ಬೆಂಗಳೂರು: ಸರ್ಕಾರಿ ಕೋಟಾದಡಿ ಅಡಿ ಸರ್ಕಾರಿ ಅಥವಾ ಖಾಸಗಿ ಕಾಲೇಜುಗಳಿಗೆ 2022ರ ಜುಲೈ 22ರ ನಂತರ ಸೇರ್ಪಡೆಯಾಗಿ ಎಂಬಿಬಿಎಸ್ ಕಲಿತವರು ಪದವಿಯ ನಂತರ ಕಡ್ಡಾಯವಾಗಿ ಗ್ರಾಮೀಣ ವೈದ್ಯಕೀಯ ಸೇವೆ ಮಾಡುವುದರಿಂದ ಹಾಗೂ ಗ್ರಾಮೀಣ ಸೇವೆಗೆ ಒಪ್ಪಿ ನೀಡಿರುವ ಬಾಂಡುಗಳಿಂದ ತಪ್ಪಿಸಿಕೊಳ್ಳಲಾಗದು ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕಡ್ಡಾಯ ಗ್ರಾಮೀಣ ಸೇವೆ ಪ್ರಶ್ನಿಸಿ ಬೆಂಗಳೂರಿನ ಡಾ.ಶರಣ್ಯಾ ಮೋಹನ್ ಸೇರಿದಂತೆ ರಾಜಸ್ಥಾನ, ಹರಿಯಾಣ, ಕೇರಳ, ಗುಜರಾತ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಚೆನ್ನೈನ ವಿವಿಧ ಭಾಗಗಳ ಒಟ್ಟು 447 ವೈದ್ಯರು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ನೀಡಿದೆ.
ಹೈಕೋರ್ಟ್ ತನ್ನ 249 ಪುಟಗಳ ತೀರ್ಪಿನಲ್ಲಿ, ಗ್ರಾಮೀಣ ವೈದ್ಯಕೀಯ ಸೇವೆಯನ್ನು ಕಡ್ಡಾಯಗೊಳಿಸುವ ಸರ್ಕಾರದ ಆದೇಶದ ಹಿಂದಿನ ಉದ್ದೇಶವು, ಗ್ರಾಮೀಣ ಪ್ರದೇಶಗಳಲ್ಲಿ ವಾಸ ಮಾಡುವ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುವುದಷ್ಟೇ ಆಗಿದೆ. ಇಂತಹ ಪ್ರದೇಶಗಳ ಜನರಿಗೆ ಅಗತ್ಯ ಬಿದ್ದಾಗ ತಕ್ಷಣವೇ ವೈದ್ಯರನ್ನು ತಲುಪಲು ಸರಳ ಮಾರ್ಗಗಳಿಲ್ಲ. ಹೀಗಾಗಿ, ವಿದ್ಯಾರ್ಥಿಗಳು ಸರ್ಕಾರದ ಸದಾಶಯದ ಭಾಗವಾಗಬೇಕು’ ಎಂದು ಹೇಳಿದೆ.
ಅಲ್ಲದೇ, ವಿಶ್ವ ಆರೋಗ್ಯ ಸಂಸ್ಥೆಯು ವೈದ್ಯರ ಗ್ರಾಮೀಣ ಸೇವೆಯನ್ನು ಪ್ರೋತ್ಸಾಹಿಸಲು ಹಲವು ಶಿಫಾರಸುಗಳನ್ನು ಮಾಡಿದೆ. ಜಗತ್ತಿನ ಎಲ್ಲ ಭಾಗದಲ್ಲೂ ಕಡ್ಡಾಯ ಗ್ರಾಮೀಣ ಸೇವೆಯು ವೈದ್ಯಕೀಯ ವೃತ್ತಿಗೆ ಹೊರತಲ್ಲ. ವೈದ್ಯಕೀಯ ವಿದ್ಯಾರ್ಥಿಗಳು ಸಾರ್ವಜನಿಕ ಆರೋಗ್ಯ ಯೋಜನೆಯ ಭಾಗವಾಗಬೇಕು. ಸ್ವಯಂಪ್ರೇರಿತವಾಗಿ ಗ್ರಾಮೀಣ ಸೇವೆ ನೀಡಲು ತೊಡಗಿಸಿಕೊಳ್ಳುವ ದಿನಗಳು ಬರಬೇಕು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಇದೇ ವೇಳೆ ‘ಕರ್ನಾಟಕ ಶಿಕ್ಷಣ ಸಂಸ್ಥೆಗಳ (ಕ್ಯಾಪಿಟೇಶನ್ ಶುಲ್ಕ ನಿಷೇಧ) ಕಾಯ್ದೆ-1984ರ ಕಲಂ 14ರ ಅಡಿಯಲ್ಲಿ ನಿಯಮಗಳನ್ನು ರೂಪಿಸಲು ರಾಜ್ಯ ಸರ್ಕಾರ ಸ್ವತಂತ್ರವಾಗಿದೆ ಎಂದು ಹೇಳಿರುವ ಹೈಕೋರ್ಟ್, ಕಡ್ಡಾಯ ಗ್ರಾಮೀಣ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಅರ್ಜಿದಾರರಿಗೆ ಸಂಬಂಧಿಸಿದಂತೆ ವೈದ್ಯಕೀಯ ನಿರ್ದೇಶನಾಲಯ 2021ರ ಜೂನ್ 17ರಂದು ಹೊರಡಿಸಿದ್ದ ತಿದ್ದೋಲೆಯನ್ನು (ಕೊರಿಜೆಂಡಮ್) ಅಸಿಂಧುಗೊಳಿಸಿದೆ. ಇದರಿಂದಾಗಿ 2019-20ರಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿದ್ದ 447 ಅರ್ಜಿದಾರ ವೈದ್ಯ ವಿದ್ಯಾರ್ಥಿಗಳಿಗೆ ಕಡ್ಡಾಯ ಗ್ರಾಮೀಣ ಸೇವೆಯಿಂದ ವಿನಾಯ್ತಿ ದೊರೆತಂತಾಗಿದೆ.
(WP 7435/2021)