ಅನುಕಂಪದ ಆಧಾರದಲ್ಲಿ ಉದ್ಯೋಗಕ್ಕಾಗಿ ಸಲ್ಲಿಸಿದ ಅರ್ಜಿಗಳನ್ನು ಮೂರು ತಿಂಗಳಲ್ಲಿ ಪರಿಗಣಿಸದೆ ಹೋದರೆ ಸಕ್ಷಮ ಪ್ರಾಧಿಕಾರವು ಅರ್ಜಿದಾರರಿಗೆ ಪರಿಹಾರ ರೂಪದಲ್ಲಿ ವೇತನ ಪಾವತಿಸುವ ಹೊಣೆ ಹೊರಬೇಕಾಗುತ್ತದೆ ಎಂದು ಹೈಕೋರ್ಟ್ ಆದೇಶಿಸಿದೆ.
ಈ ಮೂಲಕ ಅನುಕಂಪದ ಆಧಾರದಲ್ಲಿ ಉದ್ಯೋಗ ಕೋರಿ ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸಲು ಸರ್ಕಾರದ ಪ್ರಾಧಿಕಾರಗಳು ಅನಗತ್ಯ ವಿಳಂಬ ಮಾಡುವ ಧೋರಣೆಗೆ ಹೈಕೋರ್ಟ್ ಕಡಿವಾಣ ಹಾಕಿದೆ. ಮೈಸೂರಿನ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಈ ಆದೇಶ ಮಾಡಿದೆ.
ಅನುಕಂಪದ ಉದ್ಯೋಗಕ್ಕೆ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸುವಲ್ಲಿ ಸರ್ಕಾರಿ ಪ್ರಾಧಿಕಾರಗಳು ವಿಳಂಬ ಮಾಡಿರುವುದನ್ನು ಪ್ರಶ್ನಿಸಿರುವ ಹಲವು ಪ್ರಕರಣಗಳು ಹೈಕೋರ್ಟ್‌ನಲ್ಲಿವೆ. ತಿಂಗಳು ಅಥವಾ ವರ್ಷಗಟ್ಟಲೆ ಅರ್ಜಿಗಳನ್ನು ಪರಿಗಣಿಸದೆ ಬಾಕಿ ಉಳಿಸಿಕೊಂಡರೆ ಅನುಕುಂಪ ಉದ್ಯೋಗ ಒದಗಿಸಲು ರಾಜ್ಯ ಸರ್ಕಾರ ರೂಪಿಸಿರುವ ಕರ್ನಾಟಕ ನಾಗರಿಕ ಸೇವೆಗಳ (ಅನುಕುಂಪದ ಉದ್ಯೋಗ) ನಿಯಮಗಳು-1996 ಖಂಡಿತವಾಗಿ ಸೋಲುತ್ತವೆ. ಮತ್ತೊಂದೆಡೆ ದುಡಿಯುವ ವ್ಯಕ್ತಿಯನ್ನು ಕಳೆದುಕೊಂಡ ಕುಟುಂಬ ಸಹ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಅಲ್ಲದೆ, ಅನುಕಂಪದ ಉದ್ಯೋಗಕ್ಕಾಗಿ ಸಲ್ಲಿಸಿದ ಅರ್ಜಿಗಳನ್ನು ಮೂರು ತಿಂಗಳಲ್ಲಿ ಪರಿಗಣಿಸಿ ವಿಲೇವಾರಿ ಮಾಡಬೇಕು. ಒಂದೊಮ್ಮೆ ಅರ್ಜಿದಾರ ಅನುಕಂಪದ ಉದ್ಯೋಗ ಪಡೆದಾಗ ಆತನ ಅರ್ಜಿ ಪರಿಗಣಿಸಲು ಮಾಡಿದ ವಿನಾಕಾರಣ ವಿಳಂಬಕ್ಕೆ ವೇತನ ಪಾವತಿಸಲು ಸಕ್ಷಮ ಪ್ರಾಧಿಕಾರ ಹೊಣೆಯಾಗಿರುತ್ತದೆ ಎಂದು ಹೈಕೋರ್ಟ್ ಆದೇಶಿಸಿದೆ.
ಇದೇ ವೇಳೆ ಅರ್ಜಿದಾರನ ಮನವಿಯನ್ನು 8 ವಾರದಲ್ಲಿ ಪರಿಗಣಿಸಿ ಕಾನೂನು ಪ್ರಕಾರ ಸೂಕ್ತ ಆದೇಶ ಹೊರಡಿಸಬೇಕು. ತಪ್ಪಿದರೆ ಸಕ್ಷಮ ಪ್ರಾಧಿಕಾರವು ಗ್ರೂಪ್-ಸಿ ಉದ್ಯೋಗಕ್ಕೆ ನೀಡುವ ವೇತನವನ್ನು ಅರ್ಜಿದಾರನಿಗೆ ಪಾವತಿಸಬೇಕಾಗುತ್ತದೆ ಎಂದು ಆದೇಶಿಸಿದೆ.
(WP 9564/2021)