ಬೆಂಗಳೂರು: ಅಧಿಕಾರ ವ್ಯಾಪ್ತಿ ಮೀರಿ, ಕಾನೂನನ್ನು ತಪ್ಪಾಗಿ ಅರ್ಥೈಸಿ, ಆಸ್ತಿ ಖರೀದಿಯ ಸೇಲ್ ಡೀಡ್ ಅನ್ನು ರದ್ದುಪಡಿಸಿದ್ದ ಉಪವಿಭಾಗಾಧಿಕಾರಿ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಎಸಿಗೆ 25 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.
ಆಸ್ತಿ ಖರೀದಿಸಿಗೆ ಸಂಬಂಧಿಸಿದ ಸೇಲ್ ಡೀಡ್ ಅನ್ನು ರದ್ದುಪಡಿಸಿದ ಹಾವೇರಿ ಜಿಲ್ಲೆಯ ಸವಣೂರು ಉಪವಿಭಾಗಾಧಿಕಾರಿ ಕ್ರಮವನ್ನು ಪ್ರಶ್ನಿಸಿ ಧರಿಯಪ್ಪಗೌಡ ಪಾಟೀಲ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಧಾರವಾಡ ಪೀಠದಲ್ಲಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರು ಈ ಮಹತ್ವದ ತೀರ್ಪು ನೀಡಿದ್ದಾರೆ.
ಹೈಕೋರ್ಟ್ ತನ್ನ ತೀರ್ಪಿನಲ್ಲಿ, ಹಿರಿಯ ನಾಗರಿಕರ ಕಾಯ್ದೆಯ ಸೆಕ್ಷನ್ 23ನ್ನು ಎಸಿ ತಪ್ಪಾಗಿ ಅರ್ಥೈಸಿದ್ದಾರೆ. ಅಷ್ಟೇ ಅಲ್ಲ ಸೂಕ್ತ ಬೆಲೆ ನೀಡಿ ಆಸ್ತಿ ಖರೀದಿಸಿದ ವ್ಯಕ್ತಿಯ ಕಾನೂನಾತ್ಮಕ ಹಕ್ಕಿಗೂ ಭಂಗ ಉಂಟುಮಾಡಿದ್ದಾರೆ. ಸರಿಯಾದ ನ್ಯಾಯವ್ಯಾಪ್ತಿಯಿಲ್ಲದೆ ನೋಂದಾಯಿತ ಮಾರಾಟ ಪತ್ರವನ್ನು ರದ್ದುಗೊಳಿಸುವ ಮೂಲಕ ಆಸ್ತಿ ವಹಿವಾಟಿನ ಕಾನೂನಾತ್ಮಕ ಸ್ಥಿರತೆಯನ್ನು ದುರ್ಬಲಗೊಳಿಸಿದ್ದಾರೆ. ಜತೆಗೆ ಆಸ್ತಿ ಖರೀದಿಸಿದ ಅರ್ಜಿದಾರರಿಗೆ ಅನಗತ್ಯವಾಗಿ ದಾವೆ ಹೂಡುವ ಮತ್ತು ಹೆಚ್ಚುವರಿ ಹಣ ನೀಡಿ ವಿವಾದ ಬಗೆಹರಿಸಿಕೊಳ್ಳಬೇಕಾದ ಆರ್ಥಿಕ ಸಂಕಷ್ಟವನ್ನು ತಂದಿದ್ದಾರೆ ಎಂದು ನ್ಯಾಯಪೀಠ ಹೇಳಿದೆ.
ಅಲ್ಲದೇ, ಹಿರಿಯ ನಾಗರಿಕರ ಕಾಯ್ದೆಯ ಸೆಕ್ಷನ್ 23 ರ ಅಡಿಯಲ್ಲಿ ಪರಿಹಾರ ಕೋರುವಾಗ ವರ್ಗಾವಣೆ ಮಾಡಲ್ಪಟ್ಟ ಆಸ್ತಿಯು ಅಂತಹ ಹಿರಿಯ ನಾಗರಿಕರ ಮೂಲಭೂತ ಅವಶ್ಯಕತೆಗಳನ್ನು ಮತ್ತು ಭೌತಿಕ ಅಗತ್ಯಗಳನ್ನು ಪೂರೈಸುವ ಷರತ್ತನ್ನು ಒಳಗೊಂಡಿರಬೇಕು. ಆದರೆ, ಈ ಆಸ್ತಿಯು ವಿಭಜನೆ ಮೂಲಕ ಹಂಚಿಕೆಯಾಗಿದ್ದು, ಅಂತಹ ಯಾವುದೇ ಷರತ್ತನ್ನು ಒಳಗೊಂಡಿಲ್ಲ. ನಂತರ ಆಸ್ತಿಯನ್ನು ಅದರ ವಾರಸುದಾರರು ಮಾರಾಟ ಮಾಡಿದ್ದಾರೆ. ಖರೀದಿದಾರರು ಸೂಕ್ತ ಪ್ರತಿಫಲ ನೀಡಿ ಖರೀದಿಸಿದ್ದಾರೆ. ಹೀಗಿದ್ದೂ, ಎಸಿ ಸೆಕ್ಷನ್ 23 ಅಡಿಯಲ್ಲಿ ಕ್ರಯ ಪತ್ರವನ್ನು ರದ್ದುಪಡಿಸುವ ಮೂಲಕ ಕಾನೂನು ವ್ಯಾಪ್ತಿ ಮೀರಿ ಆದೇಶಿಸಿದ್ದಾರೆ ಎಂದು ಹೈಕೋರ್ಟ್ ತೀರ್ಪಿನಲ್ಲಿ ವಿವರಿಸಿದೆ. ಅಲ್ಲದೇ ಎಸಿ ಆದೇಶವನ್ನು ರದ್ದುಪಡಿಸಿರುವ ಹೈಕೋರ್ಟ್, ಉಪ ವಿಭಾಗಾಧಿಕಾರಿಗೆ 25 ಸಾವಿರ ದಂಡ ವಿಧಿಸಿದ್ದು, ದಂಡದ ಮೊತ್ತವನ್ನು ಹೈಕೋರ್ಟ್ ನ ಧಾರವಾಡ ಪೀಠದ ವಕೀಲರ ಗುಮಾಸ್ತರ ಕಲ್ಯಾಣ ನಿಧಿಗೆ ಪಾವತಿಸುವಂತೆ ನಿರ್ದೇಶಿಸಿದೆ.
ಪ್ರಕರಣದ ಹಿನ್ನೆಲೆ: ಅರ್ಜಿದಾರರಾದ ಧರಿಯಪ್ಪಗೌಡ ಪಾಟೀಲ್ ಎಂಬುವರು ಮೃತ ಬಸವರಾಜ್ ಎಂಬುವರ ಪತ್ನಿ ಹಾಗೂ ಮಕ್ಕಳಿಂದ ಆಸ್ತಿ ಖರೀದಿ ಮಾಡಿದ್ದರು. ಈ ಆಸ್ತಿಯ ಮಾರಾಟವನ್ನು ರದ್ದುಪಡಿಸುವಂತೆ ಕೋರಿ ಬಸವರಾಜ್ ತಾಯಿ ರತ್ನಮ್ಮ ಹಿರಿಯ ನಾಗರಿಕರ ಕಾಯ್ದೆ ಅಡಿಯಲ್ಲಿ ಎಸಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಸವಣೂರು ಎಸಿ ಆಸ್ತಿ ಮಾರಾಟವನ್ನು ಹಿರಿಯ ನಾಗರಿಕರ ಕಾಯ್ದೆಯ ಸೆಕ್ಷನ್ 23ರ ಅಡಿಯಲ್ಲಿ ರದ್ದುಪಡಿಸಿ ಆದೇಶಿಸಿದ್ದರು. ಎಸಿ ಆದೇಶವನ್ನು ಪ್ರಶ್ನಿಸಿ ಆಸ್ತಿಯನ್ನು ಖರೀದಿಸಿದ್ದ ಧರಿಯಪ್ಪಗೌಡ ಪಾಟೀಲ್ ಹೈಕೋರ್ಟ್ ಮೆಟ್ಟಿಲೇರಿದ್ದರು.
(WRIT PETITION NO. 101705 OF 2024 (GM-RES)