ಬೆಂಗಳೂರು: ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಹಣ ಬಿಡುಗಡೆ ಮಾಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಬಿಜೆಪಿ ಶಾಸಕರೊಬ್ಬರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಯನ್ನು ವಜಾಗೊಳಿಸಿರುವ ಹೈಕೋರ್ಟ್, ಈ ಕುರಿತಂತೆ ಸರ್ಕಾರ ಅಥವಾ ವಿಧಾನಸಭೆಯಲ್ಲಿ ಧ್ವನಿ ಎತ್ತುವಂತೆ ಸಲಹೆ ನೀಡಿದೆ.
ತಮ್ಮ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ 78 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಬೆಂಗಳೂರಿನ ದಾಸರಹಳ್ಳಿ ಶಾಸಕ ಎಸ್ ಮುನಿರಾಜು ಸಲ್ಲಿಸಿದ್ದ ಪಿಐಎಲ್ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ ಅಂಜಾರಿಯಾ ಹಾಗು ನ್ಯಾಯಮೂರ್ತಿ ಕೆ.ವಿ ಅರವಿಂದ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ಅರ್ಜಿದಾರರು ಚುನಾಯಿತ ಪ್ರತಿನಿಧಿಯಾಗಿದ್ದಾರೆ. ಶಾಸಕರಾಗಿರುವ ಅವರು ಈ ಕುರಿತಂತೆ ವಿಧಾನಸಭೆಯಲ್ಲಿ ಅಥವಾ ಸರ್ಕಾರದ ಮುಂದೆ ಹಾಗೂ ಸಂಬಂಧಿತ ಪ್ರಾಧಿಕಾರಗಳ ಎದುರು ಧ್ವನಿ ಎತ್ತಲು ಸದಾ ಮುಕ್ತ ಅವಕಾಶ ಹೊಂದಿದ್ದಾರೆ. ಹಾಗಿದ್ದೂ ಇಂತಹ ವಿಚಾರವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವುದು ನ್ಯಾಯಸಮ್ಮತವಲ್ಲ ಮತ್ತು ಇಂತಹ ಪಿಐಎಲ್ ಗಳನ್ನು ಪರಿಗಣಿಸಲಾಗದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಇದಕ್ಕೂ ಮುನ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ ಮಂಡಿಸಿದ ಅರ್ಜಿದಾರ ಶಾಸಕರ ಪರ ವಕೀಲರು, ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಫಂಡ್ ಬಿಡುಗಡೆ ಮಾಡುವಂತೆ ಈ ವರ್ಷ 6 ಬಾರಿ ಮನವಿ ಸಲ್ಲಿಸಲಾಗಿದೆ. ರಸ್ತೆಗಳು ಗುಂಡಿ ಬಿದ್ದು ಹೀನಾಯ ಸ್ಥಿತಿಯಲ್ಲಿವೆ. ರಸ್ತೆ ಗುಂಡಿಗಳಿಂದಾಗಿ ವಾಹನ ಸವಾರರು ಅಪಾಯಕ್ಕೆ ಸಿಲುಕುತ್ತಿದ್ದಾರೆ. ಒಂದು ವೇಳೆ ಬೈಕ್ ಸವಾರರು ರಸ್ತೆಗಳಲ್ಲಿ ವಾಹನ ಚಲಾಯಿಸಿದರೆ ಬಿದ್ದು ಆಸ್ಪತ್ರೆ ಸೇರುವಂತ ಸ್ಥಿತಿ ಇದೆ ಎಂದು ವಿವರಿಸಿದರು.
ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ಇಂತಹ ಕೋರಿಕೆಗಳನ್ನು ಪಿಐಎಲ್ ವ್ಯಾಪ್ತಿಯಲ್ಲಿ ಪರಿಗಣಿಸಲು ಬರುವುದಿಲ್ಲ. ಸಾರ್ವಜನಿಕರ ಅನುಕೂಲಕ್ಕಾಗಿ ಮತ್ತು ಅಭಿವೃದ್ಧಿಗಾಗಿ ಫಂಡ್ ಬಿಡುಗಡೆ ಮಾಡುವುದು, ಮಾರ್ಪಡಿಸುವುದು, ರದ್ದುಪಡಿಸುವುದು, ಕಡಿತ ಮಾಡುವುದು ಆಯಾ ಚುನಾಯಿತ ಸರ್ಕಾರಗಳ ಕಾರ್ಯವ್ಯಾಪ್ತಿಗೆ ಒಳಪಡುತ್ತದೆ.
ಜತೆಗೆ ರಾಜ್ಯದ ಯಾವ ಕ್ಷೇತ್ರಕ್ಕೆ ಅಥವಾ ಏರಿಯಾಗೆ ಎಷ್ಟು ಅನುದಾನ ನೀಡಬೇಕು, ಹಣ ಬಿಡುಗಡೆ ಮಾಡಬೇಕು ಎಂಬುದು ಕಾರ್ಯಾಂಗದ ನಿರ್ಧಾರಕ್ಕೆ ಒಳಪಡುತ್ತದೆ ಮತ್ತು ಸರ್ಕಾರದ ನೀತಿಗೆ ಸಂಬಂಧಿಸಿದ ವಿಚಾರವಾಗುತ್ತದೆ. ಇಂತಹ ವಿಚಾರಗಳನ್ನು ಪಿಐಎಲ್ ಅಡಿ ನ್ಯಾಯಾಂಗ ನಿರ್ಧಾರ ಮಾಡಲಾಗದು ಎಂದು ಅಭಿಪ್ರಾಯಪಟ್ಟಿದೆ.
(WP 16180/2024)