ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಎಂ. ಪಿ ರೇಣುಕಾಚಾರ್ಯ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ತಮ್ಮ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಎಂ.ಪಿ ರೇಣುಕಾಚಾರ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಕೆ ನಟರಾಜನ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ.
2015 ರಲ್ಲಿ ಲೋಕಾಯುಕ್ತ ಪೊಲೀಸರು ಶಾಸಕ ಎಂ. ಪಿ ರೇಣುಕಾಚಾರ್ಯ ವಿರುದ್ಧ ಆದಾಯ ಮೀರಿದ ಆಸ್ತಿ ಗಳಿಕೆ ಆರೋಪದಡಿ ಪ್ರಕರಣ ದಾಖಲಿಸಿದ್ದರು.
ಗುರುಪಾದಯ್ಯ ಮಠದ್ ಎಂಬುವರು ರೇಣುಕಾಚಾರ್ಯ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಆರೋಪ ಮಾಡಿ ಖಾಸಗಿ ದೂರು ದಾಖಲಿಸಿದ್ದರು. ನಂತರ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ನಡೆಸಿದ್ದರು.
ಪ್ರಕರಣದ ವಿಚಾರಣೆ ವೇಳೆ ಲೋಕಾಯುಕ್ತ ಪರ ವಕೀಲರು ತನಿಖೆ ಸಂಪೂರ್ಣಗೊಂಡಿದ್ದು ಅಂತಿಮ ವರದಿ ಸಿದ್ದವಾಗಿದೆ. ಅಲ್ಲದೆ, ಸಕ್ಷಮ ಪ್ರಾಧಿಕಾರದ ಅನುಮತಿಗಾಗಿ ಕಾಯುತ್ತಿದ್ದೇವೆ ಎಂದಿದ್ದರು. ಇದೀಗ ಹೈಕೋರ್ಟ್ ರೇಣುಕಾಚಾರ್ಯ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ್ದು ಮಾಜಿ ಸಚಿವರಿಗೆ ಸಂಕಷ್ಟ ಎದುರಾಗಿದೆ.
(CRL.P 2098/2017)