ಬೆಂಗಳೂರು: ಕೊಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಮನೆ ಊಟಕ್ಕೆ ವ್ಯವಸ್ಥೆ ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಈ ಕುರಿತಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಸೂಚನೆ ನಿಡಿದೆ.
ಆರೋಗ್ಯ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ತನಗೆ ಮನೆ ಊಟ ಹಾಗೂ ಹಾಸಿಗೆ ಒದಗಿಸಲು ಅನುಮತಿಸುವಂತೆ ಕೋರಿ ನಟ ದರ್ಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್.ಕೃಷ್ಣ ಕುಮಾರ್ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿದೆ.
ಆರೋಪಿ ದರ್ಶನ್ ಈ ಕುರಿತಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಯಾದಲ್ಲಿ ಒಂದು ವಾರದಲ್ಲಿ ಕಾನೂನು ರೀತಿ ಮನವಿಯನ್ನು ಇತ್ಯರ್ಥಪಡಿಸಬೇಕು ಎಂದು ಸೂಚಿಸಿದೆ.
ಹಿಂದಿನ ವಿಚಾರಣೆ ವೇಳೆ ಪ್ರಾಸಿಕ್ಯೂಷನ್ ಪರ ವಕೀಲರು ವಾದ ಮಂಡಿಸಿ, ಬಂಧೀಖಾನೆ ಕಾಯ್ದೆಯ ಪ್ರಕಾರ ಈ ರೀತಿಯ ಮನವಿಯನ್ನು ಮೊದಲಿಗೆ ಎಸ್ಪಿ, ಐಜಿಪಿಗೆ ಸಲ್ಲಿಸಬೇಕು. ಬಳಿಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬೇಕು. ಆದರೆ, ಅರ್ಜಿದಾರರು ನೇರವಾಗಿ ಹೈಕೋರ್ಟ್ ಮೆಟ್ಟಿಲೇರಿರುವುದು ಸರಿಯಾದ ಕ್ರಮವಲ್ಲ. ಆದ್ದರಿಂದ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಕೋರಿದ್ದರು.
ದರ್ಶನ್ ಕೋರಿಕೆ: ಜೈಲಿನಲ್ಲಿ ನೀಡುತ್ತಿರುವ ಆಹಾರ ದರ್ಶನ್ ಗೆ ಸರಿಯಾಗಿ ಜೀರ್ಣವಾಗುತ್ತಿಲ್ಲ. ಹೀಗಾಗಿ, ಕೆಲವು ದಿನಗಳಿಂದ ಅತಿಸಾರದಿಂದ ಬಳಲುತ್ತಿದ್ದಾರೆ. ಜೊತೆಗೆ, ದರ್ಶನ್ ತೂಕದಲ್ಲಿಯೂ ತೀವ್ರ ಇಳಿಕೆಯಾಗಿದೆ. ಇದೇ ರೀತಿ ಮುಂದುವರೆದಲ್ಲಿ ಆರೋಗ್ಯ ಮತ್ತಷ್ಟು ಹದಗೆಡುವ ಸಾಧ್ಯತೆಯಿದೆ. ಆದ್ದರಿಂದ, ಮನೆ ಆಹಾರ ತರಿಸಿಕೊಳ್ಳುವುದಕ್ಕೆ ಅವಕಾಶ ಕೋರಿ ಎಂದು ಜೈಲು ಅಧಿಕಾರಿಗಳಿಗೆ ಮೌಖಿಕವಾಗಿ ಮನವಿ ಮಾಡಿದ್ದಾರೆ. ಆದರೆ, ಅಧಿಕಾರಿಗಳು ಹೈಕೋರ್ಟ್ ಆದೇಶವಿಲ್ಲದೇ, ಮನೆ ಊಟಕ್ಕೆ ಅನುಮತಿಸುವುದಿಲ್ಲ ಎಂದಿದ್ದಾರೆ.
ಅಲ್ಲದೇ, ಕರ್ನಾಟಕ ಬಂಧೀಖಾನೆ ಕಾಯ್ದೆಯ ಸೆಕ್ಷನ್ 30ರ ಅಡಿ ವಿಚಾರಣಾಧೀನ ಕೈದಿಗಳು ಹೊರಗಿನಿಂದ ಆಹಾರ, ಬಟ್ಟೆ, ದಿನಪತ್ರಿಕೆ, ಪುಸ್ತಕ ಮತ್ತು ಹಾಸಿಗೆಯನ್ನು ತರಿಸಿಕೊಳ್ಳುವುದಕ್ಕೆ ಅವಕಾಶವಿದೆ. ಜೊತೆಗೆ, ಅರ್ಜಿದಾರರು ಅಪರಾಧಿಯಾಗಿಲ್ಲ. ಅವರಿಗೆ ಮನೆ ಆಹಾರ ತರಿಸಿಕೊಳ್ಳಲು ಅವಕಾಶ ನೀಡದಿರುವ ಜೈಲು ಅಧಿಕಾರಿಗಳ ಕ್ರಮ ಅಮಾನವೀಯ ಮತ್ತು ಸಂವಿಧಾನದ ವಿಧಿ 21ರ ಅಡಿ ಬದುಕುವ ಹಕ್ಕಿನ ಉಲ್ಲಂಘನೆ. ಆದ್ದರಿಂದ ದರ್ಶನ್ ಗೆ ಮನೆ ಊಟ, ಹಾಸಿಗೆ ತರಿಸಿಕೊಳ್ಳಲು ಅನುಮತಿಸಬೇಕು ಎಂದು ಅರ್ಜಿಯಲ್ಲಿ ಕೋರಿದ್ದರು.
ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿದ್ದು, ಜೂನ್ 22ರಿಂದ ನ್ಯಾಯಾಂಗ ಬಂಧನದಲ್ಲಿದ್ದು, ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾ ಕೈದಿಯಾಗಿದ್ದಾರೆ.
The Karnataka Prisons Act, 1963, Section 30: Maintenance of certain prisoners from private sources.—A civil prisoner or an unconvicted criminal prisoner shall be permitted to maintain himself and to purchase or receive from private sources at proper hours food, clothing, bedding or writing materials, books, newspapers or other necessaries, subject to examination and to such regulations as may be approved by the Inspector-General.
(WP 18222/2024)