ಅನುಕಂಪದ ಆಧಾರದಲ್ಲಿ ನೌಕರಿ ಕೋರಿ ಸಲ್ಲಿಸುವ ಅರ್ಜಿಗಳನ್ನು ತ್ವರಿತವಾಗಿ ಪರಿಗಣಿಸಬೇಕು, ಇಲ್ಲವಾದಲ್ಲಿ ಅನುಕಂಪದ ಆಧಾರದಲ್ಲಿ ನೇಮಕಾತಿ ನೀಡುವುದರ ಹಿಂದಿನ ಧ್ಯೇಯೋದ್ದೇಶವೇ ಹಾಳಾಗುತ್ತದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ಅನುಕಂಪದ ನೌಕರಿ ಕೋರಿ ಅರ್ಜಿ ಸಲ್ಲಿಸಿರುವವರಿಗೆ ಕೆಲಸ ನೀಡುವಂತೆ ಕಲ್ಕತ್ತಾ ಹೈಕೋರ್ಟ್ ವಿಭಾಗೀಯ ಪೀಠ ನೀಡಿದ್ದ ತೀರ್ಪು ಪ್ರಶ್ನಿಸಿ ಪಶ್ಚಿಮ ಬಂಗಾಳ ರಾಜ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಕೃಷ್ಣ ಮುರಾರಿ ಹಾಗೂ ನ್ಯಾ. ಬಿ.ವಿ ನಾಗರತ್ನ ಅವರಿದ್ದ ಪೀಠ ಈ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ಪೀಠ ತನ್ನ ತೀರ್ಪಿನಲ್ಲಿ, ಅನುಕಂಪದ ನೌಕರಿ ಕೋರಿ ಸಲ್ಲಿಸಿರುವ ಅರ್ಜಿಗಳನ್ನು ಪರಿಗಣಿಸಲು ಸರ್ಕಾರ ಹಾಗೂ ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸಿದ್ದಾರೆ. ಇಂತಹ ವಿಳಂಬ ಅನುಕಂಪ ಆಧಾರಿತ ನೇಮಕಾತಿ ಯೋಜನೆಯ ಧ್ಯೇಯೋದ್ದೇಶವನ್ನು ವಿಫಲಗೊಳಿಸುತ್ತದೆ. ಅನುಕಂಪದ ಆಧಾರದಲ್ಲಿ ನೇಮಕಾತಿ ಕೋರಿ ಅರ್ಜಿಗಳನ್ನು ಸಲ್ಲಿಸಿದಾಗ ಮತ್ತು ಅವುಗಳನ್ನು ನಿರ್ಧರಿಸುವಾಗ ಸ್ವಯಂಪ್ರೇರಿತವಾಗಿ ಮತ್ತು ತ್ವರಿತ ಮನೋಭಾವದಿಂದ ವರ್ತಿಸಬೇಕು ಎಂದು ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಬುದ್ದಿ ಹೇಳಿದೆ.
ಪ್ರಕರಣದ ಹಿನ್ನೆಲೆ: ಪಶ್ಚಿಮ ಬಂಗಾಳ ರಾಜ್ಯದ ಕೆಲವು ಪುರಸಭೆಗಳಲ್ಲಿ ಕೆಲಸ ಮಾಡುತ್ತಿದ್ದ ನೌಕರರು ಮೃತಪಟ್ಟಿದ್ದು, ಅವರ ಕುಟುಂಬ ಸದಸ್ಯರು ಅನುಕಂಪದ ನೌಕರಿ ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿಗಳನ್ನು ಪುರಸಭೆಗಳು ಪರಿಗಣಿಸಿದ್ದವಾದರೂ ಅವುಗಳನ್ನು ಸರ್ಕಾರ ತಿರಸ್ಕರಿಸಿತ್ತು.
ಪಶ್ಚಿಮ ಬಂಗಾಳ ರಾಜ್ಯ ಸರ್ಕಾರದ ಈ ಕ್ರಮ ಪ್ರಶ್ನಿಸಿ ದೇಬಬ್ರತ ತಿವಾರಿ ಮತ್ತಿತತರು ಪಶ್ಚಿಮ ಬಂಗಾಳ ಹೈಕೋರ್ಟ್ ಮೆಟ್ಟಿಲೇರಿದ್ದರು. ಇವರ ಮನವಿಯನ್ನು ಪರಿಗಣಿಸುವಂತೆ ಹೈಕೋರ್ಟ್ ಆದೇಶಿಸಿತ್ತು. ಹೈಕೋರ್ಟ್ ನ ಈ ತೀರ್ಪು ಪ್ರಶ್ನಿಸಿ ಪಶ್ಚಿಮ ಬಂಗಾಳ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
CIVIL APPEAL NOS. 8842-8855 OF 2022