News ⓇJudgements

ಜತೆಗಿರದ ವ್ಯಕ್ತಿಗಳ ವಿರುದ್ಧ DV ಕೇಸ್ ದಾಖಲಿಸಲಾಗದು: ಹೈಕೋರ್ಟ್

Share It

ಕುಟುಂಬದ ಸದಸ್ಯರಾಗಿದ್ದರೂ ಜತೆಗೆ ವಾಸ ಮಾಡದ ಸಂಬಂಧಿಕರ ವಿರುದ್ಧ ‘ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯ ರಕ್ಷಣೆ ಕಾಯ್ದೆ-2005’ ಅಡಿಯಲ್ಲಿ ರಕ್ಷಣೆ ಅಥವಾ ಆರ್ಥಿಕ ಪರಿಹಾರ ಕೋರಲು ಅವಕಾಶವಿಲ್ಲ ಎಂದು ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

ಸೊಲ್ಲಾಪುರ ವ್ಯಕ್ತಿ ಹಾಗೂ ಅವರ ಕುಟುಂಬ ಸದಸ್ಯರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕ ಸದಸ್ಯ ಪೀಠ ಈ ಆದೇಶ ಮಾಡಿದೆ.

ಪೀಠ ತನ್ನ ತೀರ್ಪಿನಲ್ಲಿ, ಕಾಯ್ದೆಯ ಸೆಕ್ಷನ್‌ 2(ಕ್ಯೂ) ಪ್ರಕಾರ ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆ, ತನ್ನ ಪತಿ ಹಾಗೂ ಆತನ ಸಂಬಂಧಿಕರ ವಿರುದ್ಧ ದೂರು ದಾಖಲಿಸಬಹುದು. ಅದೇ ರೀತಿ ಕಾಯ್ದೆಯ ಸೆಕ್ಷನ್‌ 2(ಎಫ್‌) ದಂಪತಿಯು ಅವಿಭಕ್ತ ಕುಟುಂಬ ಮಾದರಿಯಲ್ಲಿ ಕುಟುಂಬ ಸದಸ್ಯರೊಂದಿಗೆ ಒಂದೇ ಸೂರಿನಡಿ ಒಟ್ಟಿಗೆ ವಾಸ ಮಾಡುತ್ತಿದ್ದರೆ ಮಾತ್ರ ಅದು ಕೌಟುಂಬಿಕ ಸಂಬಂಧ ಎಂದು ಪರಿಗಣಿಸಬಹುದು. ಆದರೆ, ಅವಿಭಕ್ತ ಕುಟುಂಬದ ಸದಸ್ಯರಾಗಿದ್ದು, ಒಟ್ಟಿಗೆ ವಾಸ ಮಾಡದ, ಆಸ್ತಿ ಅನುಭವಿಸದ ಸಂಬಂಧಿಕರ ವಿರುದ್ಧ ಡಿವಿ ಕಾಯ್ದೆ ಅಡಿ ರಕ್ಷಣೆ ಹಾಗೂ ಆರ್ಥಿಕ ಪರಿಹಾರ ಕೇಳಲಾಗದು ಎಂದು ಆದೇಶಿಸಿದೆ.

ಹಿನ್ನೆಲೆ: ಕಲಬುರಗಿಯ ಬಸವನಗರ ಮಹಿಳೆ ತನ್ನ ಪತಿ ಹಾಗೂ ಸಂಬಂಧಿಕರ ವಿರುದ್ಧ ಡಿವಿ ಕಾಯ್ದೆ ಅಡಿ ಕಲಬುರಗಿಯ 2ನೇ ಹೆಚ್ಚುವರಿ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.

ವರದಕ್ಷಿಣೆ ತರುವಂತೆ ಒತ್ತಾಯಿಸಲು ಪತಿಗೆ ಅವರ ಸಂಬಂಧಿ ಹಾಗೂ ಅವರ ಕುಟುಂಬ ಸದಸ್ಯರು ಪ್ರಚೋದನೆ ನೀಡಿದ್ದಾರೆ. ಸಾಲದ್ದಕ್ಕೆ ತನ್ನ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡಿದ್ದಾರೆ. ಆದ್ದರಿಂದ ತನ್ನ ಮೇಲೆ ದೌರ್ಜನ್ಯ ನಡೆಸದಂತೆ, ವಾಸಕ್ಕೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವಂತೆ ಹಾಗೂ ಮಾನಸಿಕ-ದೈಹಿಕ ಕಿರುಕುಳ ನೀಡಿದ್ದಕ್ಕೆ ನಷ್ಟ ಪರಿಹಾರವಾಗಿ ಮಾಸಿಕ 10 ಸಾವಿರ ರೂಪಾಯಿ ಪಾವತಿಸಲು ಆರೋಪಿಗಳಿಗೆ ನಿರ್ದೇಶಿಸುವಂತೆ ಅರ್ಜಿಯಲ್ಲಿ ಮನವಿ ಮಾಡಿದ್ದರು.

ಅರ್ಜಿ ವಿಚಾರಣೆ ನಡೆಸಿದ್ದ ವಿಚಾರಣಾ ನ್ಯಾಯಾಲಯ 2021ರ ನವೆಂಬರ್ 21ರಂದು ಸಂಬಂಧಿಕರಿಗೆ ನೋಟಿಸ್‌ ಜಾರಿ ಮಾಡಿತ್ತು. ಈ ನೋಟಿಸ್‌ ರದ್ದು ಕೋರಿ ನಾಲ್ವರು ಸಂಬಂಧಿಕರು ಹೈಕೋರ್ಟ್‌ಗೆ ಕ್ರಿಮಿನಲ್‌ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಅರ್ಜಿದಾರರು ಸಂಬಂಧಿಕರಾಗಿದ್ದರೂ ಅವಿಭಕ್ತ ಕುಟುಂಬವಾಗಿ ಒಂದೇ ಸೂರಿನಡಿ ವಾಸ ಮಾಡುತ್ತಿಲ್ಲ. ಅವಿಭಕ್ತ ಕುಟುಂಬದ ಆಸ್ತಿ ಅನುಭವಿಸುತ್ತಿಲ್ಲ. ಆದ್ದರಿಂದ ಅವರ ವಿರುದ್ಧ ಕೌಟುಂಬಿಕ ದೌರ್ಜನ್ಯ ಕಾಯ್ದೆ ಅಡಿ ಅರ್ಜಿ ಸಲ್ಲಿಸಿ ಪರಿಹಾರ ಕೇಳುವ ಸನ್ನಿವೇಶ ಉದ್ಭವಿಸುವುದಿಲ್ಲ ಎಂದು ತಿಳಿಸಿ, ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಯನ್ನು ರದ್ದುಪಡಿಸಿದೆ.

(CRL.P 200009/2021)


Share It

You cannot copy content of this page