ದೆಹಲಿ: ಕಾನೂನು ಪದವೀಧರರನ್ನು ವಕೀಲರಾಗಿ ನೋಂದಾಯಿಸಿಕೊಳ್ಳುವಾಗ ವಕೀಲರ ಪರಿಷತ್ತುಗಳು ವಕೀಲರ ಕಾಯ್ದೆಯ ಸೆಕ್ಷನ್ 24ರಲ್ಲಿ ನಿಗದಿಪಡಿಸಿರುವ ಶುಲ್ಕಕ್ಕಿಂತ ಹೆಚ್ಚಿಗೆ ಪಡೆಯುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಅಲ್ಲದೇ, ವಕೀಲರ ಕಾಯ್ದೆಯ ನಿಯಮಗಳ ಪ್ರಕಾರ ವಕೀಲರ ನೋಂದಣಿ ವೇಳೆ ಸಾಮಾನ್ಯ ವರ್ಗಕ್ಕೆ ಸೇರಿದ ವಕೀಲರಿಂದ ರೂ.750 ಮತ್ತು ಎಸ್ಸಿ/ಎಸ್ಟಿ ವರ್ಗಗಳಿಗೆ ಸೇರಿದ ವಕೀಲರಿಂದ ರೂ.125 ಗಿಂತ ಹೆಚ್ಚಿಗೆ ಶುಲ್ಕ ಪಡೆಯುವಂತಿಲ್ಲ ಎಂದು ಸಿಜೆಐ ಡಿ.ವೈ ಚಂದ್ರಚೂಡ್ ಹಾಗೂ ನ್ಯಾ. ಜೆ.ಬಿ ಪರ್ದಿವಾಲ ಅವರಿದ್ದ ಪೀಠ ಮಹತ್ವದ ತೀರ್ಪು ನೀಡಿದೆ.
ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ, ವಕೀಲರ ಪರಿಷತ್ತುಗಳು ಕಾನೂನು ಪದವೀಧರರು ವಕೀಲರಾಗಿ ನೋಂದಣಿ ಮಾಡಿಕೊಳ್ಳುವಾಗ 15 ಸಾವಿರದಿಂದ 42 ಸಾವಿರವರೆಗೆ ಶುಲ್ಕ ವಿಧಿಸುತ್ತಿವೆ. ಆದರೆ, ವಕೀಲರ ಕಾಯ್ದೆಯ ಸೆಕ್ಷನ್ 24(1)(ಎಫ್) ವಕೀಲರ ನೋಂದಣಿ ಶುಲ್ಕವನ್ನು ಒಬಿಸಿ ಮತ್ತು ಇತರ ಸಮುದಾಯದ ವಕೀಲರಿಗೆ 750 ರೂ ಹಾಗೂ ಎಸ್ಸಿ/ಎಸ್ಟಿ ಸಮುದಾಯದ ವಕೀಲರಿಗೆ 125 ರೂ ಗಿಂತ ಹೆಚ್ಚು ಶುಲ್ಕ ಪಡೆಯುವಂತಿಲ್ಲ ಎಂದಿದೆ.
ಸಂಸತ್ತು ಕಾಯ್ದೆ ಮೂಲಕ ನಿಗದಿಪಡಿಸಿರುವ ಶುಲ್ಕವನ್ನು ಬದಲಿಸಿ ಹೆಚ್ಚಿಗೆ ಶುಲ್ಕ ಪಡೆಯಲಾಗದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಹಾಗೆಯೇ ಈ ತೀರ್ಪು ಉತ್ತರಾನ್ವಯವಾಗಲಿದ್ದು, ಈಗಾಗಲೇ ಪಾವತಿಸಿರುವ ಶುಲ್ಕವನ್ನು ವಕೀಲರು ಪರಿಷತ್ತುಗಳು ಹಿಂಪಾವತಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಇನ್ನು ವಕೀಲರ ಪರಿಷತ್ತುಗಳು ವಕೀಲರಿಗೆ ನೀಡುವ ಸೇವೆಗೆ ಪೂರಕವಾಗಿ ಅಗತ್ಯ ಶುಲ್ಕಗಳನ್ನು ಪಡೆಯಲು ಸ್ವಾತಂತ್ರ್ಯ ಹೊಂದಿವೆಯಾದರೂ ಅದನ್ನು ನೋಂದಣಿ ಶುಲ್ಕವಾಗಿ ಪರಿಗಣಿಸುವಂತಿಲ್ಲ ಎಂದು ಸೂಚಿಸಿದೆ.
(Writ Petition (C) No. 352 of 2023)