ಬೆಂಗಳೂರು: ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವಕೀಲರೊಬ್ಬರ ಮೇಲೆ ಇಬ್ಬರು ಕಿಡಿಗೇಡಿಗಳು ಮಾರಣಾಂತಿಕ ಹಲ್ಲೆ ನಡೆಸಿ ಚಿನ್ನದ ಸರ ಕಸಿದು ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ವಕೀಲ ಹೇಮಂತರಾಜ್ ಹಲ್ಲೆಗೆ ಒಳಗಾದವರು. ಇದೇ ಮೇ 3 ರಂದು ರಾತ್ರಿ 11.20 ಗಂಟೆ ಸಮಯದಲ್ಲಿ ತಮ್ಮ ಬನಶಂಕರಿಯ ಶ್ರೀನಿವಾಸ ನಗರದ ಮನೆಗೆ ವಾಪಸ್ಸಾಗುವ ವೇಳೆ ಇಬ್ಬರು ಅಪರಿಚಿತ ವ್ಯಕ್ತಿಗಳು ದ್ವಿಚಕ್ರ ವಾಹನದಲ್ಲಿ ಬಂದು ಅನಗತ್ಯವಾಗಿ ಗಲಾಟೆ ಮಾಡಿ, ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದರು. ನಂತರ ಮುಷ್ಟಿಯಿಂದ ಮುಖದ ಮೇಲೆ ರಕ್ತ ಚಿಮ್ಮುವ ಹಾಗೆ ಹಲ್ಲೆ ಮಾಡಿದರು, ಪೊಲೀಸರಿಗೆ ಕರೆ ಮಾಡಲು ಪ್ರಯತ್ನಿಸಿದಾಗ ಮೊಬೈಲ್ ಕಿತ್ತುಕೊಂಡು ಹೊಡೆದುಹಾಕಿದರು. ಬಳಿಕ ಸುಮಾರು ಎರಡೂವರೆ ಲಕ್ಷ ಬೆಲೆ ಬಾಳುವ 40 ಗ್ರಾಂ ಚಿನ್ನದ ಸರ ಕಸಿದು ಪರಾರಿಯಾದರು ಎಂದು ಸಂತ್ರಸ್ತ ವಕೀಲ ದೂರಿನಲ್ಲಿ ತಿಳಿಸಿದ್ದಾರೆ.
ಹಲ್ಲೆಯಿಂದಾಗಿ ವಕೀಲ ಹೇಮಂತ್ ಭಾರದ್ವಾಜ್ ಅವರ ಮುಖದ ಭಾಗಗಳಲ್ಲಿ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇನ್ನು ಘಟನೆ ಸಂಬಂಧ ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 341, 427, 504, 506, 394ರ ಅಡಿಯಲ್ಲಿ ಎಫ್ಐಆರ್ (Cr.No.112/2024) ದಾಖಲಿಸಿದ್ದಾರೆ.
ವಕೀಲರ ಮೇಲಿನ ಹಲ್ಲೆಯನ್ನು ಬೆಂಗಳೂರು ವಕೀಲರ ಸಂಘ ತೀವ್ರವಾಗಿ ಖಂಡಿಸಿದೆ. ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ಪೋಲೀಸ್ ಇಲಾಖೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿರುವ ಸಂಘದ ಪದಾಧಿಕಾರಿಗಳು, ಆರೋಪಿಗಳನ್ನು ಬಂಧಿಸಿ ಅಗತ್ಯ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.