2018ರಲ್ಲಿ ವ್ಯಕ್ತಿಯೊಬ್ಬರ ವಿರುದ್ಧ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸಿದ್ದ ಮಹಿಳೆಗೆ ಉತ್ತರ ಪ್ರದೇಶದ ಬರೇಲಿ ನ್ಯಾಯಾಲಯ ನಾಲ್ಕೂವರಿ ವರ್ಷಕ್ಕೂ ಅಧಿಕ ಜೈಲು ಶಿಕ್ಷೆ ಹಾಗೂ 5.9 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಬರೇಲಿಯ 14ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಜ್ಞಾನೇಂದ್ರ ತ್ರಿಪಾಠಿ ಅವರು ಸುಳ್ಳು ದೂರು ನೀಡಿದ್ದ ಮಹಿಳೆಯ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ 1653 ದಿನಗಳ (4 ವರ್ಷ 6 ತಿಂಗಳು 8 ದಿನ) ಜೈಲು ಶಿಕ್ಷೆ ವಿಧಿಸಿದ್ದಾರೆ. ಈಕೆಯಿಂದ ಅತ್ಯಾಚಾರ ಆರೋಪದಡಿ ಶಿಕ್ಷೆಗೆ ಒಳಗಾಗಿದ್ದ ವ್ಯಕ್ತಿ ಕೂಡ ತನ್ನದಲ್ಲದ ತಪ್ಪಿಗೆ ಇಷ್ಟೇ ದಿನಗಳ ಕಾಲ ಜೈಲಿನಲ್ಲಿ ಕೊಳೆತಿದ್ದ. ಹೀಗಾಗಿ ನ್ಯಾಯಾಧೀಶರು ಅಷ್ಟೇ ದಿನಗಳ ಕಾಲ ಮಹಿಳೆಗೂ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಇನ್ನು ಶಿಕ್ಷೆಗೆ ಗುರಿಯಾಗಿರುವ ಮಹಿಳೆಗೆ ವಿಧಿಸಿರುವ ದಂಡದ ಮೊತ್ತ 5.9 ಲಕ್ಷ ರೂಪಾಯಿಗಳನ್ನು ಸುಳ್ಳು ಆರೋಪದಡಿ ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿಗೆ ಪರಿಹಾರವಾಗಿ ನೀಡುವಂತೆ ನ್ಯಾಯಾಲಯ ಆದೇಶಿಸಿದ್ದು, ಪರಿಹಾರ ಪಾವತಿಸದೇ ಇದ್ದರೆ ಹೆಚ್ಚುವರಿ 6 ತಿಂಗಳ ಜೈಲು ಶಿಕ್ಷೆ ಅನುಭವಿಸುವಂತೆ ತೀರ್ಪು ನೀಡಿದ್ದಾರೆ.
ನ್ಯಾಯಾಲಯ ತನ್ನ ತೀರ್ಪಿನಲ್ಲಿ, ಸರ್ಕಾರ, ಆಡಳಿತ ಮತ್ತು ನ್ಯಾಯಾಲಯಗಳು ಹಲವು ನೀತಿಗಳು-ಕಾನೂನುಗಳ ಮೂಲಕ ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡುತ್ತವೆ ಮತ್ತು ರಕ್ಷಣೆ ಒದಗಿಸುತ್ತವೆ. ಹಾಗೆಂದು ಅದನ್ನು ದರ್ಬಳಕೆ ಮಾಡಿಕೊಳ್ಳುವುದನ್ನು ಸಹಿಸಲಾಗದು. ಇಂತಹ ಮಹಿಳೆಯರಿಂದಾಗಿ ನಿಜವಾದ ಸಂತ್ರಸ್ತೆಯರಿಗೂ ತೊಂದರೆಯಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಆರೋಪಿ ಮಹಿಳೆಗೆ ಕಠಿಣ ಶಿಕ್ಷೆಯ ಅಗತ್ಯವಿದೆ ಎಂದು ಕೋರ್ಟ್ ಹೇಳಿದೆ.
ಪ್ರಕರಣದ ಹಿನ್ನೆಲೆ- 2018ರಲ್ಲಿ ಅಜಯ್ ಕುಮಾರ್ ಎಂಬಾತ ತನ್ನ ಸಹೋದ್ಯೋಗಿಯ ಸೋದರಿಯನ್ನು ಅಪಹರಿಸಿದ ಮತ್ತು ಅತ್ಯಾಚಾರ ಎಸಗಿದ ಆರೋಪಕ್ಕೆ ಸಿಲುಕಿ ನ್ಯಾಯಾಂಗ ಬಂಧಕ್ಕೆ ಒಳಗಾಗಿದ್ದ. ಆಗ ಅಪ್ರಾಪ್ತೆಯಾಗಿದ್ದ ಯುವತಿ ತನ್ನ ಮೇಲೆ ಅಜಯ್ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ಮತ್ತು ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡಿದ್ದಳು. ಹೀಗಾಗಿ ಅಜಯ್ ಜೈಲು ಸೇರಿದ್ದ.
ಪ್ರಕರಣದ ವಿಚಾರಣೆ (ಕ್ರಾಸ್ ಎಕ್ಸಾಮಿನೇಷನ್) ವೇಳೆ ಅಜಯ್ ಅತ್ಯಾಚಾರ ಎಸಗಿಲ್ಲ ಎಂಬುದು ಬೆಳಕಿಗೆ ಬಂದಿತ್ತು. ಖುದ್ದು ಯುವತಿ ತಾನು ಯಾವುದೇ ಕಿರುಕುಳಕ್ಕೆ ಒಳಗಾಗಿಲ್ಲ ಮತ್ತು ಅತ್ಯಾಚಾರ ನಡೆದಿಲ್ಲ ಎಂದು ತಿಳಿಸಿದ್ದಳು. ನಂತರ ನ್ಯಾಯಾಲಯ ಆಕೆಯ ವಿರುದ್ಧ ಐಪಿಸಿ ಸೆಕ್ಷನ್ 195ರ ಅಡಿಯಲ್ಲಿ ಪ್ರಾಸಿಕ್ಯೂಷನ್ ನಡೆಸಲು ಆದೇಶಿಸಿತ್ತು.
ವಿಚಾರಣೆ ವೇಳೆ ಸಂತ್ರಸ್ತೆ ಎಂದು ದೂರಿದ್ದ ಯುವತಿಯ ಅಪಹರಣವಾಗಲೀ, ಅತ್ಯಾಚಾರವಾಗಲೀ ನಡೆದಿಲ್ಲ ಎಂಬುದನ್ನು ಕಂಡುಕೊಂಡ ನ್ಯಾಯಾಲಯ, ಆರೋಪಿಯಾಗಿದ್ದ ವ್ಯಕ್ತಿ ಅನುಭವಿಸಿದಷ್ಟೇ ಸಮಯ ಜೈಲು ಶಿಕ್ಷೆಯನ್ನು ಸುಳ್ಳು ದೂರು ನೀಡಿದ ಮಹಿಳೆಗೂ ವಿಧಿಸಿದೆ. ಅಲ್ಲದೇ ಆರೋಪಿಯಾಗಿದ್ದ ಅಜಯ್ ನನ್ನು ಪ್ರಕರಣದಿಂದ ಬಿಡುಗಡೆಗೊಳಿಸಿ ಇದೇ ಮೇ 4 ರಂದು ಆದೇಶ ನೀಡಿದೆ.
(State of Uttar Pradesh v. Nisha)