News

ಕೈದಿಗಳ ಸಾವು: ಜೈಲು ಅಧಿಕಾರಿಗೆ ವಿಧಿಸಿದ್ದ ಶಿಕ್ಷೆ ಎತ್ತಿ ಹಿಡಿದ ಹೈಕೋರ್ಟ್

Share It

ಬೆಂಗಳೂರು: ಇಬ್ಬರು ಕೈದಿಗಳ ಸಾವಿಗೆ ಕಾರಣನಾಗಿದ್ದ ವಾರ್ಡರ್ ಗೆ ವಿಧಿಸಿದ್ದ ಶಿಕ್ಷೆಯನ್ನು ಹೈಕೋರ್ಟ್ ಎತ್ತಿಹಿಡಿದಿದೆ.

ಜೈಲು ಅಧಿಕಾರಿಗಳ ಕರ್ತವ್ಯ ಲೋಪದಿಂದಾಗಿ ಕೈದಿಗಳು ಕಾರಾಗೃಹಕ್ಕೆ ಮಾರಕಾಸ್ತ್ರಗಳನ್ನು ತಂದು ಇಬ್ಬರು ಸಹ ಕೈದಿಗಳನ್ನು ಕೊಲೆ ಮಾಡಿದ್ದರು. ಈ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ್ದ ಕಾರಾಗೃಹದ ವಾರ್ಡರ್ ಗೆ ವೇತನ ಹೆಚ್ಚಳ (ಇನ್ಕ್ರಿಮೆಂಟ್) ಕಡಿತಗೊಳಿಸಿ ಸರ್ಕಾರ ವಿಧಿಸಿದ್ದ ಶಿಕ್ಷೆಯನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

ಕೋಲಾರ ಜಿಲ್ಲಾ ಕಾರಾಗೃಹದ ಮುಖ್ಯ ವಾರ್ಡರ್ ಆಗಿರುವ ಜಿ.ಬಿ.ಮುಲ್ಕಿ ಪಾಟೀಲ್ ಕರ್ತವ್ಯ ಲೋಪದ ಅಡಿಯಲ್ಲಿ ಇಂಕ್ರಿಮೆಂಟ್ ಕಡಿತಗೊಳಿಸಿ ಆದೇಶಿಸಿದ್ದ ಸರ್ಕಾರದ ಆದೇಶ ಪ್ರಶ್ನಿಸಿ ಕೆಎಟಿ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ ಸರ್ಕಾರದ ಆದೇಶವನ್ನು ಪುರಸ್ಕರಿಸಿತ್ತು.

ಈ ಹಿನ್ನೆಲೆಯಲ್ಲಿ ಪಾಟೀಲ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ. ನರೇಂದರ್ ಹಾಗೂ ನ್ಯಾಯಮೂರ್ತಿ ವೆಂಕಟೇಶ್ ನಾಯಕ್ ಅವರಿದ್ದ ವಿಭಾಗೀಯ ಪೀಠ, ಅರ್ಜಿದಾರರ ಮನವಿಯನ್ನು ವಜಾಗೊಳಿಸಿದೆ.

ಹೈಕೋರ್ಟ್ ತನ್ನ ತೀರ್ಪಿನಲ್ಲಿ, ಕೆಎಟಿ ಎಲ್ಲಾ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಆದೇಶ ನೀಡಿದೆ. ಈ ಆದೇಶದಲ್ಲಿ ಯಾವುದೇ ಉಲ್ಲಂಘನೆಯಾಗಿರುವ ಅಂಶ ಕಾಣಿಸುತ್ತಿಲ್ಲ. ಹೀಗಾಗಿ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ ಎಂದಿದೆ.

ಪ್ರಕರಣದ ಹಿನ್ನೆಲೆ: ಅರ್ಜಿದಾರ ಪಾಟೀಲ್ ಅವರು ಬೆಂಗಳೂರು ಕೇಂದ್ರ ಕಾರಾಗೃಹದ ವಾರ್ಡರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ಜೈಲಿನಲ್ಲಿ ಕೈದಿಗಳು ಮೊಬೈಲ್ ಫೋನ್ ಬಳಸುತ್ತಿದ್ದರಲ್ಲದೇ, ಸಹಚರರ ಮೂಲಕ ಹೊರಗಿನಿಂದ ಮಾರಕಾಸ್ತ್ರಗಳನ್ನು ಪಡೆದಿದ್ದರು. ಬಳಿಕ ಪರಸ್ಪರ ದ್ವೇಷ ಹೊಂದಿದ್ದ ಇಬ್ಬರು ಸಹ ಕೈದಿಗಳನ್ನು ಕೊಲೆ ಮಾಡಿದ್ದರು.

ಈ ಸಂಬಂಧ ಇಲಾಖಾ ತನಿಖೆ ನಡೆಸಿದ್ದ ಅಧಿಕಾರಿಗಳು, ಕೈದಿಗಳು ಮೊಬೈಲ್ ಫೋನ್ ಮತ್ತು ಮಾರಕಾಸ್ತ್ರಗಳನ್ನು ಹೊಂದಲು, ಅರ್ಜಿದಾರರ ನಿರ್ಲಕ್ಷ್ಯವೇ ಕಾರಣ ಎಂದು ವರದಿ ನೀಡಿದ್ದರು. ಈ ವರದಿ ಆಧಾರದಲ್ಲಿ ಸರ್ಕಾರ ಅರ್ಜಿದಾರರಿಗೆ ಒಂದು ವರ್ಷದ ಇಂಕ್ರಿಮೆಟ್ ಕಡಿತಗೊಳಿಸಿ ಆದೇಶಿಸಿತ್ತು.


Share It

You cannot copy content of this page