News

ಸುಳ್ಳು ಕೇಸ್ ದಾಖಲಿಸಿದ ನ್ಯಾಯಾಧೀಶ! ಹೈಕೋರ್ಟ್ ಆಕ್ರೋಶ; ಪ್ರಕರಣ ರದ್ದು

Share It

ತಮ್ಮ ತಾಳಕ್ಕೆ ತಕ್ಕಂತೆ ಕುಣಿಯದ ಸರ್ಕಾರಿ ಅಧಿಕಾರಿಗಳ ವಿರುದ್ಧ ಸುಳ್ಳು ಕೇಸ್ ದಾಖಲಿಸುವ ಮೂಲಕ ನ್ಯಾಯಾಧೀಶರು ತಮ್ಮ ಕುರ್ಚಿ ಹಾಗು ಘನತೆಯನ್ನು ಹರಾಜಿಗಿಟ್ಟಿದ್ದಾರೆ ಎಂದು ಅಲಹಾಬಾದ್ ಹೈಕೋರ್ಟ್ ಅಧಿಕಾರ ದುರುಪಯೋಗ ಮಾಡಿಕೊಂಡ ಮ್ಯಾಜಿಸ್ಟ್ರೇಟ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಇದೇ ವೇಳೆ ಉತ್ತರ ಪ್ರದೇಶ ವಿದ್ಯುತ್ ಇಲಾಖೆಯ ಅಧಿಕಾರಿಗಳ ವಿರುದ್ಧ ಬಂಡಾ ನ್ಯಾಯಾಲಯದ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ದಾಖಲಿಸಿದ್ದ ಸುಳ್ಳು ಕ್ರಿಮಿನಲ್ ಮೊಕದ್ದಮೆಯನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ.

ತಮ್ಮ ವಿರುದ್ದ ಸಿಜೆಎಂ ಭಗವಾನ್ ದಾಸ್ ಗುಪ್ತಾ ದಾಖಲಿಸಿರುವ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ವಿದ್ಯುತ್ ಇಲಾಖೆ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಹುಲ್ ಚತುರ್ವೇದಿ ಹಾಗು ನ್ಯಾಯಮೂರ್ತಿ ಅಜರ್ ಹುಸೇನ್ ಇದ್ರಿಸಿ ಅವರಿದ್ದ ಪೀಠ ಈ ತೀರ್ಪು ನೀಡಿದೆ. ಅಲ್ಲದೇ ಸಿಜೆಎಂ ಭಗವಾನ್ ದಾಸ್ ಗುಪ್ತಾ ಸರ್ಕಾರಿ ಅಧಿಕಾರಿಗಳ ವಿರುದ್ಧ ಮಾಡಿರುವ ವಂಚನೆ, ಮೋಸ, ಸಾಕ್ಷ್ಯ ತಿರುಚುವಿಕೆ ಹಾಗೂ ಸುಲಿಗೆ ಆರೋಪಗಳು ಕ್ಷುದ್ರ ಮತ್ತು ವ್ಯವಸ್ಥಿತ ಎಂದು ಟೀಕಿಸಿರುವ ಹೈಕೋರ್ಟ್, ಈ ತೀರ್ಪಿನ ಪ್ರತಿಯನ್ನು ಮ್ಯಾಜಿಸ್ಟ್ರೇಟ್ ಸೇವಾ ದಾಖಲೆಯಲ್ಲಿ ಇರಿಸಲು ಹೈಕೋರ್ಟ್ ರಿಜಿಸ್ಟ್ರಾರ್ ಗೆ ಸೂಚಿಸಿದೆ.

ಹೈಕೋರ್ಟ್ ತನ್ನ ತೀರ್ಪಿನಲ್ಲಿ, ನ್ಯಾಯಾಂಗ ಅಧಿಕಾರಿಗಳು ಘನತೆಯಿಂದ ನಡೆದುಕೊಳ್ಳಬೇಕು. ಆದರೆ ಈ ಪ್ರಕರಣದಲ್ಲಿ ಸಿಜೆಎಂ ತಮ್ಮ ಅಧಿಕಾರ ಮತ್ತು ಸ್ಥಾನ ಏನೆಂಬುದನ್ನು ಅರ್ಥಮಾಡಿಸಲು ಹಾಗೂ ಸರ್ಕಾರಿ ನೌಕರರಿಗೆ ಪಾಠ ಕಲಿಸಲು ಇಂತಹ ಪ್ರಕರಣ ದಾಖಲಿಸಿದ್ದಾರೆ. ಹೀಗೆ ಮಾಡುವ ಮೂಲಕ ತಮ್ಮ ಘನತೆ- ಗೌರವವನ್ನು ಹರಾಜಿಗಿಟ್ಟಿದ್ದಾರೆ ಎಂದು ಹೈಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ.

ಅಲ್ಲದೇ, ನ್ಯಾಯಾಂಗ ಅಧಿಕಾರಿಗಳು ವೈಯಕ್ತಿಕವಾಗಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಬಯಸಿದರೆ ಅಂತಹ ಸಂದರ್ಭಗಳಲ್ಲಿ ಜಿಲ್ಲಾ ನ್ಯಾಯಾಧೀಶರಿಂದ ಅನುಮತಿ ಪಡೆಯಬೇಕು. ಕೊಲೆ, ಆತ್ಮಹತ್ಯೆ, ಅತ್ಯಾಚಾರ, ವರದಕ್ಷಿಣೆ ಸಾವು, ಸುಲಿಗೆ ಅಥವಾ ಇತರ ಲೈಂಗಿಕ ಅಪರಾಧಗಳಂತಹ ಗಂಭೀರ ಸ್ವರೂಪದ ಪ್ರಕರಣಗಳನ್ನು ಹೊರತುಪಡಿಸಿ ಯಾವುದೇ ಎಫ್‌ಐಆರ್‌ ದಾಖಲಿಸುವ ಮುನ್ನ ಜಿಲ್ಲಾ ನ್ಯಾಯಾಧೀಶರ ಅನುಮತಿ ಪಡೆಯಬೇಕು ಎಂದು ಹೈಕೋರ್ಟ್ ಸೂಚಿಸಿದೆ. 

ಪ್ರಕರಣದ ಹಿನ್ನೆಲೆ: ಸಿಜೆಎಂ ಭಗವಾನ್ ದಾಸ್ ಗುಪ್ತಾ ತಾವು 2009ರಲ್ಲಿ ಖರೀದಿಸಿದ್ದ ಮನೆಯ ವಿದ್ಯುತ್ ಸಂಪರ್ಕ ಖಾತೆಯನ್ನು ತಮ್ಮ ಹೆಸರಿಗೆ ವರ್ಗಾಯಿಸುವಂತೆ ವಿದ್ಯುತ್ ಇಲಾಖೆಗೆ ಮನವಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಅಧಿಕಾರಿಗಳು ಖಾತೆಗೆ ಸಂಬಂಧಿಸಿದ 1.66 ಲಕ್ಷ ರೂಪಾಯಿ ಹಳೆಯ ಬಿಲ್ ಪಾವತಿಯಾಗಿಲ್ಲ. ಅದನ್ನು ಪಾವತಿಸಿದರೆ ಖಾತೆ ವರ್ಗಾಯಿಸಬಹುದು ಎಂದಿದ್ದರು. ಇದರಿಂದ ಆಘಾತಕ್ಕೀಡಾದ ಸಿಜೆಎಂ ಗುಪ್ತಾ ತಮಗೆ ಮನೆ ಮಾರಾಟ ಮಾಡಿದ ಈ ಹಿಂದಿನ ಮನೆ ಮಾಲೀಕ, ಅವರ ಪತ್ನಿ ಹಾಗೂ ಅಧಿಕಾರಿಗಳ ವಿರುದ್ಧ ಐಪಿಸಿ ಸೆಕ್ಷನ್‌ 420, 464, 467, 468, 504, 506 ರ ಅಡಿಯಲ್ಲಿ ದೂರು ದಾಖಲಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ಲಖನೌ ನ್ಯಾಯಾಲಯ ವಿದ್ಯುತ್ ಇಲಾಖೆ ಅಧಿಕಾರಿಗಳ ಲೋಪ ಕಂಡುಬಾರದ ಹಿನ್ನೆಲೆಯಲ್ಲಿ ಪ್ರಕರಣ ಕೈಬಿಟ್ಟಿತ್ತು. ಈ ವೇಳೆ ಅಧಿಕಾರಿಗಳು, ಸಿಜೆಎಂ ಗುಪ್ತಾ ಹಾಗು ಹಿಂದಿನ ಮಾಲೀಕರ ನಡುವಿನ ವಿವಾದಕ್ಕೂ ತಮಗೂ ಸಂಬಂಧವಿಲ್ಲ. ಹೊಸ ವಿದ್ಯುತ್‌ ಸಂಪರ್ಕ ಪಡೆಯಲು ಬಾಕಿ ಮೊತ್ತ ಪಾವತಿಸಬೇಕು ಎಂದು ತಿಳಿಸಿದ್ದರು.

ಬಳಿಕ ಸಿಜೆಎಂ ಗುಪ್ತಾ ವಿದ್ಯುತ್ ಓಂಬುಡ್ಸ್‌ಮನ್‌ ಮೊರೆ ಹೋಗಿದ್ದರು. ಆದರೆ ಇಲ್ಲಿಯೂ ಸಿಜೆಎಂ ಗುಪ್ತಾರಿಗೆ ಪರಿಹಾರ ದೊರೆಯಲಿಲ್ಲ.

ಅಂತಿಮವಾಗಿ ಸಿಜೆಎಂ ಗುಪ್ತಾ ವಿದ್ಯುತ್ ಇಲಾಖೆ ಅಧಿಕಾರಿಗಳ ವಿರುದ್ಧ 2023 ರಲ್ಲಿ ಪೊಲೀಸರಿಗೆ ದೂರು ಸಲ್ಲಿಸಿದ್ದರು. ದೂರಿನ ಮೇರೆಗೆ ಪೊಲೀಸರು ಅಧಿಕಾರಿಗಳ ವಿರುದ್ಧ ವಂಚನೆ, ಮೋಸ, ಸುಲಿಗೆ ಆರೋಪಗಳ ಅಡಿ ಎಫ್ಐಆರ್ ದಾಖಲು ಮಾಡಿದ್ದರು. ಇದನ್ನು ಪ್ರಶ್ನಿಸಿ ಸರ್ಕಾರಿ ಅಧಿಕಾರಿಗಳು ಹೈಕೋರ್ಟ್‌ ಮೊರೆ ಹೋಗಿದ್ದರು.

ಪ್ರಕರಣವನ್ನು ತನಿಖೆ ಮಾಡಿದ್ದ ವಿಶೇಷ ತನಿಖಾ ದಳದ ಅಧಿಕಾರಿಗಳು ಸಿಜೆಎಂ ಹಾಗು ಬಂಡಾ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಜತೆಯಾಗಿ ಸುಳ್ಳು ದೂರು ದಾಖಲಿಸಿರುವ ಕುರಿತು ವರದಿ ನೀಡಿದ್ದರು.

(Crl.Misc.W.P no 134060/2023)


Share It

You cannot copy content of this page