ಬೆಂಗಳೂರು: ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಮಹಿಳೆಯ ಘನತೆಗೆ ಧಕ್ಕೆಯಾಗುವಂತೆ ವಿಡಿಯೋ ಹರಿಬಿಟ್ಟವರ ಮತ್ತು ಪೆನ್ ಡ್ರೈವ್ ಹಂಚಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜೆಡಿಎಸ್ ಪಕ್ಷದ ಕಾನೂನು ಘಟಕದ ಅಧ್ಯಕ್ಷ ಎ.ಪಿ.ರಂಗನಾಥ್ ವಿಶೇಷ ತನಿಖಾ ದಳಕ್ಕೆ ದೂರು ನೀಡಿದ್ದಾರೆ.
ದೂರಿನಲ್ಲಿ, ಆರೋಪ ಕೇಳಿ ಬರುತ್ತಲೇ ಎಸ್ಐಟಿ ಕ್ಷಿಪ್ರ ಕ್ರಮಕೈಗೊಂಡಿದೆ. ಆದರೆ, ಪೆನ್ ಡ್ರೈವ್ ಹಂಚಿದವರ ಮತ್ತು ಮಹಿಳೆಯರ ಮುಖ ಬ್ಲರ್ ಮಾಡದಂತೆ ಅವರ ಘನತೆಗೆ ಕುಂದುಂಟಾಗುವಂತೆ ವಿಡಿಯೋ ಹರಿಬಿಟ್ಟವರ ವಿರುದ್ಧ ಕ್ರಮ ಕೈಗೊಂಡಿಲ್ಲ. ಅಲ್ಲದೇ ಅವರನ್ನು ಎಸ್ಐಟಿ ಈವರೆಗೂ ಓಡಾಡಿಕೊಂಡಿರಲು ಬಿಟ್ಟಿದೆ.
ವಿಡಿಯೋ ಮತ್ತು ಪೆನ್ ಡ್ರೈವ್ ಹಂಚಿದವರೆನ್ನಲಾದ ನವೀನ್ ಗೌಡ ಮತ್ತು ಇತರರ ವಿರುದ್ಧ ಹಾಸನ ಸಿಇಎಲ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ (ಕ್ರೈಮ್ ನಂ.33/2024) ದಾಖಲಿಸಲಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 171-ಜಿ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67ರ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದು ನನ್ನ ಗಮನಕ್ಕೆ ಬಂದಿದೆ. ಆದರೆ ಈವರೆಗೂ ಅವರ ವಿರುದ್ಧ ಕ್ರಮ ಜರುಗಿಸಿಲ್ಲ.
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಮಂಡ್ಯದ ಮಾಜಿ ಎಂ.ಪಿ ಎಲ್.ಆರ್ ಶಿವರಾಮೇಗೌಡ ಸೇರಿದಂತೆ ಸುದ್ದಿ ಮಾಧ್ಯಮಗಳು, ಸೋಷಿಯಲ್ ಮೀಡಿಯಾ ನಟರು ಅಂತಹ ವಿಡಿಯೋಗಳನ್ನು ಸುದ್ದಿ ಹೆಸರಿನಲ್ಲಿ ಬಿತ್ತರಿಸುತ್ತಿದ್ದಾರೆ. ಸುಪ್ರೀಂಕೋರ್ಟ್, ಆರ್ ರಾಜಗೋಪಾಲ್ ವರ್ಸಸ್ ಸ್ಟೇಟ್ ಆಫ್ ತಮಿಳುನಾಡು ಪ್ರಕರಣದಲ್ಲಿ, ಸಭ್ಯತೆಯ ಕಾರಣಕ್ಕಾಗಿ ನಾವು ಸಂವಿಧಾನದ ವಿಧಿ 19(2)ಕ್ಕೆ ಮಿತಿ ಹಾಕಿಕೊಳ್ಳಬೇಕು. ಲೈಂಗಿಕ ದೌರ್ಜನ್ಯ, ಅಪಹರಣದಂತಹ ಅಪರಾಧಗಳಿಗೆ ಬಲಿಯಾದ ಸಂತ್ರಸ್ತ ಮಹಿಳೆಯ ಘನತೆಗೆ ಧಕ್ಕೆ ತರುವಂತ ಘಟನೆಯನ್ನು ವರದಿ ಮಾಡಬಾರದು ಎಂದಿದೆ. ಅದರಂತೆ, ಅಶ್ಲೀಲ ವಿಡಿಯೋಗಳನ್ನು ಪ್ರಸಾರ ಮಾಡುವ ಎಲ್ಲ ಸುದ್ದಿ ಮಾಧ್ಯಮಗಳ ವಿರುದ್ಧ ಎಫ್ಐಆರ್ ದಾಖಲಿಸಬೇಕಿದೆ.
ವಿಡಿಯೋಗಳ ಅಸಲಿಯತ್ತು ಮತ್ತು ಸತ್ಯ ಏನು ಎಂಬುದರ ಕುರಿತು ತನಿಖೆ ನಡೆಯುತ್ತಿದೆ. ಇದರ ನಡುವೆ ಮಹಿಳೆಯರ ಮುಖ ಕಾಣುವಂತೆಯೇ ವಿಡಿಯೋಗಳನ್ನು ಶೇರ್ ಮಾಡುತ್ತಿರುವುದು ಅವರ ಖಾಸಗಿ ಬದುಕಿನ ಉಲ್ಲಂಘನೆಯಾಗಿದೆ ಮತ್ತು ಆ ಮಹಿಳೆಯರ ಗೌರವ, ಘನತೆಗೆ ತೀವ್ರ ಧಕ್ಕೆಯಾಗಿದೆ.
ಸಂತ್ರಸ್ತೆಯರ ವಿಡಿಯೋಗಳನ್ನು ಹಂಚುವುದು, ಪ್ರಸಾರ ಮಾಡುವುದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 228ಎ ಅಡಿ ಅಪರಾಧವಾಗಲಿದೆ. ಜತೆಗೆ ಸುಪ್ರೀಂಕೋರ್ಟ್, ಕೆ.ಎಸ್ ಪುಟ್ಟಸ್ವಾಮಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಹೇಳಿರುವಂತೆ ಸಂವಿಧಾನದ ವಿಧಿ 21ರ ಅಡಿ ಖಚಿತಪಡಿಸಿರುವ ಖಾಸಗಿ ಹಕ್ಕಿನ ಉಲ್ಲಂಘನೆಯೂ ಆಗುತ್ತದೆ.
ಆರೋಪಿತರ ಈ ಕೃತ್ಯಗಳು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354ಸಿ, 171ಜಿ ಹಾಗು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66ಇ, 67, 67ಎ ಅಡಿ ಅಪರಾಧವಾಗಲಿವೆ. ಇನ್ನು ಲೋಕಸಭಾ ಚುನಾವಣೆಗೆ ಕೆಲವೇ ದಿನಗಳಿರುವಾಗ ಈ ವಿಡಿಯೋಗಳು ಬಂದಿರುವುದು ಅಭ್ಯರ್ಥಿಯ ಹೆಸರು ಹಾಳು ಮಾಡುವ ಮತ್ತು ಚುನಾವಣೆಯ ಲಾಭ ಪಡೆಯುವ ಬಹುದೊಡ್ಡ ಸಂಚಿನಂತೆ ಕಾಣುತ್ತಿದೆ.
ಆದ್ದರಿಂದ ಎಸ್ಐಟಿಯು ಸರ್ಕಾರದ ಸೂಚನೆಯಂತೆ ಮಾತ್ರವೇ ತನಿಖೆ ಮಾಡದೆ, ಮಹಿಳೆಯರ ಘನತೆ ಕಾಪಾಡುವ ನಿಟ್ಟಿನಲ್ಲಿ ವಿಡಿಯೋಗಳ ಮೂಲದ ಬಗ್ಗೆ, ವಿಡಿಯೋಗಳನ್ನು ವ್ಯಾಪಕವಾಗಿ ಹಂಚಿದ ಮತ್ತು ಪ್ರಸಾರ ಮಾಡಿದ್ದರ ಹಿಂದಿನ ಸಂಚಿನ ಬಗ್ಗೆ ತನಿಖೆ ನಡೆಸಬೇಕು ಮತ್ತು ಆರೋಪಿತರನ್ನು ತಕ್ಷಣವೇ ಬಂಧಿಸಬೇಕು ಎಂದು ಎ.ಪಿ ರಂಗನಾಥ್ ದೂರಿನಲ್ಲಿ ಮನವಿ ಮಾಡಿದ್ದಾರೆ.