ⓇJudgements

50 ವರ್ಷ ಮೇಲ್ಪಟ್ಟ ಶಿಕ್ಷಕರಿಗೆ ವರ್ಗಾವಣೆ ಇಲ್ಲ: ನಿಯಮ ಎತ್ತಿ ಹಿಡಿದ ಹೈಕೋರ್ಟ್

Share It

ಬೆಂಗಳೂರು: 50 ವರ್ಷ ಮೇಲ್ಪಟ್ಟ ಮಹಿಳಾ ಶಿಕ್ಷಕರಿಗೆ ವರ್ಗಾವಣೆಯಿಂದ ವಿನಾಯಿತಿ ನೀಡುವ ಕರ್ನಾಟಕ ಸ್ಟೇಟ್ ಸಿವಿಲ್ ಸರ್ವೀಸಸ್ (ರೆಗ್ಯುಲೇಷನ್ ಆಫ್ ಟ್ರಾನ್ಸಫರ್ ಆಫ್ ಟೀಚರ್ಸ್) ಆಕ್ಟ್ ನ ನಿಯಮವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

ಅಲ್ಲದೇ, 50 ವರ್ಷ ದಾಟಿದ್ದ ಇಬ್ಬರು ಶಿಕ್ಷಕಿಯರನ್ನು ವರ್ಗಾವಣೆ ಮಾಡಿದ್ದ ಶಿಕ್ಷಣ ಇಲಾಖೆ ಆಯುಕ್ತರ ಆದೇಶವನ್ನು ರದ್ದು ಮಾಡಿದ್ದ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ (ಕೆಎಸ್ಎಟಿ) ಆದೇಶವನ್ನು ಎತ್ತಿಹಿಡಿದಿದೆ.

ಶಿಕ್ಷಕರ ವರ್ಗಾವಣೆಯನ್ನು ರದ್ದುಪಡಿಸಿರುವ ಕೆಎಟಿ ಆದೇಶದ ವಿರುದ್ಧ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಎಸ್.ಜಿ ಪಂಡಿತ್ ಅವರಿದ್ದ ವಿಭಾಗೀಯ ಪೀಠ ಈ ಮಹತ್ವದ ತೀರ್ಪು ನೀಡಿದೆ.

ಹೈಕೋರ್ಟ್ ತನ್ನ ತೀರ್ಪಿನಲ್ಲಿ, ಪ್ರತಿವಾದಿಗಳಾಗಿರುವ ಇಬ್ಬರು ಶಿಕ್ಷಕಿಯರಾದ ಉಮಾದೇವಿ ಹುಂಡೇಕರ್ ಅವರು 55 ವರ್ಷ ದಾಟಿದ್ದರೆ, ಪ್ರಭಾವತಿ ರೋನದ್ ಅವರು 58 ವರ್ಷ ವಯಸ್ಸು ದಾಟಿದ್ದಾರೆ. ಕರ್ನಾಟಕ ಸ್ಟೇಟ್ ಸಿವಿಲ್ ಸರ್ವೀಸಸ್ (ರೆಗ್ಯೂಲೇಷನ್ ಆಫ್ ಟ್ರಾನ್ಸಫರ್ ಆಫ್ ಟೀಚರ್ಸ್) ಆಕ್ಟ್ 2020ರ ಸೆಕ್ಷನ್ 10(1)(6) ಅಡಿಯಲ್ಲಿ 50 ವರ್ಷ ದಾಟಿರುವ ಮಹಿಳಾ ಶಿಕ್ಷಕರಿಗೆ ಹಾಗೂ 55 ವರ್ಷ ವಯೋಮಿತಿ ದಾಟಿರುವ ಪುರುಷ ಶಿಕ್ಷಕರಿಗೆ ವರ್ಗಾವಣೆಯಿಂದ ವಿನಾಯಿತಿ ನೀಡಲಾಗಿದೆ. ಹೀಗಾಗಿ ಶಿಕ್ಷಕಿಯರ ಕೋರಿಗೆ ಮೇರೆಗೆ ವರ್ಗಾವಣೆಯನ್ನು ರದ್ದುಪಡಿಸಿರುವ ಕೆಎಟಿ ಆದೇಶ ಸರಿಯಿದ್ದು, ಅದರಲ್ಲಿ ಮಧ್ಯಪ್ರವೇಶಿಸುವ ಯಾವುದೇ ಸಕಾರಣವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.

ಅಲ್ಲದೇ, ಯಾವುದೇ ಶಾಸನಾತ್ಮಕ ನಿಯಮ ಜಾರಿ ಮಾಡಿದಾಗ ಅದರ ಉಪಯೋಗ ಕೋರಿ ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದಾರೋ ಇಲ್ಲವೋ ಎಂಬುದನ್ನು ಪರಿಗಣಿಸದೇ ಅದರ ಉಪಯೋಗವನ್ನು ಪ್ರಾಧಿಕಾರಗಳು ನೀಡಬೇಕು ಎಂದು ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ಪ್ರಕರಣದ ಹಿನ್ನೆಲೆ: ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಶಿಕ್ಷಕಿಯರಾದ ಉಮಾದೇವಿ ಹುಂಡೇಕರ್ (55) ಹಾಗೂ ಪ್ರಭಾವತಿ ರೋಣದ್ (58) ಅವರನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು 2023ರ ಜೂನ್ 20 ಮತ್ತು 21ರಂದು ವರ್ಗಾವಣೆ ಮಾಡಿದ್ದರು. ಉಮಾದೇವಿ ಹುಂಡೇಕರ್ 30 ವರ್ಷ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದರೆ, ಪ್ರಭಾವತಿ ರೋಣದ್ 34 ವರ್ಷ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದರು. ಈ ಇಬ್ಬರೂ ಶಿಕ್ಷಕಿಯರು ಆಯಾ ಶಾಲೆಗಳಿಗೆ ಹೆಚ್ಚುವರಿಯಾಗಿದ್ದಾರೆಂದು ಪರಿಗಣಿಸಿ ಬೇರೆ ಶಾಲೆಗಳಿಗೆ ವರ್ಗಾಯಿಸಿದ್ದರು.

ಇದನ್ನು ಪ್ರಶ್ನಿಸಿ ಇಬ್ಬರೂ ಶಿಕ್ಷಕಿಯರು ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಕೆಎಸ್ಎಟಿ ವರ್ಗಾವಣೆ ರದ್ದುಪಡಿಸಿ ಆದೇಶಿಸಿತ್ತು. ಕೆಎಟಿ ಆದೇಶ ಪ್ರಶ್ನಿಸಿ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಆಯುಕ್ತರು, ಜಂಟಿ ನಿರ್ದೇಶಕರು, ಉಪ ನಿರ್ದೇಶಕರು, ಬಿಇಒ, ಶಾಲಾ ಹೆಡ್ ಮಾಸ್ಟರ್ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು.  

WRIT PETITION NO. 102121 OF 2024 (S-KAT)


Share It

You cannot copy content of this page