News

ಮೂವರು ಪ್ರಯಾಣಿಕರಿಗೆ ಟಿಕೆಟ್ ನೀಡದ ಕಂಡಕ್ಟರ್ ಸೇವೆಯಿಂದ ವಜಾ

Share It

ಬೆಂಗಳೂರು: ಪ್ರಯಾಣಿಕರಿಗೆ ಟಿಕೆಟ್ ನೀಡದೆ ಕರ್ತವ್ಯಲೋಪ ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸೇವೆಯಿಂದ ನಿರ್ವಾಹಕ (ಕಂಡಕ್ಟರ್) ಒಬ್ಬರನ್ನು ಸೇವೆಯಿಂದ ವಜಾಗೊಳಿಸಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

ನಿರ್ವಾಹಕನನ್ನು ಸೇವೆಯಿಂದ ವಜಾಗೊಳಿಸಿದ್ದ ಆದೇಶವನ್ನು ರದ್ದುಪಡಿಸಿದ್ದ ಕಾರ್ಮಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಕೆಎಸ್‌ಆರ್‌ಟಿಸಿಯ ಡಿವಿಷನಲ್ ಕಂಟ್ರೋಲರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಆದೇಶ ಮಾಡಿದೆ.

ಹೈಕೋರ್ಟ್ ತನ್ನ ತೀರ್ಪಿನಲ್ಲಿ, ಕೆಎಸ್ಆರ್ಟಿಸಿಯಲ್ಲಿ ನಿರ್ವಾಹಕನಾಗಿದ್ದ ಕಾರ್ಮಿಕನಿಗೆ ಸಂಸ್ಥೆ ಸಂಬಳ ಸವಲತ್ತು ನೀಡಿದೆ. ಆದರೆ ಅವರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿಲ್ಲ. ಬದಲಿಗೆ ಪ್ರಯಾಣಿಕರಿಗೆ ಟಿಕೆಟ್ ನೀಡದೆ, ಹಣವನ್ನೂ ಸಂಗ್ರಹಿಸಿದೆ ಕರ್ತವ್ಯ ಲೋಪ ಎಸಗಿದ್ದಾರೆ. ಇಂತಹುದೇ ಲೋಪಗಳನ್ನು ಹಲವು ಬಾರಿ ಎಸಗಿದ್ದಾರೆ. 122 ಬಾರಿ ಕರ್ತವ್ಯ ಲೋಪ ಎಸಗಿರುವ ಆರೋಪ ಹೊತ್ತಿರುವ ನಿರ್ವಾಹಕನಿಗೆ ಅನುಕಂಪ ತೋರಲು ಸಾಧ್ಯವಿಲ್ಲ.

ಅದರಂತೆ, ಕರ್ತವ್ಯ ಲೋಪ ಎಸಗಿರುವ ಮತ್ತು ವೃತ್ತಿಯಲ್ಲಿ ಸದಾ ನಿರ್ಲಕ್ಷ್ಯ ತೋರಿರುವ ನಿರ್ವಾಹಕನನ್ನು ಸೇವೆಯಿಂದ ವಜಾಗೊಳಿಸಿರುವ ಕೆಎಸ್ಆರ್ಟಿಸಿ ಆಡಳಿತ ಮಂಡಳಿಯ ಆದೇಶ ಸರಿ ಇದೆ ಎಂದು ಹೈಕೋರ್ಟ್ ತೀರ್ಪು ನೀಡಿದೆ. ಅಲ್ಲದೇ, ಇಂತಹ ಕಾರ್ಮಿಕನನ್ನು ಮತ್ತೆ ಸೇವೆಗೆ ಸೇರಿಸಿಕೊಳ್ಳುವಂತೆ ಮೈಸೂರಿನ ಕಾರ್ಮಿಕ ನ್ಯಾಯಾಲಯ ನೀಡಿರುವ ತೀರ್ಪು ಸೂಕ್ತವಾಗಿಲ್ಲ ಎಂದು ಅಭಿಪ್ರಾಯಪಟ್ಟು ಅದರ ಆದೇಶವನ್ನು ರದ್ದುಪಡಿಸಿದೆ.

ಪ್ರಕರಣದ ಹಿನ್ನೆಲೆ: ಕೆಎಸ್‌ಆರ್‌ಟಿಸಿಯಲ್ಲಿ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದ ಮೈಸೂರಿನ ಪಿರಿಯಾಪಟ್ಟಣದ ಎನ್.ಎನ್ ಮಹಾದೇವ 2013ರ ಜನವರಿ 27ರಂದು ಗೋಣಿಕೊಪ್ಪದಿಂದ ಬಿ.ಶೆಟ್ಟಿಗೇರಿಗೆ ತೆರಳುತ್ತಿದ್ದ ಬಸ್ಸಿನಲ್ಲಿದ್ದ ಮೂವರು ಪ್ರಯಾಣಿಕರಿಗೆ ಟಿಕೆಟ್ ನೀಡಿರಲಿಲ್ಲ. ತಲಾ 17 ರೂ ನಂತೆ 51 ರೂ ಪಡೆದು ಟಿಕೆಟ್ ನೀಡಬೇಕಿದ್ದರೂ ಕರ್ತವ್ಯವನ್ನು ನಿರ್ವಹಿಸಿರಲಿಲ್ಲ. ಮಾರ್ಗ ಮಧ್ಯೆ ತಪಸಾಣಾಧಿಕಾರಿಗಳು ಪರೀಕ್ಷಿಸಿದಾಗ ಈ ವಿಚಾರ ಬೆಳಕಿಗೆ ಬಂದಿತ್ತು. ಈ ವರದಿಯನ್ನು ಅಧಿಕಾರಿಗಳು ಸಂಸ್ಥೆಗೆ ನೀಡಿದ್ದರು.

ವರದಿ ಮೇರೆಗೆ ಇಲಾಖಾ ತನಿಖೆ ನಡೆಸಿ, ಕರ್ತವ್ಯ ಲೋಪ ಎಸಗಿದ್ದು ಸಾಬೀತಾದ ಹಿನ್ನೆಲೆಯಲ್ಲಿ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಬಳಿಕ ಕಂಡಕ್ಟರ್ ಮಹಾದೇವ ವಜಾ ಆದೇಶ ಕ್ರಮವನ್ನು ಮೈಸೂರಿನ ಕಾರ್ಮಿಕ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಕಾರ್ಮಿಕ ನ್ಯಾಯಾಲಯವು ವಜಾ ಆದೇಶವನ್ನು 2017ರಲ್ಲಿ ರದ್ದುಪಡಿಸಿತ್ತು. ಕಾರ್ಮಿಕನಿಗೆ ಅನುಕಂಪ ತೋರಿದ್ದ ಕಾರ್ಮಿಕ ನ್ಯಾಯಾಲಯ ಎರಡು ವೇತನ ಹೆಚ್ಚಳವನ್ನು ಸ್ಥಗಿತಗೊಳಿಸಿ ಮತ್ತು ಸೇವೆಗೆ ಸೇರಿಸಿಕೊಳ್ಳಿ ಎಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಕೆಎಸ್‌ಆರ್‌ಟಿಸಿ ಹೈಕೋರ್ಟ್‌ ಮೆಟ್ಟಿಲೇರಿತ್ತು.

ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ನಿರ್ವಾಹಕ ಮಹಾದೇವ ಈ ಹಿಂದೆ ಇಂತಹ 122 ಪ್ರಕರಣಗಳಲ್ಲಿ ಭಾಗಿಯಾಗಿದ್ದರೆ ಎನ್ನಲಾಗಿದೆ. ಇದನ್ನು ಪರಿಗಣಿಸಿಯೇ ಕೆಎಸ್‌ಆರ್‌ಟಿಸಿಯ ಶಿಸ್ತು ಸಮಿತಿ ಅವರನ್ನು ಸೇವೆಯಿಂದ ವಜಾಗೊಳಿಸಿದೆ. ಈ ವಜಾ ಆದೇಶವನ್ನು ಕಾರ್ಮಿಕ ನ್ಯಾಯಾಲಯ ಹಗುರವಾಗಿ ಪರಿಗಣಿಸಬಾರದಿತ್ತು ಎಂದು ಅಭಿಪ್ರಾಯಪಟ್ಟಿದೆ.

ಇನ್ನು ಕಾರ್ಮಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಕೆಎಸ್ಆರ್ಟಿಸಿ ಸಲ್ಲಿಸಿದ್ದ ರಿಟ್ ಅರ್ಜಿಯಲ್ಲಿ ಮಹಾದೇವ ಅವರನ್ನು ಪ್ರತಿವಾದಿಯಾಗಿಸಿ, ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ, ಮಹಾದೇವ ಅವರಾಗಲೀ, ಅವರ ಪರ ವಕೀಲರಾಗಲೀ ಪ್ರಕರಣದ ವಿಚಾರಣೆಗೆ ಹಾಜರಾಗಿರಲಿಲ್ಲ.
(WRIT PETITION NO. 55722 OF 2017 (L-KSRTC)


Share It

You cannot copy content of this page