ರಾಂಚಿ: ಮದುವೆಯಾಗಿದ್ದರೂ ಮತ್ತೊಬ್ಬ ಮಹಿಳೆಯೊಂದಿಗೆ ಲಿವ್-ಇನ್ ರಿಲೇಷನ್ಷಿಪ್ ಸಂಬಂಧ ಹೊಂದಿದ್ದ ಪೊಲೀಸ್ ಅಧಿಕಾರಿಯನ್ನು ವಜಾಗೊಳಿಸಿದ್ದ ಆದೇಶವನ್ನು ಜಾರ್ಖಂಡ್ ಹೈಕೋರ್ಟ್ ಇತ್ತೀಚೆಗೆ ಎತ್ತಿಹಿಡಿದಿದೆ.
ಲಿವ್-ಇನ್ ಸಂಬಂಧದಲ್ಲಿದ್ದ ಮಹಿಳೆ ದಾಖಲಿಸಿದ್ದ ಅತ್ಯಾಚಾರ ಪ್ರಕರಣದಲ್ಲಿ ತನ್ನನ್ನು ಆರೋಪ ಮುಕ್ತಗೊಳಿಸಲಾಗಿದೆ. ಹೀಗಾಗಿ ತನ್ನನ್ನು ಸೇವೆಯಿಂದ ವಜಾಗೊಳಿಸಿರುವ ಆದೇಶವನ್ನು ರದ್ದುಗೊಳಿಸಬೇಕು ಎಂದು ಕೋರಿ ಪೊಲೀಸ್ ಅಧಿಕಾರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಸ್ಎನ್ ಪಾಠಕ್ ಅವರಿದ್ದ ಪೀಠ ಈ ತೀರ್ಪು ನೀಡಿದೆ.
ಹೈಕೋರ್ಟ್ ತನ್ನ ತೀರ್ಪಿನಲ್ಲಿ, “ಪೊಲೀಸ್ ಅಧಿಕಾರಿಯಾಗಿದ್ದು, ಪತ್ನಿ ಇದ್ದರೂ ಬೇರೊಬ್ಬ ಮಹಿಳೆಯೊಂದಿಗೆ ಲಿವ್-ಇನ್-ರಿಲೇಶನ್ನಲ್ಲಿರುವುದು ಯೋಗ್ಯ ನಡವಳಿಕೆಯಲ್ಲ. ಜತೆಗೆ, ಪೊಲೀಸ್ ಅಧಿಕಾರಿ ತಾನು ಲಿವ್-ಇನ್-ರಿಲೇಶನ್ನಲ್ಲಿ ಇದ್ದಿದ್ದನ್ನು ತಾವೇ ಒಪ್ಪಿಕೊಂಡಿದ್ದಾರೆ. ಅಧಿಕಾರಿಯ ಈ ನಡವಳಿಕೆ ಜಾರ್ಖಂಡ್ ರಾಜ್ಯದ ಪೊಲೀಸ್ ಸೇವಾ ಷರತ್ತುಗಳನ್ನು ಉಲ್ಲಂಘಿಸುತ್ತದೆ. ಹೀಗಾಗಿ ಪೊಲೀಸ್ ಇಲಾಖೆಯು ಆರೋಪಿತ ಅಧಿಕಾರಿಯನ್ನು ವಜಾಗೊಳಿಸಿರುವ ಕ್ರಮ ಸರಿಯಿದ್ದು ಅದರಲ್ಲಿ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣದ ಹಿನ್ನೆಲೆ: ಆರೋಪಿತ ಪೊಲೀಸ್ ಅಧಿಕಾರಿ ವಿವಾಹಿತರಾಗಿದ್ದು, ಮತ್ತೊಬ್ಬ ಮಹಿಳೆಯೊಬ್ಬರೊಂದಿಗೆ ಲಿವ್-ಇನ್-ರಿಲೇಶನ್ನಲ್ಲಿ ಇದ್ದರು. ಆಕೆ ಗರ್ಭಿಣಿಯಾದ ನಂತರ ಇಬ್ಬರ ನಡುವೆ ಜಗಳವಾಗಿ, ಪಂಚಾಯ್ತಿ ನಡೆದು ಅಂತಿಮವಾಗಿ ಮಹಿಳೆ ಪೊಲೀಸರಿಗೆ 2017ರಲ್ಲಿ ದೂರು ನೀಡಿದ್ದರು. ಲಿವ್-ಇನ್-ರಿಲೇಶನ್ನಲ್ಲಿದ್ದ ಮಹಿಳೆ ಪೊಲೀಸ್ ಅಧಿಕಾರಿ ವಿರುದ್ಧ ಅತ್ಯಾಚಾರ ಪ್ರಕರಣವನ್ನು ದಾಖಲಿಸಿದ್ದರು. ನಂತರ ಇಲಾಖಾ ವಿಚಾರಣೆ ನಡೆಸಿ ಪೊಲೀಸ್ ಅಧಿಕಾರಿಯನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು.
ಅತ್ಯಾಚಾರ ಆರೋಪ ಪ್ರಕರಣದಿಂದ ಖುಲಾಸೆಯಾದ ಪೊಲೀಸ್ ಅಧಿಕಾರಿ ತಮ್ಮನ್ನು ಸೇವೆಯಿಂದ ವಜಾಗೊಳಿಸಿರುವ ಆದೇಶ ರದ್ದುಪಡಿಸುವಂತೆ ಮತ್ತು ತಮ್ಮನ್ನು ಸೇವೆಗೆ ತೆಗೆದುಕೊಳ್ಳಲು ಪೊಲೀಸ್ ಇಲಾಖೆಗೆ ನಿರ್ದೇಶಿಸುವಂತೆ ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, ದ್ವಿಪತ್ನಿತ್ವದ ಆರೋಪವಿದ್ದರೆ ಅಥವಾ ಎರಡನೇ ಮದುವೆಯಾಗಿದ್ದರೆ ಮಾತ್ರ ಪೊಲೀಸ್ ಅಧಿಕಾರಿಯನ್ನು ಸೇವೆಯಿಂದ ವಜಾಗೊಳಿಸಬಹುದಿತ್ತು. ಪೊಲೀಸ್ ಅಧಿಕಾರಿ ಕೇವಲ ಲಿವ್-ಇನ್ ಸಂಬಂಧದಲ್ಲಿದ್ದ ಸಂದರ್ಭದಲ್ಲಿದ್ದರು. ಹೀಗಾಗಿ, ಅವರನ್ನು ಸೇವೆಯಿಂದ ವಜಾ ಮಾಡಿರುವ ಕ್ರಮ ಸರಿಯಲ್ಲ ಎಂದು ವಾದಿಸಿದ್ದರು.
ಸರ್ಕಾರದ ಪರ ವಕೀಲರು, ಪೊಲೀಸ್ ಅಧಿಕಾರಿ ಈಗಾಗಲೇ ಮದುವೆಯಾಗಿದ್ದರೂ “ಅಕ್ರಮ ಸಂಬಂಧ” ಹೊಂದಿರುವುದು ಕಂಡುಬಂದಿದೆ. ಇದು ಜಾರ್ಖಂಡ್ ಸೇವಾ ಸಂಹಿತೆ ಮತ್ತು ಜಾರ್ಖಂಡ್ ಪೊಲೀಸ್ ಕೈಪಿಡಿಯ ಉಲ್ಲಂಘನೆಯಾಗಿದೆ ಎಂದು ವಾದಿಸಿದ್ದರು.
(W.P.(S) No. 2250/2021)