News ⓇJudgements

10 ವರ್ಷ ಸೇವೆ ಸಲ್ಲಿಸಿದ ಸಿಬ್ಬಂದಿ ಕಾಯಂಗೊಳಿಸಲು ಹೈಕೋರ್ಟ್ ಸೂಚನೆ

Share It

ಹತ್ತು ವರ್ಷಕ್ಕಿಂತ ಹೆಚ್ಚು ಸಮಯ ಸೇವೆ ಸಲ್ಲಿಸಿರುವ ಸಿಬ್ಬಂದಿಯನ್ನು ಕಾಯಂಗೊಳಿಸುವ ನಿಟ್ಟಿನಲ್ಲಿ ಅವರು ಸಲ್ಲಿಸಿರುವ ಮನವಿ ಪರಿಗಣಿಸುವಂತೆ ಹೈಕೋರ್ಟ್ ವಿಭಾಗೀಯ ಪೀಠ ಕರ್ನಾಟಕ ಪಶು ವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಸೂಚಿಸಿದೆ.

ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಕರ್ನಾಟಕ ಪಶು ವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿವಿ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿರುವ ಹೈಕೋರ್ಟ್ ವಿಭಾಗೀಯ ಪೀಠ ಈ ಮಹತ್ವದ ತೀರ್ಪು ನೀಡಿದೆ.

ಪೀಠ ತನ್ನ ತೀರ್ಪಿನಲ್ಲಿ, ವಿವಿ ತನ್ನ ಕೆಲಸ ಕಾರ್ಯಗಳ ಸುಗಮ ನಿರ್ವಹಣೆಗಾಗಿ ಎಸ್.ಜಿ ನಾಗೇಂದ್ರ ಸೇರಿದಂತೆ 13 ಮಂದಿಯನ್ನು ತಾತ್ಕಾಲಿಕ ಆಧಾರದ ಮೇಲೆ ನೇಮಿಸಿಕೊಂಡಿದ್ದು, ಈ ಸಿಬ್ಬಂದಿಯನ್ನು 10 ವರ್ಷಕ್ಕೂ ಹೆಚ್ಚು ಕಾಲ ದುಡಿಸಿಕೊಂಡಿದೆ. ಇದೀಗ ಅವರ ಸೇವೆ ಕಾಯಂಗೊಳಿಸಲು ನಿರಾಕರಿಸಿರುವ ಕ್ರಮ ಸಮರ್ಥನೀಯವಲ್ಲ. ಆದ್ದರಿಂದ, ತಾತ್ಕಾಲಿಕ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ 13 ಮಂದಿ ಸಿಬ್ಬಂದಿಯನ್ನು ಉಮಾದೇವಿ ಪ್ರಕರಣದಲ್ಲಿ ಹೈಕೋರ್ಟ್ ಸಾಂವಿಧಾನಿಕ ಪೀಠ ನೀಡಿರುವ ತೀರ್ಪಿನ ಅನ್ವಯ ಪರಿಗಣಿಸಬೇಕು ಎಂದು ನಿರ್ದೇಶಿಸಿದೆ.

ಹಿನ್ನೆಲೆ: 2004-2009ರ ನಡುವೆ ಎಸ್.ಜಿ ನಾಗೇಂದ್ರ, ಎಸ್.ಆರ್ ಧನಂಜಯ ಹಾಗೂ ಕೆ.ಕೆ ವಿಮಲಾ ಸೇರಿದಂತೆ ಒಟ್ಟು 13 ಮಂದಿಯನ್ನು ವಿವಿ ಸಹಾಯಕ, ಪ್ರಯೋಗಾಲಯ ಸಹಾಯಕ ಹಾಗೂ ಇನ್ನಿತರ ಹುದ್ದೆಗಳಿಗೆ ತಾತ್ಕಾಲಿಕ ಆಧಾರದ ಮೇಲೆ ನೇಮಕಗೊಂಡಿತ್ತು. 2015ರ ಜುಲೈ 7ರಂದು ಇವರು ಕಾರ್ಯ ನಿರ್ವಹಿಸುತ್ತಿರುವ ಹುದ್ದೆಗಳ ಕಾಯಂ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಿತ್ತು.

ಈ ಅಧಿಸೂಚನೆ ಪ್ರಶ್ನಿಸಿ 13 ಸಿಬ್ಬಂದಿಯೂ ಹೈಕೋರ್ಟ್‌ ಮೆಟ್ಟಿಲೇರಿದ್ದರು. 2019ರಲ್ಲಿ ಇವರ ಅರ್ಜಿ ಇತ್ಯರ್ಥಪಡಿಸಿದ್ದ ಏಕ ಸದಸ್ಯ ಪೀಠ, ಅರ್ಜಿದಾರರು ತಮ್ಮ ಸೇವೆ ಕಾಯಂಗೊಳಿಸಲು ಕೋರಿ ವಿವಿಗೆ ಹೊಸದಾಗಿ ಮನವಿ ಪತ್ರ ಸಲ್ಲಿಸಬಹುದು ಎಂದು ಸೂಚಿಸಿತ್ತು. ಅದರಂತೆ 2019ರ ಜೂನ್ 26ರಂದು ಸಿಬ್ಬಂದಿ ಸಲ್ಲಿಸಿದ ಮನವಿಯನ್ನು ತಿರಸ್ಕರಿಸಿದ್ದ ವಿವಿ, ಸೇವೆ ಕಾಯಂಗೊಳಿಸಲು ಸಾಧ್ಯವಿಲ್ಲ ಎಂದು ಹಿಂಬರಹ ನೀಡಿತ್ತು.

ವಿವಿಯ ನಿರ್ಣಯ ಪ್ರಶ್ನಿಸಿ ಸಿಬ್ಬಂದಿ ಮತ್ತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಏಕ ಸದಸ್ಯ ಪೀಠ ಸಿಬ್ಬಂದಿಯ ಕೋರಿಕೆ ಪುರಸ್ಕರಿಸಿ ವಿವಿಯ ಹಿಂಬರಹವನ್ನು ರದ್ದುಪಡಿಸಿತ್ತು. ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ವಿವಿ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಇದೀಗ ಮೇಲ್ಮನವಿ ವಜಾಗೊಳಿಸಿರುವ ವಿಭಾಗೀಯ ಪೀಠ, ವಿವಿಯ ಹಿಂಬರಹವನ್ನು ರದ್ದುಪಡಿಸಿದೆಯಲ್ಲದೇ, ನೌಕರರ ಮನವಿ ಪರಿಗಣಿಸುವಂತೆ ಆದೇಶಿಸಿದೆ.
(WA 1185/2021)


Share It

You cannot copy content of this page