ಕರ್ನಾಟಕ ಎಸ್ಸಿ-ಎಸ್ಟಿ (ಕೆಲ ಜಮೀನುಗಳ ವರ್ಗಾವಣೆ ನಿಷೇಧ) ಕಾಯ್ದೆ-1978 ಪ್ರಕಾರ ಸರ್ಕಾರದಿಂದ ಮಂಜೂರಾದ ಜಮೀನಿನ ವರ್ಗಾವಣೆ, ಮಾರಾಟ ಮತ್ತು ಸ್ವಾಧೀನಕ್ಕೆ ಮೂಲ ಮಂಜೂರುದಾರ ಅಥವಾ ಅವರ ಕಾನೂನಾತ್ಮಕ ವಾರಸುದಾರರು ಸಲ್ಲಿಸಿದ ಅರ್ಜಿಯನ್ನು ಮಾತ್ರವೇ ಪರಿಗಣಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
82 ವರ್ಷಗಳ ಹಿಂದೆ ಬೆಂಗಳೂರು ದಕ್ಷಿಣ ತಾಲೂಕಿನಲ್ಲಿ ನಡೆದಿದ್ದ ಭೂ ಮಂಜೂರಾತಿ ಪ್ರಕರಣವೊಂದರ ವಿಚಾರಣೆ ನಡೆಸಿದ ಹೈಕೋರ್ಟ್ ಏಕ ಸದಸ್ಯ ಪೀಠ ಈ ಆದೇಶ ನೀಡಿದೆ.
ಪೀಠ ತನ್ನ ತೀರ್ಪಿನಲ್ಲಿ, ಕರ್ನಾಟಕ ಎಸ್ಸಿ-ಎಸ್ಟಿ (ಪಿಟಿಸಿಎಲ್) ಕಾಯ್ದೆ-1978ರ ಸೆಕ್ಷನ್ 4(2)ರ ಪ್ರಕಾರ, ಸರ್ಕಾರದಿಂದ ಮಂಜೂರಾದ ಭೂಮಿಯನ್ನು ರಾಜ್ಯ ಸರ್ಕಾರದ ಪೂರ್ವಾನುಮತಿ ಇಲ್ಲದೆ ವರ್ಗಾವಣೆ, ಮಾರಾಟ ಮತ್ತು ಸ್ವಾಧೀನ ಮಾಡುವಂತಿಲ್ಲ. ಒಂದೊಮ್ಮೆ ವರ್ಗಾವಣೆ, ಮಾರಾಟ ಮತ್ತು ಸ್ವಾಧೀನಕ್ಕೆ ಅನುಮತಿ ಕೋರಿ ಕಾಯ್ದೆಯ ಸೆಕ್ಷನ್ 4(2)ರ ಅಡಿಯಲ್ಲಿ ಅರ್ಜಿ ಸಲ್ಲಿಕೆಯಾದರೆ ಮೊದಲಿಗೆ ಮೂಲ ಮಂಜೂರುದಾರರು ಅಥವಾ ಅವರ ಕಾನೂನಾತ್ಮಕ ವಾರಸುದಾರರು ಸಲ್ಲಿಸಿರುವ ಅರ್ಜಿಯೇ ಎಂಬುದನ್ನು ಪರಿಶೀಲಿಸಬೇಕು.
ಅರ್ಜಿ ಸಲ್ಲಿಸಿದವರನ್ನು ಕರೆದು ವಾಸ್ತವಾಂಶ ಪರಿಶೀಲಿಸಬೇಕು. ಅರ್ಜಿ ಸಲ್ಲಿಸಿದ ವೇಳೆ ಸಂಬಂಧಪಟ್ಟ ಅಧಿಕಾರಿ ಮೂಲ ಮಂಜೂರುದಾರ ಅಥವಾ ಆತನ ಕಾನೂನಾತ್ಮಕ ವಾರಸುದಾರರನ್ನು ಖುದ್ದಾಗಿ ಹಾಜರಾಗಲು ತಿಳಿಸಿ, ಆತನ ಕ್ಲೇಮಿನ ವಾಸ್ತವತೆ ಹಾಗೂ ನಿಖರತೆಯ ಕುರಿತು ಪರೀಕ್ಷೆ ನಡೆಸಬೇಕು.
ಈ ಬಗ್ಗೆ ಖಚಿತವಾದ ನಂತರ ಪೂರ್ವಾನುಮತಿ ಮಂಜೂರು ಮಾಡಿದರೆ, ಹಣ ಪಾವತಿ ಚೆಕ್ ಅಥವಾ ಡಿಮ್ಯಾಂಡ್ ಡ್ರಾಫ್ಟ್ ಮೂಲಕವೇ ಮಾಡಬೇಕು ಎಂದು ಷರತ್ತು ವಿಧಿಸಬೇಕು. ಇದು ಹಣಕಾಸು ವ್ಯವಹಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಸಹಕಾರಿಯಾಗುತ್ತದೆ. ಈ ಸಂಬಂಧ ರಾಜ್ಯ ಸರ್ಕಾರವು ಅಗತ್ಯ ಆದೇಶ ಅಥವಾ ಸುತ್ತೋಲೆ ಹೊರಡಿಸಿಬೇಕು ಎಂದು ಪೀಠ ಆದೇಶಿಸಿದೆ.
(WP 52945/2018)