ಮತದಾರರ ಪಟ್ಟಿಗೆ ಹೆಸರು ಸೇರಿಸುವ ಹಾಗೂ ತೆಗೆಯುವ ವಿಚಾರದಲ್ಲಿ ತೊಂದರೆಗೆ ಒಳಗಾದವರು ಪ್ರಜಾಪ್ರತಿನಿಧಿ ಕಾಯ್ದೆ ಹಾಗೂ ಮತದಾರರ ನೋಂದಣಿ ಕಾಯ್ದೆ ಅಡಿ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿ ಪರಿಹಾರ ಪಡೆಯಬಹುದು ಎಂದು ಹೈಕೋರ್ಟ್ ಸೂಚಿಸಿದೆ.
ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಸಾವಿರಾರು ನಿವಾಸಿಗಳು ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಹೆಸರು ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಪರಿಗಣಿಸಿಲ್ಲ ಎಂದು ಆಕ್ಷೇಪಿಸಿ ವೈಟ್‌ಫೀಲ್ಡ್ ರೈಸಿಂಗ್ ಟ್ರಸ್ಟ್ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ಈ ಸೂಚನೆ ನೀಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, ಮತದಾರರ ಪಟ್ಟಿಗೆ ಹೆಸರು ಸೇರಿಸಲು ಆನ್‌ಲೈನ್‌ನಲ್ಲಿ ಸಲ್ಲಿಸಿದ್ದ ಅರ್ಜಿಗಳನ್ನು ಚುನಾವಣಾ ಆಯೋಗವು ಪರಿಗಣಿಸಿಲ್ಲ. ಆನ್‌ಲೈನ್‌ನಲ್ಲಿ ಸಲ್ಲಿಸಿದ ಅರ್ಜಿಗಳನ್ನು ನಿರ್ಧರಿಸಲು ಯಾವುದೇ ವಿಧಾನವನ್ನೂ ಅಳವಡಿಸಿಲ್ಲ. ನಿರ್ದಿಷ್ಟ ಕಾಲಮಿತಿಯಲ್ಲಿ ಅರ್ಜಿದಾರರ ಅಹವಾಲು ಆಲಿಸಿ ಅವರ ಸಮಸ್ಯೆ ಪರಿಹರಿಸಿಲ್ಲ ಎಂದರು.
ಚುನಾವಣಾ ಆಯೋಗದ ಪರ ವಕೀಲರು ವಾದಿಸಿ, ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಸ್ವಲ್ಪ ನಿಧಾನವಾಗಿತ್ತು. ಸದ್ಯ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವ, ತೆಗೆದು ಹಾಕುವ ಮತ್ತು ಅಹವಾಲನ್ನು ನಿರ್ದಿಷ್ಟ ಕಾಲಮಿತಿಯಲ್ಲಿ ಪರಿಶೀಲಿಸುವ ಸಂಬಂಧ ಅಗತ್ಯ ಸೂಚನೆಗಳನ್ನು ಹೊರಡಿಸಲಾಗಿದೆ ಎಂದರು.
ವಾದ ಆಲಿಸಿದ ಪೀಠ, ಮತದಾರರ ಪಟ್ಟಿಗೆ ಹೆಸರು ಸೇರಿಸುವ ಮತ್ತು ತೆಗೆದು ಹಾಕುವ ವಿಚಾರದಲ್ಲಿ ತೊಂದರೆಗೆ ಒಳಗಾದವರು ಪರಿಹಾರ ಕೋರಿ ಪ್ರಜಾಪ್ರತಿನಿಧಿ ಕಾಯ್ದೆ ಮತ್ತು ಮತದಾರರ ನೋಂದಣಿ ಕಾಯ್ದೆ ಅಡಿ ಕೇಂದ್ರ ಚುನಾವಣಾ ಆಯೋಗದ ಮೊರೆ ಹೋಗಬಹುದು. ಆಯೋಗವು ಜನರ ಅಹವಾಲು ಆಲಿಸಿ ಅವರ ಸಮಸ್ಯೆ ಪರಿಹರಿಸಬೇಕು. ಈ ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲು ಹಾಗೂ ತೆಗೆದು ಹಾಕುವ ವಿಚಾರದಲ್ಲಿ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅಧಿಕಾರಿಗಳು ಕಾನೂನಿನ ಅಡಿ ಮನವಿ ಪರಿಗಣಿಸದಿದ್ದರೆ ಅರ್ಜಿದಾರರು ಮತ್ತೆ ಹೈಕೋರ್ಟ್ ಮೆಟ್ಟಿಲೇರಬಹುದು ಎಂದು ಸೂಚಿಸಿ, ಅರ್ಜಿ ಇತ್ಯರ್ಥಪಡಿಸಿದೆ.