News

ಕೇಜ್ರಿವಾಲ್ ಪತ್ನಿ ವಿರುದ್ಧ ಎಫ್ಐಆರ್ ದಾಖಲಿಸಲು ನಿರ್ದೇಶನ ಕೋರಿ ದೆಹಲಿ ಹೈಕೋರ್ಟ್ ಗೆ ಅರ್ಜಿ

Share It

ದೆಹಲಿ: ಕೋರ್ಟ್ ಕಲಾಪದ ಆಡಿಯೋ/ವೀಡಿಯೊ ತುಣುಕುಗಳನ್ನುಸಾಮಾಜಿಕ ತಾಣದಲ್ಲಿ ಹಂಚಿರುವ ಆರೋಪದ ಮೇಲೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ವಿರುದ್ಧ ಎಫ್‌ಐಆರ್ ದಾಖಲಿಸಿ ಕ್ರಮ ಜರುಗಿಸಬೇಕೆಂದು ಕೋರಿ ದೆಹಲಿ ಹೈಕೋರ್ಟ್‌ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅರವಿಂದ್ ಕೇಜ್ರಿವಾಲ್ ನ್ಯಾಯಾಲಯವನ್ನು ಉದ್ದೇಶಿಸಿ ಮಾತನಾಡಿರುವ ಆಡಿಯೋ/ವಿಡಿಯೋ ತುಣುಕುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿರುವುದು ಕಾನೂನು ಬಾಹಿರ. ಆದ್ದರಿಂದ ಕೇಜ್ರಿವಾಲ್ ಅವರ ಪತ್ನಿ ಸುನೀತಾ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಅರ್ಜಿದಾರರಾದ ವಕೀಲ ವೈಭವ್‌ ಸಿಂಗ್‌ ಮನವಿ ಮಾಡಿದ್ದಾರೆ.

ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದೆಹಲಿ ಸಿಎಂ ಕೇಜ್ರಿವಾಲ್ ಅವರನ್ನು ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್ 28 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ವೇಳೆ ಕೇಜ್ರಿವಾಲ್ ನ್ಯಾಯಾಲಯವನ್ನು ಉದ್ದೇಶಿಸಿ ಮಾತನಾಡುವಾಗ, ಜಾರಿ ನಿರ್ದೇಶನಾಲಯವು ಬಿಜೆಪಿಗಾಗಿ ಸುಲಿಗೆ ದಂಧೆ ನಡೆಸುತ್ತಿದೆ ಎಂದು ಆರೋಪಿಸಿದ್ದರು. ಈ ವೀಡಿಯೊವನ್ನು ಅವರ ಪತ್ನಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆಂದು ವಕೀಲ ಸಿಂಗ್‌ ಆಕ್ಷೇಪಿಸಿದ್ದಾರೆ.

2021ರ ನ್ಯಾಯಾಲಯಗಳ ವೀಡಿಯೋ ಕಾನ್ಫರೆನ್ಸಿಂಗ್ ನಿಯಮಗಳ ಪ್ರಕಾರ ನ್ಯಾಯಾಲಯದ ವಿಚಾರಣೆ ರೆಕಾರ್ಡ್ ಮಾಡುವುದು ಮತ್ತು ಅವುಗಳನ್ನು ಪ್ರಸಾರ ಮಾಡುವುದು ನಿಷಿದ್ಧ. ಹಾಗಿದ್ದೂ, ನ್ಯಾಯಾಲಯದ ಆಡಿಯೋ/ವಿಡಿಯೋಗಳನ್ನು ವೈರಲ್ ಮಾಡುವ ಮೂಲಕ ನ್ಯಾಯಾಂಗ ಮತ್ತು ನ್ಯಾಯಾಧೀಶರ ಘನತೆಗೆ ಧಕ್ಕೆ ತಂದಿದ್ದಾರೆ. 

ಆದ್ದರಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ಪತ್ನಿ ಹಾಗೂ ಸಂಬಂಧಪಟ್ಟವರ ವಿರುದ್ಧ ಎಫ್ಐಆರ್ ದಾಖಲಿಸಲು ಮತ್ತು ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸಲು ನಿರ್ದೇಶಬೇಕು ಎಂದು ಅರ್ಜಿದಾರರು ದೆಹಲಿ ಹೈಕೋರ್ಟ್ ಗೆ ಮನವಿ ಮಾಡಿದ್ದಾರೆ.


Share It

You cannot copy content of this page