಎಸ್ ಸೆಕ್ಷನ್ 223ರ ಅಡಿ ಖಾಸಗಿ ದೂರನ್ನು ದಾಖಲಿಸಿಕೊಳ್ಳುವ ಮೊದಲಿಗೆ ಮ್ಯಾಜಿಸ್ಟ್ರೇಟ್, ಆರೋಪಿಗೆ ದೂರಿನ ಪ್ರತಿ, ಎಫ್‌ಐಆರ್, ದೂರುದಾರರ ಮತ್ತು ಸಾಕ್ಷಿಯ ಸ್ವಯಂ ಹೇಳಿಕೆ ಹಾಗೂ ಪೂರಕ ದಾಖಲೆಗಳನ್ನು ಒದಗಿಸಬೇಕು. ಬಳಿಕ ಅವರ ಅಹವಾಲು ಆಲಿಸಬೇಕು. ಆ ನಂತರವೇ ನೋಟಿಸ್ ಜಾರಿ ಮಾಡುವ ಪ್ರಕ್ರಿಯೆಗೆ ಮುಂದಾಗಬೇಕು. ಅದು ಬಿಟ್ಟು ನೇರವಾಗಿ ಕಾಗ್ನಿಜೆನ್ಸ್ (ಪ್ರಕರಣವನ್ನು ವಿಚಾರಣೆಗೆ ಪರಿಗಣಿಸುವ ಪ್ರಕ್ರಿಯೆ) ತೆಗೆದುಕೊಂಡು ನೇರವಾಗಿ ನೋಟಿಸ್ ಜಾರಿ ಮಾಡಲು ಅವಕಾಶವಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.

ಅಲ್ಲದೇ, ಯತ್ನಾಳ್ ಅವರಿಗೆ ನೋಟಿಸ್ ಜಾರಿ ಮಾಡಿರುವ ಪ್ರಕ್ರಿಯೆಯಲ್ಲಿ ಕಾನೂನು ಲೋಪ ಕಂಡುಬಂದಿದೆ. ಆದ್ದರಿಂದ ಯತ್ನಾಳ್ ಅವರ ವಿರುದ್ಧದ ನೋಟಿಸ್ ರದ್ದುಪಡಿಸಲಾಗುತ್ತಿದೆ ಎಂದು ತಿಳಿಸಿರುವ ನ್ಯಾಯಪೀಠ, ಪ್ರಕರಣವನ್ನು ವಿಚಾರಣಾ ನ್ಯಾಯಾಲಯಕ್ಕೆ ಹಿಂದಿರುಗಿಸಿದೆ. ಮುಂದಿನ ನಾಲ್ಕು ವಾರದಲ್ಲಿ ಹೈಕೋರ್ಟ್ ಆದೇಶದಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ಗಮನದಲ್ಲಿ ಇರಿಸಿಕೊಂಡು ಪ್ರಕರಣವನ್ನು ಹೊಸದಾಗಿ ವಿಚಾರಣೆ ನಡೆಸಬೇಕು ಎಂದು ವಿಶೇಷ ನ್ಯಾಯಾಲಯಕ್ಕೆ ಸೂಚಿಸಿದೆ.

ಇದೇ ವೇಳೆ, ಬಿಎನ್‌ಎಸ್‌ಎಸ್ ಅಡಿಯಲ್ಲಿ ಪ್ರಕಟಗೊಂಡ ಮೊದಲ ತೀರ್ಪು ಇದಾಗಿದೆ. ದೇಶದಲ್ಲಿ ಈವರೆಗೂ ಬಿಎನ್‌ಎಸ್‌ಎಸ್ ಅಡಿಯಲ್ಲಿ ಯಾವ ನ್ಯಾಯಾಲಯವೂ ತೀರ್ಪು ಬರೆದಿಲ್ಲ. ಈ ತೀರ್ಪಿನಿಂದ ಖಾಸಗಿ ದೂರು ದಾಖಲಾದ ಸಂದರ್ಭದಲ್ಲಿ ಅಧೀನ ನ್ಯಾಯಾಲಯಗಳು ಬಿಎನ್‌ಎಸ್‌ಎಸ್ ಅಡಿಯಲ್ಲಿ ಯಾವ ಪ್ರಕ್ರಿಯೆ ಅನುಸರಿಸಬೇಕು ಎಂಬ ಬಗ್ಗೆ ಸ್ಪಷ್ಟತೆ ಸಿಗುತ್ತದೆ ತಿಳಿಸಿದೆ.

ಪ್ರಕರಣದ ಹಿನ್ನೆಲೆ: ಕಳೆದ ಲೋಕಸಭಾ ಚುನಾವಣೆ ವೇಳೆ ಬಾಗಲಕೋಟೆ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಮಾಡುವಾಗ ಯತ್ನಾಳ್ ಅವರು ನನ್ನ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಸಚಿವ ಶಿವಾನಂದ ಎಸ್. ಪಾಟೀಲ್ ಖಾಸಗಿ ದೂರು ದಾಖಲಿಸಿದ್ದರು. ದೂರಿನ ವಿಚಾರಣೆ ನಡೆಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ದೂರನ್ನು ವಿಚಾರಣೆಗೆ ಅಂಗೀಕರಿಸಿ ಬಿಎನ್‌ಎಸ್‌ಎಸ್ ಸೆಕ್ಷನ್ 223ರ ಅಡಿಯಲ್ಲಿ ನೋಟಿಸ್ ಜಾರಿ ಮಾಡಿತ್ತು.


Share It

You cannot copy content of this page