ಬೆಂಗಳೂರು: ಗ್ರಾಹಕರೊಬ್ಬರಿಂದ ಆನ್ ಲೈನ್ ಮೂಲಕ 133 ರೂಪಾಯಿ ಹಣ ಪಡೆದು ಆಹಾರ ಪೂರೈಕೆ ಮಾಡದ ಹಿನ್ನೆಲೆಯಲ್ಲಿ ಆಹಾರ ವಿತರಣಾ ಕಂಪನಿ ಜೊಮಾಟೋಗೆ 60 ಸಾವಿರ ರೂಪಾಯಿ ದಂಡ ವಿಧಿಸಿ ಧಾರವಾಡ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
ಹಣ ಪಡೆದು ಆಹಾರ ವಿತರಿಸದ ಜೊಮಾಟೋ ಕ್ರಮವನ್ನು ಆಕ್ಷೇಪಿಸಿ ಹಾಗೂ ಪರಿಹಾರ ಕೋರಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ವೇದಿಕೆ ಅಧಕ್ಷರಾದ ಈಶಪ್ಪ ಕೆ.ಬಿ, ಸದಸ್ಯರಾದ ವಿಶಾಲಾಕ್ಷಿ ಎ.ಬಿ ಹಾಗೂ ಪಿ.ಸಿ ಹಿರೇಮಠ್ ಅವರಿದ್ದ ಪೀಠ ಈ ಆದೇಶ ಹೊರಡಿಸಿದೆ.
ಜೊಮಾಟೋ ಸೇವಾ ಕೊರತೆಯು ದೂರುದಾರ ಮಹಿಳೆಗೆ ಅನಾನುಕೂಲ ಹಾಗೂ ಮಾನಸಿಕ ಯಾತನೆ ಉಂಟುಮಾಡಿದೆ. ಹೀಗಾಗಿ, ಅವರಿಗೆ 60 ಸಾವಿರ ರೂಪಾಯಿ ಪರಿಹಾರ ಪಾವತಿಸಬೇಕು ಎಂದು ಆದೇಶದಲ್ಲಿ ಹೇಳಿದೆ.
ಪ್ರಕರಣದ ಹಿನ್ನೆಲೆ: 2023ರ ಆಗಸ್ಟ್ 31 ರಂದು ದೂರುದಾರ ಮಹಿಳೆ ಜೊಮಾಟೋಗೆ ಗೂಗಲ್ ಪೇ ₹133.25 ಪಾವತಿಸಿ ಮೊಮೋಸ್ ಆರ್ಡರ್ ಮಾಡಿದ್ದರು. ಕೆಲ ಸಮಯದ ಬಳಿಕ ಆರ್ಡರ್ ತಲುಪಿಸಿರುವುದಾಗಿ ಜೊಮಾಟೋ ಕಡೆಯಿಂದ ಮೆಸೇಜ್ ಬಂದಿತ್ತು. ಈ ವೇಳೆ ಮಹಿಳೆ ತಮಗೆ ಆಹಾರ ತಲುಪಿಲ್ಲ ಎಂದಿದ್ದರು.
ನಂತರ ಆಹಾರ ಬುಕ್ ಮಾಡಿದ್ದ ರೆಸ್ಟೋರೆಂಟ್ ಸಂಪರ್ಕಿಸಿದಾಗ ಡೆಲಿವರಿ ಏಜೆಂಟ್ ತೆಗೆದುಕೊಂಡು ಹೋಗಿದ್ದಾರೆಂದು ತಿಳಿಸಿದ್ದರು. ಈ ವೇಳೆ ಮಹಿಳೆ ವೆಬ್ ಸೈಟ್ ಮೂಲಕ ಏಜೆಂಟ್ ಸಂಪರ್ಕಿಸಲು ಪ್ರಯತ್ನಿಸಿದರಾದರೂ ಸಾಧ್ಯವಾಗಲಿಲ್ಲ.
ಆನ್ ಲೈನ್ ಮೂಲಕ ಹಣ ಪಾವತಿಸಿದ್ದರೂ ತಮಗೆ ಬುಕ್ ಮಾಡಿದ್ದ ಆಹಾರ ತಲುಪಿಸಿಲ್ಲ ಎಂದು ದೂರುದಾರ ಮಹಿಳೆ ಜೊಮಾಟೋಗೆ ಈಮೇಲ್ ಮೂಲಕ ದೂರು ಕಳುಹಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಜೊಮಾಟೋ 72 ಗಂಟೆಗಳ ಕಾಲ ಕಾಯುವಂತೆ ತಿಳಿಸಿತ್ತು.
ವಾರ ಕಳೆದರೂ ಜೊಮಾಟೋ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ದೂರುದಾರ ಮಹಿಳೆ 2023ರ ಸೆಪ್ಟೆಂಬರ್ 13 ರಂದು ಜೊಮಾಟೋಗೆ ಲೀಗಲ್ ನೋಟಿಸ್ ಕಳುಹಿಸಿ, ಅಂತಿಮವಾಗಿ ಗ್ರಾಹಕರ ವೇದಿಕೆಯಲ್ಲಿ ದೂರು ದಾಖಲಿಸಿದ್ದರು.
ದೂರಿನ ವಿಚಾರಣೆ ಸಮಯದಲ್ಲಿ, ಜೊಮಾಟೋ ಪರ ವಕೀಲರು ದೂರುದಾರರ ಆರೋಪಗಳನ್ನು ನಿರಾಕರಿಸಿದ್ದರು. ಜತೆಗೆ ಡೆಲಿವರಿ ಬಾಯ್ ಅಥವಾ ರೆಸ್ಟೋರೆಂಟ್ನೊಂದಿಗೆ ತಾವು ಯಾವುದೇ ಕಾನೂನು ಸಂಬಂಧವನ್ನು ಹೊಂದಿಲ್ಲ ಎಂದು ವಾದಿಸಿದ್ದರು.
ವಾದ ಪರಿಗಣಿಸಲು ನಿರಾಕರಿಸಿದ ಗ್ರಾಹಕ ನ್ಯಾಯಾಲಯ, ದೂರುದಾರರ ಕುಂದುಕೊರತೆಗಳನ್ನು ಪರಿಹರಿಸಲು ಜೊಮಾಟೊ 72 ಗಂಟೆಗಳ ಕಾಲಾವಕಾಶ ಕೋರಿದೆ. ಆದರೆ, ಈ ಸಂಬಂಧ ಜೊಮಾಟೋ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ, ದೂರುದಾರರಿಗೆ ಉಂಟಾದ ಅನಾನುಕೂಲತೆ ಮತ್ತು ಮಾನಸಿಕ ಯಾತನೆಗೆ ಪರಿಹಾರವಾಗಿ ₹50,000 ಹಾಗೂ ಕೇಸಿನ ವೆಚ್ಚವಾಗಿ ₹ 10,000 ನೀಡಬೇಕು ಎಂದು ಆದೇಶಿಸಿದೆ.
(Complaint No. 483/2023)