ಒಂದೇ ಘಟನೆಗೆ ಸಂಬಂಧಿಸಿದಂತೆ ಹಲವು ಎಫ್ಐಆರ್ ಗಳನ್ನು ದಾಖಲಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದಿರುವ ಹೈಕೋರ್ಟ್, ರಾಜಕೀಯ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಆಗಮನಕ್ಕಾಗಿ ಬ್ಯಾನರ್ ಕಟ್ಟಿದ್ದ ವಿಚಾರವಾಗಿ ನಡೆದಿದ್ದ ಗಲಾಟೆ ಸಂಬಂಧ ದಾಖಲಿಸಿದ್ದ 2ನೇ ಎಫ್ಐಆರ್ ನ್ನು ರದ್ದುಪಡಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ 2 ಎಫ್ಐಆರ್ ದಾಖಲಿಸಿದ್ದ ಪೊಲೀಸರ ಕ್ರಮ ಪ್ರಶ್ನಿಸಿ ಬೆಂಗಳೂರು ಗ್ರಾಮಾಂತರ ಹೊಸಕೋಟೆಯ ಬಿ.ವಿ ಬೈರೇಗೌಡ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ಮಾಡಿದೆ.
ಪೀಠ ತನ್ನ ಆದೇಶದಲ್ಲಿ, ಒಂದು ಘಟನೆಗೆ ಸಂಬಂಧಿಸಿದಂತೆ ಒಮ್ಮೆ ದೂರು ದಾಖಲಾದರೆ, ಅದೇ ಘಟನೆಯ ಬಗ್ಗೆ ದೂರುದಾರರು ಮತ್ತೊಂದು ದೂರನ್ನು ದಾಖಲಿಸಲಾಗದು ಮತ್ತು ದೂರನ್ನು ಮಾರ್ಪಡಿಸಲು ಅವಕಾಶ ನೀಡಲಾಗದು. ಜೊತೆಗೆ ಅದೇ ಘಟನೆ ಬಗ್ಗೆ ಎರಡನೇ ಎಫ್‌ಐಆರ್ ಅಥವಾ ಹಲವು ಎಫ್ಐಆರ್ ಗಳನ್ನು ದಾಖಲಿಸಲೂ ಸಹ ಕಾನೂನಿನಲ್ಲಿ ಅವಕಾಶವಿಲ್ಲ.
ಒಂದೊಮ್ಮೆ ದಾಖಲಿಸಿದರೆ ಅದು ನಿಯಮಗಳಿಗೆ ಹಾಗೂ ಸುಪ್ರಿಂಕೋರ್ಟ್ ನ ತೀರ್ಪಿಗೆ ವಿರುದ್ಧವಾಗುತ್ತದೆ. ಸಮಾನತೆಯ ಸಿದ್ಧಾಂತಕ್ಕೂ ವ್ಯತಿರಿಕ್ತವಾಗುತ್ತದೆ ಎಂದು ಪೀಠ ಅಭಿಪ್ರಾಯಪಟ್ಟು 2 ನೇ ಎಫ್ಐಆರ್ ನ್ನು ರದ್ದು ಮಾಡಿದೆ. ಅರ್ಜಿದಾರರ ಪರ ವಕೀಲ ವಿ. ಕಾರ್ತಿಕ್ ವಕಾಲತ್ತು ಹಾಕಿದ್ದರು. ಹಿರಿಯ ವಕೀಲ ಸಂದೇಶ್ ಜೆ ಚೌಟಾ ವಾದ ಮಂಡಿಸಿದ್ದರು.
ಪ್ರಕರಣದ ಹಿನ್ನೆಲೆ: ವಿಧಾನಸಭೆ ಚುನಾವಣೆ ವೇಳೆ ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ರಾಜ್ಯಕ್ಕೆ ಆಗಮಿಸಿದ್ದರು. ಅವರ ಸ್ವಾಗತಕ್ಕೆ ಪಕ್ಷದ ಕಾರ್ಯಕರ್ತರು ಅನಧಿಕೃತವಾಗಿ ಬ್ಯಾನರ್, ಬಂಟಿಂಗ್ಸ್ ಕಟ್ಟಿದ್ದಾರೆಂದು ವ್ಯಕ್ತಿಯೊಬ್ಬರು ದೂರು ನೀಡಿದ್ದರು. ದೂರಿನ ಮೇರೆಗೆ ಹೊಸಕೋಟೆ ನಗರಸಭೆ ಅಧಿಕಾರಿಗಳು ಬ್ಯಾನರ್ ತೆರವಿಗೆ ಆದೇಶಿಸಿದ್ದರು.
ಇದೇ ಕಾರಣಕ್ಕೆ ಬಿಜೆಪಿ ಕಾರ್ಯಕರ್ತರು, ದೂರು ನೀಡಿದ್ದವರನ್ನು ಅವ್ಯಾಚ್ಯ ಶಬ್ಧಗಳಿಂದ ನಿಂದಿಸಿದರು ಹಾಗೂ ಹಲ್ಲೆ ನಡೆಸಿದರು ಎಂಬ ಆರೋಪದಡಿ ಪೊಲೀಸರಿಗೆ ದೂರು ಸಲ್ಲಿಸಲಾಗಿತ್ತು.
ಈ ಸಂಬಂಧ ಸಲ್ಲಿಸಿದ್ದ ಎರಡು ಪ್ರತ್ಯೇಕ ದೂರುಗಳನ್ನು ಆಧರಿಸಿ ಪೊಲೀಸರು 2 ಎಫ್ಐಆರ್ ದಾಖಲಿಸಿದ್ದರು. ಇದನ್ನು ಪ್ರಶ್ನಿಸಿದ್ದ ಅರ್ಜಿದಾರರು, ಒಂದೇ ಘಟನೆ ಬಗ್ಗೆ ಎರಡು ಎಫ್‌ಐಆರ್ ದಾಖಲಿಸಲು ಕಾನೂನಿನಲ್ಲಿ ಅವಕಾಶವಿಲ್ಲವೆಂದು ಹೈಕೋರ್ಟ್ ಮೆಟ್ಟಿಲೇರಿದ್ದರು.
(CRLP 3171/2018)