ಬೆಂಗಳೂರು: ಪೊಲೀಸರನ್ನು ತಳ್ಳಿ ಕಸ್ಟಡಿಯಿಂದ ಪಲಾಯನ ಮಾಡಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯ ವ್ಯಕ್ತಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಹೈಕೋರ್ಟ್ ಕಾಯಂಗೊಳಿಸಿ ಆದೇಶಿಸಿದೆ.
ತನಗೆ ವಿಚಾರಣಾ ನ್ಯಾಯಾಲಯ ವಿಧಿಸಿರುವ ಶಿಕ್ಷೆಯನ್ನು ರದ್ದುಪಡಿಸಬೇಕು ಎಂದು ಕೋರಿ ಬಾಗೇಪಲ್ಲಿಯ ಸೋಮಶೇಖರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಪಿ ಸಂದೇಶ್ ಅವರಿದ್ದ ಪೀಠ ಈ ತೀರ್ಪು ನೀಡಿದೆ.
ಎರಡು ಗುಂಪಿನ ನಡುವೆ ನಡೆದಿದ್ದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ 2012ರ ಏಪ್ರಿಲ್ 7ರಂದು ಪೊಲೀಸರು ಆರೋಪಿತರಾದ ಸೋಮಶೇಖರ್ ಹಾಗೂ ವೆಂಕಟೇಶ್ ಎಂಬುವರನ್ನು ಬಂಧಿಸಿ ಠಾಣೆಗೆ ಕರೆತರುತ್ತಿದ್ದರು. ಆ ವೇಳೆ ಸೋಮಶೇಖರ್ ಎಎಸ್ಐ ಸಾದಪ್ಪ ಅವರನ್ನು ತಳ್ಳಿ ಪರಾರಿಯಾಗಿದ್ದ.
ಪಾತಪಾಳ್ಯ ಪೊಲೀಸ್ ಠಾಣೆಗೆ ಕರೆತರುವಾಗ ಜೀಪಿನಿಂದ ಇಳಿಯುತ್ತಲೇ ಸೋಮಶೇಖರ್ ಪೊಲೀಸರನ್ನು ತಳ್ಳಿ ಪರಾರಿಯಾಗಿದ್ದ. ಸೋಮಶೇಖರ್ ಹುಡುಕಿದರೂ ಸಿಗದೇ ಇದ್ದುದರಿಂದ ಆರೋಪಿ ತಮ್ಮನ್ನು ತಳ್ಳಿ ಪರಾರಿಯಾದ ಎಂದು ಎಎಸ್ಐ ಸಾದಪ್ಪ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 224ರ ಅಡಿ ದೂರು ದಾಖಲಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿಂತೆ 2014ರ ಜೂನ್ 9ರಂದು ಬಾಗೇಪಲ್ಲಿ ಜೆಎಂಎಫ್ಸಿ ಕೋರ್ಟ್ ವಿಚಾರಣೆ ಪೂರ್ಣಗೊಳಿಸಿ ಸೋಮಶೇಖರ್ ತಪ್ಪಿತಸ್ಥನೆಂದು ತೀರ್ಮಾನಿಸಿ ಆರು ತಿಂಗಳು ಜೈಲು ಶಿಕ್ಷೆ ಹಾಗೂ ಒಂದು ಸಾವಿರ ರೂಪಾಯಿ ದಂಡ ವಿಧಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸೋಮಶೇಖರ್ ಚಿಕ್ಕಬಳ್ಳಾಪುರ ಸೆಷನ್ಸ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ. 2016ರ ಡಿಸೆಂಬರ್ 31 ರಂದು ಅರ್ಜಿ ವಜಾಗೊಳಿಸಿದ್ದ ಸೆಷನ್ಸ್ ಕೋರ್ಟ್ ಶಿಕ್ಷೆ ಎತ್ತಿ ಹಿಡಿದಿತ್ತು.
ಈ ಎರಡೂ ನ್ಯಾಯಾಲಯಗಳ ಆದೇಶಗಳನ್ನು ಪ್ರಶ್ನಿಸಿ ಸೋಮಶೇಖರ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ. ವಿಚಾರಣೆ ವೇಳೆ ಆತನ ಪರ ವಕೀಲರು ಆರೋಪಿ ಪರಾರಿಯಾಗುವ ವೇಳೆ ಬೇರೆ ಯಾವುದೇ ಅಪರಾಧ ಎಸಗಿಲ್ಲ. ಪೊಲೀಸರು ಬಂಧಿಸಲು ಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಈಗಾಗಲೇ ಎರಡು ಕೇಸುಗಳನ್ನು ಎದುರಿಸಿದ್ದಾರೆ. ಆರೋಪಿ ಮುಗ್ದ, ಹೀಗಾಗಿ ಶಿಕ್ಷೆ ರದ್ದುಪಡಿಸಬೇಕು ಎಂದು ಕೋರಿದ್ದರು.
ಇದಕ್ಕೆ ಆಕ್ಷೇಪಿಸಿದ್ದ ಸರ್ಕಾರದ ಪರ ವಕೀಲರು ಐಪಿಸಿ ಸೆಕ್ಷನ್ 224ರಡಿ ಆತನ ಕೃತ್ಯ ಶಿಕ್ಷಾರ್ಹ ಅಪರಾಧವಾಗಿದ್ದು, ವಿಚಾರಣಾ ನ್ಯಾಯಲಯ ಶಿಕ್ಷೆ ವಿಧಿಸಿರುವ ಕ್ರಮ ಸರಿಯಿದೆ ಎಂದು ವಾದಿಸಿದ್ದರು. ವಾದ ಪರಿಗಣಿಸಿದ ಪೀಠ ಆರೋಪಿ ಸೋಮಶೇಖರ್ ಗೆ ವಿಧಿಸಿರುವ ಶಿಕ್ಷೆ ಸೂಕ್ತವಾಗಿದೆ, ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಮಧ್ಯಪ್ರವೇಶಿಸಲು ಯಾವುದೇ ಸಕಾರಣವಿಲ್ಲ ಎಂದು ಅಭಿಪ್ರಾಯಪಟ್ಟು ಶಿಕ್ಷೆ ಕಾಯಂಗೊಳಿಸಿದೆ.