ದೆಹಲಿ: ಹಲವು ಬಾರಿ ಮನವಿ ಮಾಡಿದ ನಂತರವೂ ಕಾನೂನು ಸೇವೆಗಳ ಸಮಿತಿಯು ದಾವೆದಾರರಿಗೆ ಸಹಾಯ ಮಾಡದಿರುವುದು ಶೋಚನೀಯ ಸಂಗತಿ ಎಂದು ದೆಹಲಿ ಹೈಕೋರ್ಟ್ DHCLSC ಕ್ರಮವನ್ನು ಕಟುವಾಗಿ ಟೀಕಿಸಿದೆ.
ಅಲ್ಲದೇ, ಉಚಿತ ಕಾನೂನು ನೆರವು ಪಡೆಯಲು ಅರ್ಹರಿರುವ ಯಾವುದೇ ದಾವೆದಾರರು ಸಹಾಯವನ್ನು ಕೋರಿದಾಗ ಕಾನೂನು ಸೇವಾ ಪ್ರಾಧಿಕಾರ/ಸಮಿತಿಯ ಅಧಿಕಾರಿಗಳು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿರುವ ದೆಹಲಿ ಹೈಕೋರ್ಟ್, ಪ್ರಸ್ತುತ ಪ್ರಕರಣದಲ್ಲಿ ಏಕೆ ನೆರವು ನೀಡಿಲ್ಲ ಎಂಬುದಕ್ಕೆ ಪ್ರಮಾಣಪತ್ರದ ಮೂಲಕ ವಿವರಣೆ ನೀಡಿ ಎಂದು ದೆಹಲಿ ಹೈಕೋರ್ಟ್ ಲೀಗಲ್ ಸರ್ವೀಸ್ ಕಮಿಟಿಗೆ ತಾಕೀತು ಮಾಡಿದೆ.
ಲೇಬರ್ ಕೋರ್ಟ್ ಆದೇಶ ಪ್ರಶ್ನಿಸಿ ಹೈಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಚಂದ್ರ ಧಾರಿ ಸಿಂಗ್ ಅವರಿದ್ದ ಏಕಸದಸ್ಯ ಪೀಠ ದೆಹಲಿ ಹೈಕೋರ್ಟ್ ಕಾನೂನು ಸೇವೆಗಳ ಸಮಿತಿಯ ಕ್ರಮವನ್ನು ಟೀಕಿಸಿದೆ.
ಹೈಕೋರ್ಟ್ ತನ್ನ ಆದೇಶದಲ್ಲಿ, ಹಣಕಾಸು ತೊಂದರೆಯಲ್ಲಿರುವ ತನ್ನ ಪರವಾಗಿ ವಕೀಲರನ್ನು ನೇಮಿಸಿಕೊಡುವಂತೆ ಪ್ರಕರಣದ ಪ್ರತಿವಾದಿ ಕೇಳಿಕೊಂಡಿದ್ದಾರೆ. ಹಲವು ಬಾರಿ ಲಿಖಿತ ಮನವಿ ಮಾಡಿದ ನಂತರವೂ ಕಾನೂನು ನೆರವು ನೀಡಲಿಲ್ಲ ಎಂದು ತಿಳಿಸಿದ್ದಾರೆ. ಹಲವು ವಿನಂತಿಗಳನ್ನು ಮಾಡಿದರೂ DHCLSC ಯಿಂದ ಅವರಿಗೆ ಕಾನೂನು ನೆರವು ನೀಡದಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಹೈಕೋರ್ಟ್ ಹೇಳಿದೆ.
ಅಲ್ಲದೇ, ಬಡ ದಾವೆದಾರರಿಗೆ ಕಾನೂನು ನೆರವು ನೀಡುವ ತನ್ನ ಪ್ರಾಥಮಿಕ ಕರ್ತವ್ಯವನ್ನು ನಿರ್ವಹಿಸುವಲ್ಲಿ ದೆಹಲಿ ಹೈಕೋರ್ಟ್ ಕಾನೂನು ಸೇವಾ ಸಮಿತಿ ವಿಫಲವಾಗಿದೆ. ಆದ್ದರಿಂದ, ಅರ್ಹ ದಾವೆದಾರರು ಕಾನೂನು ನೆರವು ಕೋರಿದರೆ ಕಾನೂನು ಸೇವಾ ಅಧಿಕಾರಿಗಳು ತಕ್ಷಣವೇ ಕಾರ್ಯ ಪ್ರವೃತ್ತರಾಗಬೇಕು ಎಂದು ಸೂಚಿಸಿದೆ.
DHCLSC ಕಾರ್ಯದರ್ಶಿ ಅವರು ದಾವೆದಾರನಿಗೆ ಕಾನೂನು ನೆರವು ಏಕೆ ನೀಡಲಾಗಿಲ್ಲ ಎಂಬುದಕ್ಕೆ 10 ದಿನಗಳ ಒಳಗೆ ವಿವರಣೆ ನೀಡಿ ಪ್ರಮಾಣ ಪತ್ರ ಸಲ್ಲಿಸುವಂತೆ ಸೂಚಿಸಿದೆ.
(Writ Petition (Civil) 10371/2022)