News ⓇJudgements

ಪತ್ನಿ ವಿರುದ್ಧ ಸುಳ್ಳು ಕೇಸ್: ಪತಿಗೆ ದಂಡ ವಿಧಿಸಿದ ಹೈಕೋರ್ಟ್

Share It

ಬೆಂಗಳೂರು: ಮಗಳನ್ನು ಪತ್ನಿ ಬಂಧಿಸಿಟ್ಟಿದ್ದಾಳೆ ಹಾಗೂ ಮಗುವಿನ ಜೀವಕ್ಕೆ ಅಪಾಯವಿದೆ ಎಂದು ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದ ವ್ಯಕ್ತಿಗೆ ಹೈಕೋರ್ಟ್ 50 ಸಾವಿರ ರೂಪಾಯಿ ದಂಡ ವಿಧಿಸಿದೆ.

ಬೆಂಗಳೂರಿನ ಕಾಡುಬೀಸನಹಳ್ಳಿ ವ್ಯಕ್ತಿ ತನ್ನ ಪತ್ನಿ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ಅರ್ಜಿದಾರರು ನಿಷ್ಪ್ರಯೋಜಕ ಹಾಗೂ ದುರುದ್ದೇಶಪೂರ್ವಕ ಅರ್ಜಿ ಸಲ್ಲಿಸುವ ಮೂಲಕ ನ್ಯಾಯಾಂಗ ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟು ದಂಡ ವಿಧಿಸಿ, ಅರ್ಜಿ ವಜಾಗೊಳಿಸಿದೆ.

ಪೀಠ ತನ್ನ ತೀರ್ಪಿನಲ್ಲಿ, ಮಗು ತಾಯಿಯ ಆರೈಕೆಯಲ್ಲಿ ಸುರಕ್ಷಿತವಾಗಿದೆ. ಮಗು ನೋಡಬೇಕಿದ್ದಲ್ಲಿ ಅರ್ಜಿದಾರರು ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಬೇಕಿತ್ತು. ಅದು ಬಿಟ್ಟು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿ ಹೈಕೋರ್ಟ್ ನ ಅಮೂಲ್ಯ ಸಮಯ ಹಾಳು ಮಾಡಿದ್ದಾರೆ. ಹೇಬಿಯಸ್ ಕಾರ್ಪಸ್ ನಂತಹ ಅರ್ಜಿಗಳನ್ನು ಯಾವುದೇ ವ್ಯಕ್ತಿ ಅಕ್ರಮ ಬಂಧನದಲ್ಲಿದ್ದಾಗ ಮಾತ್ರ ಬಿಡುಗಡೆ ಕೋರಿ ಸಲ್ಲಿಸಬೇಕು.

ಆದರೆ, ಈ ಪ್ರಕರಣದಲ್ಲಿ ಮಗು ತಾಯಿಯ ಬಳಿ ಇದೆ ಎಂಬುದನ್ನು ತಿಳಿದೂ ಅರ್ಜಿ ಸಲ್ಲಿಸಿದ್ದಾರೆ. ತಾಯಿ ಮತ್ತು ಮಗುವನ್ನು ಪತ್ತೆ ಹಚ್ಚಿ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಪೊಲೀಸರು ವೃಥಾ ಶ್ರಮಿಸಬೇಕಾಗಿದೆ ಎಂದು ಹೈಕೋರ್ಟ್ ಅರ್ಜಿದಾರನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ.

ಅಲ್ಲದೇ, ಇಂತಹ ದುರುದ್ದೇಶಪೂರಿತ ಅರ್ಜಿಗಳನ್ನು ದಾಖಲಿಸುವ ಪ್ರವೃತ್ತಿಯನ್ನು ಹತ್ತಿಕ್ಕಬೇಕಿದೆ ಎಂದು ಅಭಿಪ್ರಾಯಪಟ್ಟಿದೆ. ಹಾಗೆಯೇ, ದಂಡದ ಮೊತ್ತ 50 ಸಾವಿರ ರೂಗಳನ್ನು ಪೊಲೀಸ್ ಕಲ್ಯಾಣ ನಿಧಿಗೆ ಪಾವತಿಸಬೇಕು. ದಂಡ ಪಾವತಿಸಲು ವಿಫಲವಾದರೆ ಜಿಲ್ಲಾಧಿಕಾರಿ ಆಸ್ತಿ ಜಪ್ತಿಗೆ ಕ್ರಮ ಕೈಗೊಳ್ಳಬಹುದು ಎಂದು ಹೈಕೋರ್ಟ್ ತೀರ್ಪಿನಲ್ಲಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ: ದಂಪತಿ ನಡುವೆ ಮನಸ್ತಾಪ ಉಂಟಾಗಿದ್ದರಿಂದ ಪತ್ನಿ ಮಗಳೊಂದಿಗೆ ಪ್ರತ್ಯೇಕವಾಗಿ ವಾಸವಿದ್ದರು. ಮಗಳಿಗೆ ಅನಾರೋಗ್ಯ ಇದ್ದುದರಿಂದ ತಾಯಿಯೇ ಚಿಕಿತ್ಸೆ ಕೊಡಿಸುತ್ತಿದ್ದರು. ಆದರೆ, ಮಗಳನ್ನು ನೋಡಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಪತಿ ಸುಳ್ಳು ಆರೋಪಗಳನ್ನು ಮಾಡಿ ಹೈಕೋರ್ಟ್ ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ, ಪತ್ನಿ ತನ್ನ 2 ವರ್ಷದ ಮಗಳನ್ನು ಬಂಧಿಸಿಟ್ಟಿದ್ದಾಳೆ. ಮಗು ಜೀವಕ್ಕೆ ಅಪಾಯವಿದೆ. ಮಗು ಜೀವಂತ ಇದೆಯೋ, ಇಲ್ಲವೋ ಎಂಬುದೂ ತಿಳಿಯುತ್ತಿಲ್ಲ. ಆದ್ದರಿಂದ, ಮಗಳ ರಕ್ಷಣೆಗೆ ಹೈಕೋರ್ಟ್ ಸೂಕ್ತ ಆದೇಶ ಹೊರಡಿಸಬೇಕು ಎಂದು ಕೋರಿದ್ದರು.

ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಹಾಜರಾದ ಪತ್ನಿ, ಅನಾರೋಗ್ಯಕ್ಕೆ ಒಳಗಾಗಿರುವ ಮಗಳಿಗೆ ದೆಹಲಿ ಸಮೀಪದ ಕತೌಳಿ ಎಂಬಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸದ್ಯ ಆಕೆ ಚೇತರಿಸಿಕೊಂಡಿದ್ದು, ತಮ್ಮದೇ ಆರೈಕೆಯಲ್ಲಿ ಸದೃಢಗೊಳ್ಳುತ್ತಿದ್ದಾಳೆ. ಈ ವಿಚಾರ ತಿಳಿದೂ ಪತಿ ನ್ಯಾಯಾಲಯಕ್ಕೆ ದುರುದ್ದೇಶದಿಂದ ಅರ್ಜಿ ಸಲ್ಲಿಸಿದ್ದಾರೆ ಎಂದು ವಿವರಿಸಿದ್ದರು. ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದಾಗ ಪತಿ ದುರುದುದ್ದೇಶದಿಂದ ಅರ್ಜಿ ಸಲ್ಲಿಸಿದ್ದು ಬೆಳಕಿಗೆ ಬಂದಿತ್ತು.
(WPHC 109/2021)


Share It

You cannot copy content of this page