ಬೆಂಗಳೂರು: ಚನ್ನಗಿರಿಯ ಶಾಸಕ ವಿರೂಪಾಕ್ಷಪ್ಪ ಮಾಡಾಳ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಒಂದೇ ದಿನದಲ್ಲಿ ಹೈಕೋರ್ಟ್ ಮುಂದೆ ವಿಚಾರಣೆಗೆ ನಿಗದಿ ಮಾಡಿದ ಕ್ರಮಕ್ಕೆ ಬೆಂಗಳೂರು ವಕೀಲರ ಸಂಘ ತೀವ್ರ ಕಳವಳ ವ್ಯಕ್ತಪಡಿಸಿದೆ.
ಈ ಕುರಿತಂತೆ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ವಿವೇಕ್ ಸುಬ್ಬಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಟಿ.ಜಿ ರವಿ, ಖಜಾಂಚಿ ಹರೀಶ ಎಂ.ಟಿ ಇಂದು ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ, ಕರ್ನಾಟಕದ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಾಡಾಳ್ ವಿರೂಪಾಕ್ಷಪ್ಪ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಒಂದೇ ದಿನದಲ್ಲಿ ಕೋರ್ಟ್ ಮುಂದೆ ಪೋಸ್ಟ್ ಮಾಡಲಾಗಿದೆ. ನಿರೀಕ್ಷಣಾ ಜಾಮೀನಿನಂತಹ ಹೊಸ ಅರ್ಜಿಗಳನ್ನು ಕೋರ್ಟ್ ಮುಂದೆ ಪೋಸ್ಟ್ ಮಾಡಲು ಹಲವು ದಿನಗಳು ಅಥವಾ ವಾರಗಳೇ ತೆಗೆದುಕೊಳ್ಳುತ್ತದೆ. ಇದು ಕರ್ನಾಟಕದ ಹೈಕೋರ್ಟ್‌ನಲ್ಲಿ ಸಾಮಾನ್ಯ ಅಭ್ಯಾಸವಾಗಿದೆ. ಆದರೆ, ವಿಐಪಿ ವಿಷಯಗಳನ್ನು ರಾತ್ರೋರಾತ್ರಿ ಪರಿಗಣನೆ ಮಾಡಲಾಗುತ್ತದೆ. ಇಂತಹ ಪದ್ಧತಿಯಿಂದ ಸಾಮಾನ್ಯ ಜನರು ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಕಳೆದುಕೊಳ್ಳುತ್ತಾರೆ ಎಂದು ಎಎಬಿ ಆತಂಕ ವ್ಯಕ್ತಪಡಿಸಿದೆ.
ಅಲ್ಲದೇ, ಶಾಸಕರನ್ನೂ ಸಾಮಾನ್ಯ ವ್ಯಕ್ತಿಯಾಗಿ ಪರಿಗಣಿಸುವುದು ಅತ್ಯಂತ ಮಹತ್ವದ್ದಾಗಿದೆ. ಇಲ್ಲದಿದ್ದಲ್ಲಿ ಸಾಮಾನ್ಯ ಜನರನ್ನು ವಿಐಪಿ ಎಂದು ಪರಿಗಣಿಸಿ ಅವರು ಸಲ್ಲಿಸುವ ಎಲ್ಲಾ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಒಂದೇ ದಿನದಲ್ಲಿ ಪೋಸ್ಟ್ ಮಾಡಲು ರಿಜಿಸ್ಟ್ರಿಗೆ ನಿರ್ದೇಶನ ನೀಡಿ ಎಂದು ಎಎಬಿ ಹೈಕೋರ್ಟ್ ಕ್ರಮವನ್ನು ಟೀಕಿಸಿದೆ. ಅಲ್ಲದೇ, ನ್ಯಾಯ ದೇಗುಲವು ಎಲ್ಲರಿಗೂ ಸಮಾನವಾಗಿರಬೇಕು. ವಿಐಪಿ ವ್ಯಕ್ತಿಗಳು ಕೂಡ ಜನ ಸಾಮಾನ್ಯರಂತೆ ತಮ್ಮ ಪ್ರಕರಣ ನಿಗದಿಯಾಗುವವರೆಗೆ ಕಾಯಬೇಕು ಎಂದು ಎಎಬಿ ಒತ್ತಾಯಿಸಿದೆ. ಹಾಗೆಯೇ, ಶಾಸಕ ವಿರೂಪಾಕ್ಷಪ್ಪ ಅವರ ಪ್ರಕರಣದಲ್ಲಿ ಆಗಿರುವ ಬೆಳವಣಿಗೆಗೆ ಎಎಬಿ ಆಘಾತ ಮತ್ತು ಕಳವಳವನ್ನು ವ್ಯಕ್ತಪಡಿಸುತ್ತದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.
ಅಧ್ಯಕ್ಷರ ಸ್ಪಷ್ಟನೆ: ಪ್ರಕರಣದ ಕುರಿತಂತೆ ಸ್ಪಷ್ಟನೆ ನೀಡಿರುವ ಎಎಬಿ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಅವರು, “ಇದೇ ರೀತಿಯ ಸವಲತ್ತು ಸಾಮಾನ್ಯ ವ್ಯಕ್ತಿಗೆ ಸಿಗುತ್ತದೆಯೇ? ಹಿಂದಿನ ದಿನ ದಾಖಲಿಸಿದ ಕೇಸ್ ಮರುದಿನವೇ ನ್ಯಾಯಾಲಯದ ಮುಂದೆ ಬರುತ್ತದೆಯೇ? ಸಾಮಾನ್ಯ ವ್ಯಕ್ತಿಗೆ ಇಲ್ಲದ ಸೌಲಭ್ಯ ರಾಜಕೀಯ ವ್ಯಕ್ತಿಗಳಿಗೆ ನೀಡುವುದು ಸರಿಯೇ? ಅವರು ದಿನದ ಕೊನೆಯಲ್ಲಿ ಅರ್ಜಿ ವಿಚಾರಣೆ ಕೋರಿ ಮೆಮೋ ಸಲ್ಲಿಸಿರಬಹುದು. ಆದರೆ, ಇಂತಹುದೇ ಮೆಮೋವನ್ನು ಸಾಮಾನ್ಯ ವ್ಯಕ್ತಿ ಸಲ್ಲಿಸಿದರೆ ಅದನ್ನು ಕೂಡ ಇದೇ ರೀತಿ ಪರಿಗಣಿಸಲಾಗುತ್ತದೆಯೇ? ಎಂದು ವಿವೇಕ್ ಸುಬ್ಬಾರೆಡ್ಡಿ ಪ್ರಶ್ನಿಸಿದ್ದಾರೆ. ಅಲ್ಲದೇ, ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೋರಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಹಾಗೂ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದೇವೆ” ಎಂದು ಲಾ ಟೈಮ್ ಗೆ ಸ್ಪಷ್ಟನೆ ನೀಡಿದ್ದಾರೆ.
ಪ್ರಕರಣದ ಹಿನ್ನೆಲೆ: ಚನ್ನಗಿರಿಯ ಶಾಸಕ ಕೆ. ವಿರೂಪಾಕ್ಷಪ್ಪ ಮಾಡಾಳ್ ಅವರು ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆಗೆ (ಕೆಎಸ್‌ಡಿಎಲ್) ಕಚ್ಚಾ ಸಾಮಗ್ರಿ ಪೂರೈಸುವ ಗುತ್ತಿಗೆಯ ಕಾರ್ಯಾದೇಶ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿರುವ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಕ್ಷಿಪ್ರವಾಗಿ ಹೈಕೋರ್ಟ್ ಮುಂದೆ ನಿಗದಿ ಮಾಡಲಾಗಿತ್ತು. ಬಳಿಕ ಹೈಕೋರ್ಟ್ ಏಕಸದಸ್ಯ ಪೀಠ ಜಾಮೀನು ಮಂಜೂರು ಮಾಡಿತ್ತು.